ಕೌಶಲ್ಯ ತರಬೇತಿ ಇಲಾಖೆಯಿಂದ ಯುವ ಜನತೆಯ ಕೌಶಲ್ಯ ವೃದ್ಧಿಸುವ ಮೂಲಕ ವಿವಿಧ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ

ಉದ್ಯೋಗೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ

ಕನ್ನಡಪ್ರಭ ವಾರ್ತೆ ಹೊನ್ನಾವರ

ಕೌಶಲ್ಯ ತರಬೇತಿ ಇಲಾಖೆಯಿಂದ ಯುವ ಜನತೆಯ ಕೌಶಲ್ಯ ವೃದ್ಧಿಸುವ ಮೂಲಕ ವಿವಿಧ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ತಾಲೂಕಿನ ಗೇರುಸೊಪ್ಪದ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ಸಂಸ್ಕೃತಿ ಕುಂಭ-ಮಲೆನಾಡ ಉತ್ಸವ-2026ರ ನಾಲ್ಕನೇ ದಿನ ಸೋಮವಾರ ನಡೆದ ಉದ್ಯೋಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿರುದ್ಯೋಗ ಜಾಗತಿಕ ಮಟ್ಟದ ಸಮಸ್ಯೆಯಾಗಿದ್ದು, ಇದರ ಪರಿಹಾರ ಸವಾಲಿನ ಕೆಲಸವಾಗಿದೆ. ಯುವ ಜನತೆಯಲ್ಲಿ ಕೌಶಲ್ಯದ ಕೊರತೆ ನಿರುದ್ಯೋಗ ಹೆಚ್ಚಲು ಬಹು ದೊಡ್ಡ ಕಾರಣವಾಗಿದೆ. ವೃತ್ತಿಗೆ ಸಮಾನವಾದ ಕೌಶಲ್ಯ ರೂಪಿಸುವ ಕೆಲಸ ಪಠ್ಯದ ಮೂಲಕ ಆಗಬೇಕಿದೆ. ಚಿನ್ನದ ಪದಕದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳು ಉದ್ಯೋಗ ಸಂದರ್ಶನದಲ್ಲಿ ವಿಫಲರಾಗುತ್ತಿರುವುದು ಕಂಡು ಬರುತ್ತಿದೆ. ಯುವ ಜನತೆಯಲ್ಲಿ ಕೌಶಲ್ಯ ಬೆಳೆಸಲು ಕೇಂದ್ರ ಸರಕಾರ ಕೌಶಲ್ಯ ತರಬೇತಿ ಇಲಾಖೆ ರಚಿಸಿದೆ. ಆ ಬಳಿಕ ದೇಶದಲ್ಲಿ ಕೌಶಲ್ಯ ಯುಗ ಆರಂಭಗೊಂಡಿದೆ. ಈ ಇಲಾಖೆಯಿಂದ ಕೌಶಲ್ಯ ವೃದ್ಧಿಗೊಳಿಸಿ ಉದ್ಯೋಗ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದೆ. ಇದೇ ರೀತಿ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು. ಧಾರ್ಮಿಕ ಕ್ಷೇತ್ರದಲ್ಲಿ ಯುವ ಜನತೆಗಾಗಿ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಪ್ರಶಂಸನೀಯವಾಗಿದೆ‌. ಸಂಸ್ಕೃತಿಯನ್ನು ಉಳಿಸಲು ಸರಕಾರ ಮಾಡಬೇಕಾದ ಕೆಲಸವನ್ನು ಮಾರುತಿ ಗುರೂಜಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಅಧ್ಯಕ್ಷತೆ ಮತ್ತು ಸಾನಿಧ್ಯ ವಹಿಸಿ ಉಪದೇಶ ನೀಡಿದರು. ಸಾಹಿತಿ ಸಿದ್ದು ಯಾಪಲಪರವಿ ಉಪಸ್ಥಿತರಿದ್ದರು.