ಕೆಲ ಹಬ್ಬಗಳಿಂದ ಮೂಢ ನಂಬಿಕೆಗೆ ಪ್ರಚೋದನೆ

| Published : Jul 30 2025, 01:27 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ಹೋಗಲಾಡಿಸಲು ಬಸವ ಪಂಚಮಿಯಂದು ಹಾಲನ್ನು ರೋಗಿಗಳಿಗೆ ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ಹೋಗಲಾಡಿಸಲು ಬಸವ ಪಂಚಮಿಯಂದು ಹಾಲನ್ನು ರೋಗಿಗಳಿಗೆ ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಸವಸೈನ್ಯ ಬಸವ ಪಂಚಮಿ ಹಬ್ಬದಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರೋಗಿಗಳಿಗೆ ಹಾಲು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆ ಕೊಟ್ಟರೆ ಅದು ಅಮೃತವಾಗುತ್ತದೆ. ಈ ಕುರಿತು ಜನರು ಚಿಂತಿಸಬೇಕು. ಬಡ ಮಕ್ಕಳು, ಅನಾಥರು ಹಾಗೂ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ಹಂಚುವ ಮೂಲಕ ರಾಷ್ಟ್ರೀಯ ಬಸವಸೈನ್ಯ ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ತಾಲೂಕ ಅಧ್ಯಕ್ಷ ಸಂಜು ಬಿರಾದಾರ, ಮುಖಂಡರಾದ ಸಂಗಮೇಶ ಓಲೇಕಾರ, ಶ್ರೀಕಾಂತ ಕೊಟ್ರಶೆಟ್ಟಿ, ರವಿ ರಾಠೋಡ, ಸುನೀಲ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ, ಲಾಲು ಕೊರಬು, ಮಹೇಶ ಹಿರೇಕುರಬರ, ಸಂಗಮೇಶ ಜಾಲಗೇರಿ, ನಂದೀಶ ಪಾಟೀಲ, ಮಂಜು ಜಾಲಗೇರಿ, ಅರುಣ ಗೊಳಸಂಗಿ, ಮುತ್ತು ಮಿಣಜಗಿ, ಡಾ.ಸಾಬೀರ ಪಟೇಲ್, ಡಾ.ಬಸವರಾಜ ಮುತ್ತತ್ತಿ ಇತರರು ಇದ್ದರು.