1 ವರ್ಷದ ಸೋಮಣ್ಣ ವನವಾಸ ಅಂತ್ಯ

| Published : Jun 10 2024, 12:48 AM IST / Updated: Jun 10 2024, 12:35 PM IST

ಸಾರಾಂಶ

ರಾಜ್ಯದ ಮಾಜಿ ಸಚಿವ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವಿ.ಸೋಮಣ್ಣ ಅವರ ಒಂದು ವರ್ಷದ ರಾಜಕೀಯ ವನವಾಸ ಅಂತ್ಯಗೊಂಡಿದ್ದು, ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಬೆನ್ನಲ್ಲೇ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ.

ವಿಜಯ್ ಮಲಗಿಹಾಳ

 ಬೆಂಗಳೂರು:  ರಾಜ್ಯದ ಮಾಜಿ ಸಚಿವ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವಿ.ಸೋಮಣ್ಣ ಅವರ ಒಂದು ವರ್ಷದ ರಾಜಕೀಯ ವನವಾಸ ಅಂತ್ಯಗೊಂಡಿದ್ದು, ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಬೆನ್ನಲ್ಲೇ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ.

ಕೆಲವು ತಿಂಗಳುಗಳ ಹಿಂದೆ ಇನ್ನೇನು ಕಾಂಗ್ರೆಸ್‌ಗೆ ವಲಸೆ ಹೋಗಬೇಕು ಎಂದುಕೊಂಡು ಬಹುತೇಕ ಒಂದು ಕಾಲು ಹೊರಗಿಟ್ಟಿದ್ದ ಸೋಮಣ್ಣ ಅವರಿಗೆ ಈಗ ಬಿಜೆಪಿಯಲ್ಲೇ ಅದೃಷ್ಟ ದೇವತೆ ಮನೆ ಬಾಗಿಲಿಗೆ ಬಂದಂತಾಗಿದೆ.

ಈ ಬಾರಿ ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆ ಬಲವಾಗಿ ಕೇಳಿಬಂದಿತ್ತು. ಅಲ್ಲದೆ, ಹಿರಿಯ ಸಂಸದರಾಗಿ ಅದೇ ಸಮುದಾಯದಿಂದ ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್‌, ಶಿವಮೊಗ್ಗದ ಬಿ.ವೈ.ರಾಘವೇಂದ್ರ ಅವರೂ ಇದ್ದರು.

ಆದರೆ, ಅವರೆಲ್ಲರನ್ನೂ ಬಿಟ್ಟು ತುಮಕೂರಿನಿಂದ ಮೊದಲ ಬಾರಿಗೆ ಸಂಸದರಾಗಿ ಚುನಾಯಿತರಾದ ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ಹೈಕಮಾಂಡ್‌ ಅಚ್ಚರಿ ಮೂಡಿಸಿದೆ.

ಕೇವಲ ಸಮುದಾಯವನ್ನು ಪ್ರತಿನಿಧಿಸಿದರೆ ಸಾಲದು. ಸಮುದಾಯದ ಸಂಘಟನೆಯಲ್ಲಿ ಪ್ರಭಾವ ಹೊಂದಿರುವವರು ಮತ್ತು ಆ ಸಮುದಾಯದ ಮೇಲೆ ಹಿಡಿತ ಹೊಂದುವ ಸಾಮರ್ಥ್ಯ ಇರಬೇಕು ಎಂಬ ನಿಲುವನ್ನು ಬಿಜೆಪಿ ವರಿಷ್ಠರು ಹೊಂದಿರಬಹುದು ಎಂಬ ಮಾತು ಪ್ರಸ್ತಾಪವಾಗಿದೆ.

ಮೇಲಾಗಿ ಸೋಮಣ್ಣ ಅವರಿಗೆ ಅನ್ಯಾಯವಾಗಿದೆ ಎಂಬ ಮಾತು ಕೂಡ ಸಾರ್ವತ್ರಿಕವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರು ತಾವು ಪ್ರತಿನಿಧಿಸುತ್ತಿದ್ದ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಬಿಟ್ಟುಕೊಟ್ಟು ಪಕ್ಷದ ವರಿಷ್ಠರ ಅಣತಿಯಂತೆ ಚಾಮರಾಜನಗರ ಮತ್ತು ವರುಣ ಕ್ಷೇತ್ರಗಳಿಂದ ಸ್ಪರ್ಧೆಗಿಳಿದರು. ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಕಷ್ಟ ಎಂಬುದು ಗೊತ್ತಿದ್ದರೂ ಪಕ್ಷದ ನಾಯಕರ ಸೂಚನೆಯನ್ನು ಧಿಕ್ಕರಿಸುವುದು ಬೇಡ ಎಂದು ಶಿರಸಾವಹಿಸಿ ಪಾಲಿಸಿದರು. ಆದರೆ, ಎರಡರಲ್ಲೂ ಸೋಲುಂಟಾಯಿತು.

ಸೋಲಿನಿಂದ ಕಂಗೆಟ್ಟ ಸೋಮಣ್ಣ ಅವರು ತಮ್ಮ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಆರೋಪಿಸಿ ಪಕ್ಷದ ವರಿಷ್ಠರಿಗೂ ದೂರು ನೀಡಿದರು. ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ಅದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆಯನ್ನೂ ವರಿಷ್ಠರ ಬಳಿ ಇಟ್ಟ ಸೋಮಣ್ಣ ಬಳಿಕ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ ಬಳಿಕ ಬೇಸರಗೊಂಡಿದ್ದರು. ಮುಂದೆ ರಾಜ್ಯಸಭಾ ಚುನಾವಣೆಯಲ್ಲೂ ತಮಗೆ ಅವಕಾಶ ನೀಡುವಂತೆ ಬೇಡಿಕೆ ಇಟ್ಟರೂ ಪ್ರಯೋಜನವಾಗಲಿಲ್ಲ.

ಅಂತಿಮವಾಗಿ ತುಮಕೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದರು. ಅಲ್ಲಿನ ಹಾಲಿ ಸಂಸದ ಜಿ.ಎಸ್.ಬಸವರಾಜು ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ವರಿಷ್ಠರು ಈ ನಿರ್ದೇಶನ ನೀಡಿದ್ದರು. ಅಷ್ಟರಲ್ಲಿ ಸೋಮಣ್ಣ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೊಂದಿಗೆ ಮುನಿಸು ಅಂತ್ಯಗೊಳಿಸಿ ರಾಜಿ ಮಾಡಿಕೊಂಡರು.

ಆದರೆ, ತುಮಕೂರು ಪ್ರವೇಶ ಸುಲಭವಾಗಿರಲಿಲ್ಲ. ಸ್ಥ‍ಳೀಯ ಮುಖಂಡರು, ಅದರಲ್ಲೂ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮೊದಲಾದವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟರು. ಅದೆಲ್ಲವನ್ನೂ ನಿಭಾಯಿಸಿದ ಸೋಮಣ್ಣ ಅವರು ಅಂತಿಮವಾಗಿ ಗೆಲುವು ಸಾಧಿಸಿದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಾಜ್ಯ ಖಾತೆ ಸ್ಥಾನಮಾನದ ಸಚಿವ ಸ್ಥಾನವನ್ನೂ ಪಡೆದುಕೊಂಡರು. ಕೊನೆಗೂ ಸೋಮಣ್ಣ ಅವರ ಕಾರ್ಯವೈಖರಿಯನ್ನು ಬಿಜೆಪಿ ಹೈಕಮಾಂಡ್ ಗುರುತಿಸಿದಂತಾಗಿದೆ.