ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬ್ಯಾಬಾ–೧ ಶಾಲೆಯ ಶಿಕ್ಷಕರಾದ ಸೋಮನಾಯಕ್ ಅವರು ರಾಜ್ಯಮಟ್ಟದ ಪ್ರತಿಷ್ಠಿತ “ಜ್ಯೋತಿಬಾ ಫುಲೆ ಪ್ರಶಸ್ತಿ”ಗೆ ಭಾಜನರಾಗಿದ್ದು, ಜಿಲ್ಲೆಯ ಶಿಕ್ಷಣ ವಲಯದಲ್ಲಿ ಸಂತಸ ಮೂಡಿಸಿದ್ದಾರೆ.
ಸೋಮನಾಯಕ್ ಅವರು ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಐದಳ್ಳ ಕಾವಲು ಗ್ರಾಮದ ಶಿವನಾಯಕ್ ಹಾಗೂ ಚಂದ್ರಿಬಾಯಿ ದಂಪತಿಯ ಪುತ್ರರಾಗಿದ್ದು, ಬಾಲ್ಯದಿಂದಲೇ ವಿದ್ಯಾಭ್ಯಾಸದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ ಆದ್ಯತೆ ನೀಡುತ್ತಾ, ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಅವರು ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಹಾಸನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿಯಾಗಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಜಿಲ್ಲಾ ಎಸ್‌ಸಿ ಮತ್ತು ಎಸ್‌ಟಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಸನ ಜಿಲ್ಲಾ ಘಟಕವು ಅವರನ್ನು ಈ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಫೆಬ್ರವರಿ 28ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುವ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ, ಧನ್ಯತಾ ಸಮಾರಂಭ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಸಿದ್ದರಾಮಯ್ಯ,ಡಿ.ಕೆ. ಶಿವಕುಮಾರ್ ಹಾಗೂ ಮಧು ಬಂಗಾರಪ್ಪ ಸೇರಿದಂತೆ ರಾಜ್ಯದ ಪ್ರಮುಖ ಗಣ್ಯರು, ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ ನುಗ್ಗಲಿ, ಗೌರವಾಧ್ಯಕ್ಷ ಕೆ. ನಾಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಾಸನ ಜಿಲ್ಲೆಯ ಪದಾಧಿಕಾರಿಗಳು ಮತ್ತು ನಾಡಿನ ಸಮಸ್ತ ಶಿಕ್ಷಕರು ಉಪಸ್ಥಿತರಿರುವರು.ಈ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗಿರುವ ಸೋಮನಾಯಕ್ ಅವರಿಗೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲಾಧ್ಯಕ್ಷ ಡಾ. ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿನಾಕಲಗೂಡು, ಕಲ್ಲಹಳ್ಳಿ ಹರೀಶ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಹರಳಹಳ್ಳಿ ರಂಗಸ್ವಾಮಿ, ದಿಬ್ಬೂರು ರಮೇಶ್, ಗುಡುಗನಹಳ್ಳಿ ಮಂಜುನಾಥ, ಪುಟ್ಟಣ್ಣ ನಂದಕುಮಾರ್ ಸೇರಿದಂತೆ ಅನೇಕರು ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.ಸೋಮನಾಯಕ್ ಅವರ ಈ ಸಾಧನೆ ಹಾಸನ ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದು, ಶಿಕ್ಷಕರಿಗೆ ಮತ್ತಷ್ಟು ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.