ಸಾರಾಂಶ
ಕೆಲವರು ರಾಜಕಾರಣ ಸಲುವಾಗಿ ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಸತ್ತಾಗ ಮಣ್ಣು ಮಾಡಲು ಜಾಗ ಕೊಡದವರು ಈಗ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಿರುವುದು ಖಂಡನೀಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ರಾಣಿಬೆನ್ನೂರು: ಕೆಲವರು ರಾಜಕಾರಣ ಸಲುವಾಗಿ ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಸತ್ತಾಗ ಮಣ್ಣು ಮಾಡಲು ಜಾಗ ಕೊಡದವರು ಈಗ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಿರುವುದು ಖಂಡನೀಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ಇಲ್ಲಿಯ ವಾಗೀಶ ನಗರದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಸಂವಿಧಾನ ಸನ್ಮಾನ ಅಭಿಯಾನದ ಅಂಗವಾಗಿ ಏರ್ಪಡಿಸಲಾಗಿದ್ದ ಭೀಮ ಶಕ್ತಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತರನ್ನು ಓಟ್ ಬ್ಯಾಂಕ್ ಮಾಡಬೇಕೆಂಬ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ನೀವುಗಳು ಕಿವಿಗೊಡಬೇಡಿ. ಚಾಮರಾಜನಗರ ಹಾಗು ಮಂಗಳೂರಿನಲ್ಲಿ ಗೋವು ಮಾತೆ ಮೇಲೆ ಹಲ್ಲೆ ಮಾಡುವ ನೀಚ ಕೃತ್ಯ ಎಸಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಹಿಂದೂಗಳು ಒಗ್ಗಟ್ಟಾಗಿ ಮುನ್ನಡೆಯಬೇಕು. ಬಾಬಾ ಸಾಹೇಬ ಅಂಬೇಡ್ಕರ್ ಸಂವಿಧಾನ ಹಿಂದುಳಿದವರಿಗೆ ಮಾತ್ರವಲ್ಲ ನಮ್ಮಂತ ಸಾಮಾನ್ಯ ವ್ಯಕ್ತಿಗಳನ್ನು ಕೂಡ ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದೆ. ಮುಂದೆ ಬರುವ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಬೇಕು ಎಂದರು.ನಮ್ಮಲ್ಲಿ ಜಾತಿಯಿಲ್ಲ, ನಾವೆಲ್ಲಾ ಒಂದೆ ಯಾರು ಕೂಡ ಭೇದ ಭಾವವಿಲ್ಲದೆ ಮುನ್ನಡೆಯಬೇಕು. ಉತ್ತರ ಪ್ರದೇಶದ ಪ್ರಯಾಗರಾಜನಲ್ಲಿ ಯಾವುದೇ ಜಾತಿ ಭೇದ ಭಾವವಿಲ್ಲದೆ ಮಹಾಕುಂಭಮೇಳ ನಡೆಯುತ್ತಿದೆ. ಜನರ ಮಾತಿಗೆ ಕಿವಿ ಕೊಡಬೇಡಿ, ಅಧಿಕಾರ ದೊಡ್ಡದಲ್ಲ, ಪ್ರೀತಿ, ವಿಶ್ವಾಸ, ಬಾಂಧವ್ಯ ದೊಡ್ಡದಾಗಿದ್ದು ಅದಕ್ಕೆ ಬೆಲೆ ಕಟ್ಟಲಾಗದು. ಒಳ್ಳೆಯ ಕೆಲಸ, ವಿಚಾರಗಳು ಶಾಶ್ವತವಾಗಿ ಉಳಿಯುತ್ತದೆ ಎಂದರು. ನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, ಕಳೆದ ಚುನಾವಣೆಯಲ್ಲಿ ಒಳ ಮೀಸಲಾತಿ ಅರಿವು ಇಲ್ಲದೆ ನಾವು ಸೋತಿದ್ದೇವೆ. ಈ ಸರ್ಕಾರದಿಂದ ಬೆಲೆ ಏರಿಕೆ ಮಾಡಲಾಗಿದ್ದು ಇದರಿಂದ ಜನರು ತೊಂದರೆಗೀಡಾಗಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಅನೇಕ ಯೋಜನೆ ನೀಡಿದ್ದಾರೆ. ಅಂಬೇಡ್ಕರ್ ಅವರಿಗೆ ಬೆಲೆ ಕೊಟ್ಟಿದ್ದು ಬಿಜೆಪಿ, ಸರ್ಕಾರ ಯಾವ ರೀತಿ ಅನುಕೂಲ ಮಾಡುತ್ತದೆ ಅನ್ನುವ ಪರಿಜ್ಞಾನ ಬೆಳೆಸಿಕೊಳ್ಳಬೇಕು. ಬೇರೆ ಪಕ್ಷದವರು ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡುತ್ತ ಪ್ರತಿಭಟನೆ ಮಾಡುತ್ತಿದ್ದು ಇದಕ್ಕೆ ಮನ್ನಣೆ ನೀಡಬೇಡಿ ಎಂದರು. ನಗರ ಘಟಕ ಅಧ್ಯಕ್ಷ ರಮೇಶ ಗುತ್ತಲ, ಗ್ರಾಮೀಣ ಘಟಕ ಅಧ್ಯಕ್ಷ ಪರಮೇಶ ಗೂಳಣ್ಣನವರ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಬಿಜೆಪಿ ಕಾರವಾರ ಜಿಲ್ಲಾ ಉಸ್ತುವಾರಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಚೋಳಪ್ಪ ಕಸವಾಳ, ಎಸ್.ಎಸ್.ರಾಮಲಿಂಗಣ್ಣನವರ, ಮೈಲಪ್ಪ ಗೋಣಿಬಸಮ್ಮನವರ, ಸಿದ್ದು ಚಿಕ್ಕಬಿದರಿ, ಬಸವರಾಜ ಹುಲ್ಲತ್ತಿ, ಅನಿಲಕುಮಾರ ಸಿದ್ದಾಳಿ, ಅಮೋಘ ಬಾದಾಮಿ, ನಾಗರಾಜ ಬಣಕಾರ, ನವೀನ ಅಡ್ಡಿ, ವಿಜಯಕುಮಾರ ನಲವಾಗಲ, ಮಲ್ಲಿಕಾರ್ಜುನ ಮಸಿಯಪ್ಪನವರ, ಪ್ರೇಮ ಅಟವಾಳಗಿ, ರಮೇಶ ನಾಯಕ, ಮಂಜುನಾಥ ಕಬ್ಬಿಣದ, ವಿಜಯ ಕೆಳಗಿನಮನಿ, ಮೈಲಪ್ಪ ಗೋಣಿಬಸಮ್ಮನವರ, ಮೈಲಪ್ಪ ಹನುಮಜ್ಜರ, ಶ್ರೀಕಾಂತ ಸಣ್ಣಮನಿ, ರಮೇಶ ನಾಯಕ, ಸಂಜೀವ ಮಸಿಯಪ್ಪನವರ, ಹನುಮಂತ ವರವಜ್ಜಿ, ಲಕ್ಷ್ಮಣ ನಾಯಕ ಮತ್ತಿತರು ಇದ್ದರು.