ಹಾವೇರಿ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಸಂಬಂಧಿಸಿದ ಆಸ್ತಿಯನ್ನು ಸಮಾಜದ ಮುಖಂಡರಾದ ಸೋಮಣ್ಣ ಬೇವಿನಮರದ ಅವರು ತಮ್ಮ ಹೆಸರಿಗೆ ಖರೀದಿ ಮಾಡಿಸಿಕೊಂಡಿರುವುದು ಖಂಡನೀಯ. ಕೂಡಲೇ ಶ್ರೀಮಠದ ಆಸ್ತಿಯನ್ನು ಹರಿಹರ ಪೀಠಕ್ಕೆ ಮರಳಿಸುವ ಮೂಲಕ ತಮ್ಮ ಘನತೆ, ಗೌರವ ಉಳಿಸಿಕೊಳ್ಳಬೇಕು ಎಂದು ಸಮಾಜದ ಮುಖಂಡ, ವಕೀಲ ಸೋಮಶೇಖರ ಕೋತಂಬರಿ ಆಗ್ರಹಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿ, ಹರಿಹರ ಪಂಚಮಸಾಲಿ ಪೀಠದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲ ಬೆಳವಣಿಗೆಗಳು ಸಮಾಜದಲ್ಲಿ ತೀವ್ರ ನಿರಾಸೆ ಮೂಡಿಸಿವೆ. ಕೆಲವರು ತಮ್ಮ ತಪ್ಪು ತಿಳವಳಿಕೆಯಿಂದ ಬೀದಿಯಲ್ಲಿ ಲೆಕ್ಕ ಕೊಡಿ ಚಳವಳಿ ನಡೆಸುತ್ತಿರುವುದು ಸರಿಯಲ್ಲ. ಇದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.
ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಹರಿಹರ ಪೀಠದ ಟ್ರಸ್ಟಿನ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವವರ ಕೈ ಮೊದಲು ಶುದ್ಧವಾಗಿರಬೇಕು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಮಾಜದ ಅಭಿವೃದ್ಧಿ ಕಾರ್ಯಗಳಿಗಾಗಿ 5 ಕೋಟಿ ಮೌಲ್ಯದ ಎರಡು ಎಕರೆ ಜಮೀನು ಹಿಡಿದುಕೊಟ್ಟಿದ್ದರು. ಆ ಜಮೀನು ಸಿದ್ದಲಿಂಗ ಸ್ವಾಮೀಜಿ ಅವರ ಹೆಸರಲ್ಲಿ ಖರೀದಿಯಾಗಿತ್ತು. ಸಿದ್ದಲಿಂಗ ಸ್ವಾಮೀಜಿ ನಂತರ ಶ್ರೀ ಮಠದ ಟ್ರಸ್ಟ್ ಹೆಸರಿಗೆ ಆಗಬೇಕಿದ್ದ ಜಮೀನನ್ನು ಆಡಳಿತ ಮಂಡಳಿ ಅಧ್ಯಕ್ಷ ಡಾ. ರಾಜಕುಮಾರ ಹಸ್ತಕ್ಷೇಪದಿಂದಾಗಿ ಸ್ವಾಮಿಲಿಂಗ ಉರ್ಫ್ ಸೋಮಣ್ಣ ಮಲ್ಲೇಶಪ್ಪ ಬೇವಿನಮರದ ಹೆಸರಿಗೆ ಕಾನೂನುಬಾಹಿರವಾಗಿ ಖರೀದಿ ಮಾಡಿಸಿಕೊಂಡಿದ್ದಾರೆ. ಇದನ್ನು ಸಮಾಜದದವರು ಕ್ಷಮಿಸಲು ಸಾಧ್ಯವಿಲ್ಲ, ಈ ಕೂಡಲೇ ಶ್ರೀಮಠದ ಆಸ್ತಿಯನ್ನು ಪೀಠಕ್ಕೆ ಮರಳಿಸಬೇಕು. ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯ ಧರ್ಮದರ್ಶಿ ಪಿ.ಡಿ. ಶಿರೂರ ಮಾತನಾಡಿ, ಯಾವುದೇ ಸಾರ್ವಜನಿಕ ಸಂಸ್ಥೆಗಳಲ್ಲಿ ಪರ -ವಿರೋಧ ಚರ್ಚೆಗಳು ಸಾಮಾನ್ಯವಾದರೂ ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದು ಸಾಧ್ಯವಿಲ್ಲ ಎಂಬ ಸತ್ಯವನ್ನು ಚಳವಳಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಲೆಕ್ಕ ಕೇಳುತ್ತಿರುವ ನಾಯಕರು ಬಹಿರಂಗ ಹೋರಾಟ ಕೈ ಬಿಟ್ಟು, ಟ್ರಸ್ಟಿಗಳ ಜತೆಗೆ ಬಂದರೆ ತಮ್ಮೆಲ್ಲ ಪ್ರಶ್ನೆಗಳಿಗೆ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರಿಂದ ಸಮರ್ಪಕ ಉತ್ತರ ಹಾಗೂ ಲೆಕ್ಕ ನೀಡುವ ವ್ಯವಸ್ಥೆ ಮಾಡುತ್ತೇವೆ. ಈಗಾಗಲೇ ಹಲವಾರು ಬಾರಿ ಲೆಕ್ಕ ಒಪ್ಪಿಸಿರುವುದನ್ನು ಗಮನಿಸಿ, ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಉಪಾಧ್ಯಕ್ಷ ಶಂಕರ್ ಬಿಸರಹಳ್ಳಿ, ಸದಾನಂದ ಹಾದಿಮನಿ, ಕೆ.ಎಂ. ವಿಜಾಪುರ, ಶಿವಯೋಗಿ ಅರಿಶಿಣದ, ಸೋಮಶೇಖರ ಎಣ್ಣಿಯವರ, ಈಶ್ವರಗೌಡ ಪಾಟೀಲ, ಬಸವರಾಜ ಹಾವಕ್ಕನವರ ಸೇರಿ ಇತರರು ಉಪಸ್ಥಿತರಿದ್ದರು.ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಹರಿಹರ ಪೀಠಕ್ಕೆ 25ಲಕ್ಷ ರು. ಮೊತ್ತದ ಚೆಕ್ ಕೊಟ್ಟಿದ್ದೇನೆ. ಆ ಹಣ ಯಾವುದಕ್ಕೆ ವಿನಿಯೋಗಿಸಲಾಗಿದೆ ಎಂಬ ಲೆಕ್ಕ ಇಲ್ಲ ಎಂದು ಹೇಳಿದ್ದಾರೆ. ಸೋಮಣ್ಣ ಅವರು ಯಾವಾಗ 25ಲಕ್ಷ ರು. ಚೆಕ್ ಕೊಟ್ಟಿದ್ದಾರೆ. ಅದು ಕಲೆಕ್ಷನ್ ಆಗಿದೆಯೋ ಅಥವಾ ಬೌನ್ಸ್ ಆಗಿದೆಯೋ ಎಂಬುದರ ದಾಖಲೆ ಬಿಡುಗಡೆ ಮಾಡಲಿ ಎಂದು ವಕೀಲ ಸೋಮಶೇಖರ ಕೋತಂಬರಿ ಹೇಳಿದರು.