ಕೆಲವು ಮಠಾಧೀಶರಿಗೆ ಬಿಜೆಪಿ, ಆರ್‌ಎಸ್‌ಎಸ್‌ ಫಂಡಿಂಗ್‌ ಆಗಿದೆ

| Published : Sep 24 2025, 01:03 AM IST

ಕೆಲವು ಮಠಾಧೀಶರಿಗೆ ಬಿಜೆಪಿ, ಆರ್‌ಎಸ್‌ಎಸ್‌ ಫಂಡಿಂಗ್‌ ಆಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮೀಜಿಗಳಿಗೆ ಫಂಡಿಂಗ್ ಆಗಿರುವುದರಿಂದಲೇ ಹಿಂದೂ ಅಂತ ಬರೆಸಲು ಒತ್ತಡವಿದೆ. ಆದ್ರೆ ಕೆಲವರು ವಿರೋಧ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಾತಿಗಣತಿ ಸಮೀಕ್ಷೆಯ ವಿಷಯದಲ್ಲಿ ಹೀಗೇ ಬರೆಸಬೇಕೆಂದು ಕೆಲವು ಮಠಾಧೀಶರುಗಳಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದಲೇ ಫಂಡಿಂಗ್ ಆಗಿದೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್ ಸಿಡಿಸಿದ್ದಾರೆ.

ಇಲಕಲ್ಲ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ದುಡ್ಡು ಕೊಟ್ಟು ಈ ರೀತಿ ಹೇಳಿ ಅಂತ ಹೇಳಿರುವ ಮಾಹಿತಿಯಿದೆ. ಯಾವ ಯಾವ ಮಠಾಧೀಶರು ಅಂತ ಹೇಳೋದಿಲ್ಲ. ಆದರೇ ಯಾರು ಒತ್ತಡಕ್ಕೆ ಮಣಿಯುತ್ತಾರೋ ಅವರಿಗೆ ಮಾತ್ರ ಫಂಡಿಂಗ್ ಆಗಿದೆ ಎಂದರು. ಸ್ವಾಮೀಜಿಗಳಿಗೆ ಫಂಡಿಂಗ್ ಆಗಿರುವುದರಿಂದಲೇ ಹಿಂದೂ ಅಂತ ಬರೆಸಲು ಒತ್ತಡವಿದೆ. ಆದ್ರೆ ಕೆಲವರು ವಿರೋಧ ಮಾಡಿದ್ದಾರೆ. ಹುಟ್ಟಿದ್ರೂ ಇಲ್ಲೆ, ಸತ್ರೂ ಇಲ್ಲೆ ಎಂದಿದ್ದಾರೆ. ನಾನೂ ಅಷ್ಟೇ, ಗಟ್ಟಿತನ ಉಳಿದ್ರೆ ಮಾತ್ರ ಪ್ರತ್ಯೇಕ ಧರ್ಮ ಆಗಲು ಸಾಧ್ಯ. ಇಂತವರ ಅಂಧಭಕ್ತಿಗೆ ಮರುಳಾಗದೇ ದಯವಿಟ್ಟು ಲಿಂಗಾಯತ ಅಂತ ಬರೆಸಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಕೂಡಲಸಂಗಮದಲ್ಲೇ ಮತ್ತೇ ಪೀಠ ಕಟ್ಟಿ ಬೆಳೆಸ್ತೇವೆ ಎಂದು ಉಚ್ಚಾಟಿತ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಈಗ ಮೊದಲು ಪೀಠ ಕಟ್ಟಿದ್ದು ಭಕ್ತರಾ ಅಥವಾ ಯಾರು? ಪಂಚಮಸಾಲಿಯವರೆಲ್ಲಾ ಸೇರಿ ಧರ್ಮದರ್ಶಿ ಮಾಡಿ ಪೀಠ ಕಟ್ಟಿದ್ದು. ನಮ್ಮನ್ನು ಬಿಟ್ಟು ಮಾಡೋದಾದ್ರೆ ನಾವು ಪಂಚಮಸಾಲಿ ಅಲ್ಲ ಎಂದು ಅರ್ಥವಾಗುತ್ತೆ. ಪೀಠಕ್ಕೆ ಟ್ರಸ್ಟ್ ಸಂಬಂಧ ಇಲ್ಲವೆಂದಾದರೆ, ಕಳೆದ 17 ವರ್ಷಗಳಿಂದ ಹಣ ಹಾಕಿ ಪೀಠಾರೋಹಣ ಎಲ್ಲಾ ಮಾಡಿದ್ದೇವೆ. ಹಾಗಾದ್ರೆ ನಾವು ಸಮುದಾಯದವರು ಅಲ್ಲ ಅಂದ ಹಾಗಾಯ್ತಲ್ಲ. ಬಾಯಿಗೆ ಬಂದಂತೆ ಮಾತನಾಡೋದು ಗುರುಗಳಿಗೆ ಶೋಭೆ ತರುವಂತಹದ್ದಲ್ಲ ಎಂದರು.

ನಾನು ಒತ್ತಡದಿಂದ ಕೆಲಸ ಮಾಡುತ್ತಿದ್ದೆ ಎಂಬ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ಒತ್ತಡದಿಂದ ಕೆಲಸ ಮಾಡು ಅಂದೋರು ಯಾರು? ನಾವೆಲ್ಲರೂ ಸ್ವತಂತ್ರರು. ನಾವೇನು ಆಕಾಶದಿಂದ ಇಳಿದಿವಿ ಅಂತಾ ಹೇಳಿಲ್ಲ. ಸೃಷ್ಟಿ ಮಾಡಿದವರನ್ನು ಬಿಟ್ಟು ಒಂದು ಪಕ್ಷದ ಬ್ಯಾನರ್ ಅಡಿ ಹೋಗೋದು ಎಷ್ಟು ಸರಿ? ನಮ್ಮ ನಿರ್ಧಾರ ಅಚಲ. ನಮಗೆ ಧರ್ಮ ಕಾಪಾಡೋರು ಬೇಕು. ಉಚ್ಚಾಟನೆ ನನ್ನ ಕ್ರಮ ಅಲ್ಲ. ನಮ್ಮೆಲ್ಲ ಟ್ರಸ್ಟ್ ಸದಸ್ಯರ ನಿರ್ಧಾರವಾಗಿದೆ ಎಂದು ಸಮರ್ಥಿಸಿಕೊಂಡರು.

ಉಚ್ಚಾಟನೆ ವಿರೋಧಿಸಿ ಶನಿವಾರ ಪಂಚಮಸಾಲಿ ಶಾಸಕರು ಸಭೆ ಕರೆದಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಸಿ ಪಾಟೀಲರು ಸೇರಿದಂತೆ ಎಲ್ಲರೂ ಸಭೆ ಮಾಡೋದು ಸಂತೋಷ. ಸಭೆ ಪಕ್ಷಾತೀತವಾಗಿ ನಡೆಯುತ್ತಿತ್ತು. ಸಮಾಜದಲ್ಲಿ ಎಲ್ಲ ಪಕ್ಷದವರೂ ಇದ್ದೇವೆ. ಸಭೆ ಪಕ್ಷಾತೀತವಾಗಬೇಕು, ಒಂದೇ ಪಕ್ಷದ ಪರವಾಗಿ ಕರೆಯುತ್ತಿದ್ದಾರೆ. ಮಾತೆತ್ತಿದ್ರೆ ಅರವಿಂದ ಬೆಲ್ಲದ, ಸಿಸಿ ಪಾಟೀಲ, ಇನ್ನೊಬ್ಬನ ಹೆಸರು (ಯತ್ನಾಳ) ತಗೋಳುದಿಲ್ಲ ನಾನು ಅವರೆಲ್ಲಾ ಸಭೆ ಮಾಡಲಿ, ಒಂದು ಪಕ್ಷಕ್ಕೆ ಸೀಮಿತವಾಗಿ ಅವರನ್ನು ಕರೆದುಕೊಂಡು ಹೋಗೋದಾದ್ರೆ ಹೋಗಲಿ ಎಂದರು.

ಹುಬ್ಬಳ್ಳಿ ಧಾರವಾಡ ಬೆಳಗಾವಿ ಮಧ್ಯೆ ಪೀಠ ಕಟ್ತಿವಿ. ಕೂಡಲಸಂಗಮ ಅವಶ್ಯಕತೆ ಇಲ್ಲ ಅಂತಿದ್ದಾರಲ್ಲಾ, ಇವರ್ಯಾಕೆ ಕೂಡಲಸಂಗಮ ಪೀಠ ಅಂತಿದ್ದಾರೆ, ನಮಗೇನು ಯಾರ ಮೇಲೂ ದ್ವೇಷ ಇಲ್ಲ, ನಮ್ರತೆಯಿಂದ ನಾನು ಮಾತನಾಡುತ್ತೇನೆ. ನಡೆ ನುಡಿಯಂತೆ ನಡೆದಿಲ್ಲ ಅನ್ನೋದಕ್ಕೆ ಉಚ್ಚಾಟನೆ ನಿರ್ಧಾರವಾಗಿದೆ. ಇನ್ನೂ ಅರ್ಥ ಮಾಡಿಕೊಳ್ಳದೇ ಹೋದ್ರೆ ಜನ್ರು ಸಹ ತಿರಸ್ಕಾರ ಮಾಡ್ತಾರೆ. ಸ್ವಾಮೀಜಿ ಯಾವುದನ್ನೂ ಟ್ರಸ್ಟ್ ಅಧ್ಯಕ್ಷರಿಗೆ, ಕಾರ್ಯದರ್ಶಿಗಳ ಗಮನಕ್ಕೆ ತರಲಿಲ್ಲ. ಟ್ರಸ್ಟ್ ಸಂಬಂಧ ಇಲ್ಲವೆಂದವರು ಹಿಂದೆ ಟ್ರಸ್ಟ್‌ನ ನೋಟಿಸ್‌ಗೆ ಉತ್ತರ ಕೊಟ್ಟಿದ್ಯಾಕೆ, ಹಾದಿ ತಪ್ಪಿದವರಿಗೆ ಜನ್ರೇ ಪಾಠ ಕಲಿಸ್ತಾರೆ ಎಂದರು.

ಸಿಡಿ ವಿಚಾರದಲ್ಲಿ ಭಯ ಯಾಕಿದೆ?

ಸ್ವಾಮೀಜಿ ಮತ್ತು ಕಾಶಪ್ಪನವರ ಮಧ್ಯೆ ಸಂಧಾನ ಮಾತುಕತೆ ನಡೆಯುತ್ತಾ ಎಂಬ ಪ್ರಶ್ನೆಗೆ ಶಾಸಕರು ಪ್ರತಿಕ್ರಿಯಿಸಿ, ಎಲ್ಲ ಹಂತ ಮೀರಿ ಹೋಗಿದೆ. ಕೆಲವೊಂದು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಆಗೋದಿಲ್ಲ. ಸಂದರ್ಭ ಬಂದ್ರೆ ಯಾವುದನ್ನು ಹೇಳೋದಕ್ಕೂ ಹೇಸೋದಿಲ್ಲ, ಅದನ್ನ ಅವರು ಅರ್ಥ ಮಾಡಕೋಬೇಕು. ಅಕ್ರಮ ಆಸ್ತಿ ಮತ್ತು ಸಿಡಿ ಇದೆ ಎನ್ನುವ ವಿಚಾರವನ್ನು ದಾಖಲೆ ಹೇಳ್ತವೆ ನಾನು ಹೇಳೋದಿಲ್ಲ. ಇವರ ಅಕ್ರಮ ಆಸ್ತಿ ಗಳಿಕೆ ಸಂಬಂಧ ಸಿಡಿ ಸೇರಿ ಸಮಯ ಬಂದಾಗ ಎಲ್ಲಾ ಕೊಡ್ತೀನಿ. ನನ್ನದು ನೇರ ನುಡಿ, ಯಾರನ್ನೋ ದೂಷಿಸಬೇಕು ಅಂತ ಹೇಳಿಲ್ಲ. ಸತ್ಯಾಸತ್ಯತೆ ಇವೆ. ಸಂದರ್ಭ ಬಂದಾಗ ಕೊಡ್ತೀನಿ. ಸಿಡಿ ವಿಚಾರದಲ್ಲಿ ಭಯ ಯಾಕೆ ಇದೆ ಅವರಿಗೆ, ಎಲ್ಲವನ್ನು ತಂತ್ರಜ್ಞಾನದಿಂದ ಮಾಡೋಕೆ ಆಗುತ್ತಾ, ಅಷ್ಟು ನಿಷ್ಠಾವಂತರಾಗಿದ್ರೆ ಭಯ ಯಾಕೆ, ಪ್ರಾಮಾಣಿವಾಗಿದ್ರೆ ಮೊದಲು ಭಯ ತೆಗೆದು ಹಾಕಲು ಹೇಳಿ, ನಾನು ಸಹ ಒಬ್ಬ ಭಕ್ತ ನಾನು ಕಾಲು ಮುಗಿದಿನಿ, ಇವರನ್ನು ಹೊಗಳಿದಿನಿ, ಆಗ ಹಂಗಿತ್ತು, ಇವತ್ತು ಅದು ಉಳಿದಿಲ್ಲ ಎಂದು ತಿಳಿಸಿದರು.

ಯಾವ ನದಿ ದಂಡೆಯಲ್ಲಾದ್ರೂ ಮಠ ಕಟ್ಟಿಕೊಳ್ಳಲಿ

ಕಾಶಪ್ಪನವರ ನೇತೃತ್ವದಲ್ಲಿ ಪಂಚಮಸಾಲಿ ಟ್ರಸ್ಟ್ ಮುಂದಿನ ನಡೆ ಏನೂ ಎಂಬ ಮಾತಿಗೆ ನಮ್ಮ ನಿರ್ಧಾರ ಅಚಲ, ನಾವು ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಅವಶ್ಯಕತೆ ಬಿದ್ರೆ ಪದೇ ಪದೇ ಸಭೆ ಮಾಡ್ತೇವೆ. ಕೂಡಲಸಂಗಮ ಅಭಿವೃದ್ಧಿ ಬಗ್ಗೆ ಚಿಂತನೆಯಾಗಿದೆ. 2ಎ ಮೀಸಲಾತಿ, ದಾಸೋಹ ಸೇರಿದಂತೆ ಎಲ್ಲವೂ ಆಗಬೇಕಿದೆ. ಯಾರೋ ಒತ್ತಡಕ್ಕೆ ಮಣಿದು ಹೋಗೋದಾದ್ರೆ ಹೋಗಲಿ, ಮಲಪ್ರಭಾ ದಂಡೆ ಅಥವಾ ಕೃಷ್ಣಾ , ಕಾವೇರಿ ನದಿ ದಂಡೆಯಲ್ಲಾದ್ರೂ ಮಠ ಕಟ್ಟಿಕೊಳ್ಳಲಿ, ಆದ್ರೆ ನಮ್ಮ ತತ್ವಕ್ಕೆ ವಿರೋಧ ಮಾಡಿದ್ದಕ್ಕೆ ಈ ತೀರ್ಮಾನ ಅನ್ನೋದು ಬಹಳ ಸ್ಪಷ್ಟ ಎಂದು ಕಾಶಪ್ಪನವರ ಹೇಳಿದರು.