ಗಿಡಗಳ ಪೋಷಣೆಯಿಂದ ನೀರಿನ ಸಮಸ್ಯೆ ನಿವಾರಣೆ : ನ್ಯಾಯಾಧೀಶೆ ಶರ್ಮಿಳಾ ಎಸ್.

| Published : Mar 26 2024, 01:00 AM IST

ಸಾರಾಂಶ

ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಜಿಲ್ಲಾಡಳಿತ, ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಪರಿಸರ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಭವಿಷ್ಯದಲ್ಲಿ ಉದ್ಭವಿಸುವ ನೀರಿನ ಸಮಸ್ಯೆ ತಡೆಗಟ್ಟಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಹೇಳಿದರು.

ಅವರು ನಗರದ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಜಿಲ್ಲಾಡಳಿತ, ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜಲ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ಅನಗತ್ಯವಾಗಿ ನೀರನ್ನು ಪೋಲು ಮಾಡದೆ, ಮಿತವಾಗಿ ಬಳಸಬೇಕು ಎಂದ ಅವರು, ಅತೀ ಹೆಚ್ಚು ನೀರಿನಿಂದ ಆವೃತವಾಗಿದ್ದ ನಮ್ಮ ಪರ್ಯಾವರಣ ಇಂದು ನೀರಿನ ಅಭಾವವನ್ನು ಅನುಭವಿಸುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದೊಂದು ದಿನ ತೀವ್ರತರವಾದ ಜೀವಜಲದ ಅಭಾವ ಎದುರಿಸಬೇಕಾಗುತ್ತದೆ. ಹಾಗಾಗಿ ಇಂದಿನಿಂದಲೇ ನೀರಿನ ಮಿತವಾದ ಬಳಕೆಯನ್ನು ನಾವು ರೂಢಿಸಿಕೊಳ್ಳಬೇಕು ಎಂದರು.

ನಗರಸಭಾ ಪೌರಾಯುಕ್ತ ರಾಯಪ್ಪ ಮಾತನಾಡಿ, ಉಡುಪಿ ನಗರಸಭೆಗೆ ದೂರದ ಬಜೆ ಡ್ಯಾಂನಿಂದ ನೀರನ್ನು ಪಂಪ್ ಮಾಡುವ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಈ ಕುಡಿಯುವ ನೀರನ್ನು ಕಾರು, ಬೈಕ್‌ಗಳನ್ನು ತೊಳೆಯಲು ಬಳಸಲಾಗುತ್ತಿದೆ. ಈ ರೀತಿ ನೀರನ್ನು ಅನಗತ್ಯವಾಗಿ ಪೋಲು ಮಾಡುವುದು ಕಂಡುಬಂದಲ್ಲಿ ಅಂಥವರಿಗೆ ದಂಡ ವಿಧಿಸಿ, ನೀರಿನ ಸಂಪರ್ಕವನ್ನು ಕಡಿತಗೊಳಸಲಾಗುವುದು ಎಂದರು.

ಕಾಲೇಜು ಪ್ರಾಂಶುಪಾಲ ಡಾ. ರಾಮು ಎಲ್. ಮಾತನಾಡಿ, ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ಒಂದನ್ನೊಂದು ಅವಲಂಬಿಸಿಕೊಂಡಿದ್ದು, ಇಂದು ಪ್ರಾಣಿ ಪಕ್ಷಿಗಳು ಹೇಗೆ ನಶಿಸುತ್ತಿವೆಯೋ ಮುಂದೊಂದು ದಿನ ಮಾನವರೂ ನಶಿಸುತ್ತಾರೆ. ಹಾಗಾಗಿ ನಾವು ಹಾಗೂ ನಮ್ಮ ಮುಂದಿನ ಪೀಳಿಗೆ ಪರಿಶುದ್ಧವಾದ ಗಾಳಿ, ಬೆಳಕು ಪಡೆಯಬೇಕಾದರೆ ನಮ್ಮ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದರು.

ಮಣಿಪಾಲದ ಎಂ.ಐ.ಟಿ. ಜಿಯೋಲಜಿ ಪ್ರೊಫೆಸರ್ ಕೆ. ಬಾಲಕೃಷ್ಣ ಅವರು ವಿಶ್ವ ಜಲ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಎಇಇ ಯಶವಂತ್ ಪ್ರಭು, ಇಂಜಿನಿಯರ್ ಗಳಾದ ಚೇತನ್, ಸತ್ಯ, ಕಾರ್ತಿಕ್, ಕಾಲೇಜು ಆಡಳಿತಾಧಿಕಾರಿ ಡಾ. ಎ.ಪಿ.ಭಟ್, ಉಡುಪಿ ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕರಾದ ಮನೋಹರ್, ಹರೀಶ್ ಬಿಲ್ಲವ ಹಾಗೂ ಸುರೇಂದ್ರ ಹೋಬಳಿಕರ್, ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹ ಕೆ.ಎಸ್ ನಿರೂಪಿಸಿದರು.