ಕೆಡಿಪಿ ಸಭೆಗೆ ಕೆಲವು ಅಧಿಕಾರಿಗಳ ಗೈರು: ಶಾಸಕ ಗರಂ

| Published : Dec 17 2023, 01:45 AM IST

ಕೆಡಿಪಿ ಸಭೆಗೆ ಕೆಲವು ಅಧಿಕಾರಿಗಳ ಗೈರು: ಶಾಸಕ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ತಾಲೂಕಿನ ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಯಲಾಗಿರುವ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗುವ ಪ್ರವೃತ್ತಿ ಸರಿಯಲ್ಲ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆ ಆಗಬಾರದು ಎಂದು ಶಾಸಕ ಪ್ರಕಾಶ ಕೋಳಿವಾಡ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಧಿಕಾರಿಗಳಿಗೆ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಕಟ್ಟುನಿಟ್ಟು ಸೂಚನೆ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ತಾಲೂಕಿನ ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಯಲಾಗಿರುವ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗುವ ಪ್ರವೃತ್ತಿ ಸರಿಯಲ್ಲ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆ ಆಗಬಾರದು ಎಂದು ಶಾಸಕ ಪ್ರಕಾಶ ಕೋಳಿವಾಡ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ತಾಪಂ ಸಭಾಭವನದಲ್ಲಿ ಶನಿವಾರ ನಡೆದ ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆ ಪ್ರಾರಂಭಿಸುವ ಮುನ್ನ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಕಳೆದ ತಿಂಗಳು ನಗರದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳ ಮಾಹಿತಿ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಶಾಸಕರು ಸೂಚಿಸಿದರು.

ಇದಕ್ಕೆ ದನಿಗೂಡಿಸಿದ ತಹಸೀಲ್ದಾರ್‌ ಎಚ್.ಎನ್. ಶಿರಹಟ್ಟಿ, ಜನತಾ ದರ್ಶನದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಇದರ ಬಗ್ಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.

ಜಿಪಂ ಎಂಜಿನಿಯರಿಂಗ್ ಇಲಾಖೆಗೆ 8, ನಗರಸಭೆಗೆ 25, ಹೆಸ್ಕಾಂಗೆ 13 ಅರ್ಜಿಗಳು ಸಲ್ಲಿಕೆಯಾಗಿದ್ದು ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಗೊಂದಲದ ಮಾಹಿತಿ:

ಇಲಾಖೆವಾರು ಪ್ರಗತಿ ಪರಿಶೀಲನೆ ಪ್ರಾರಂಭಿಸಿದಾಗ ಜಿಪಂ ಎಂಜಿನಿಯರಿಂಗ್‌ ಅಧಿಕಾರಿ ರಾಮಣ್ಣ ಬಜಾರಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಗೊಂದಲದ ಮಾಹಿತಿ ನೀಡಿದರು. ಆಗ ಶಾಸಕ ಪ್ರಕಾಶ ಕೋಳಿವಾಡ ಅವರು ನಮಗೆ ಅರ್ಥವಾಗುವ ಹಾಗೆ ಮಾಹಿತಿ ನೀಡಿ ಎಂದರು.

ಆನಂತರ ಮಾತನಾಡಿದ ಶಾಸಕರು, ಜಲಜೀವನ ಮಿಷನ್ ಯೋಜನೆಯಡಿ ಸಮರ್ಪಕವಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ. ಬಹಳಷ್ಟು ಗ್ರಾಮಗಳಿಂದ ಕೆಲವು ಗುತ್ತಿಗೆದಾರರ ವಿರುದ್ಧ ದೂರು ಕೇಳಿಬಂದಿವೆ. ಅವರಿಗೆ ಹಣ ಪಾವತಿಸಬಾರದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕೆಲವು ಕಡೆ ಹಳೆ ಟ್ಯಾಂಕ್‌ಗಳಿಗೆ ಬಣ್ಣ ಹೊಡೆದು ಕಾಮಗಾರಿ ಮಾಡಲಾಗಿದೆ ಎನ್ನುವ ಆರೋಪವಿದೆ ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಅಂತಹ ಯಾವುದೇ ಕಾಮಗಾರಿ ಆಗಿಲ್ಲ ಎಂದರು.

ಸರ್ಕಾರಿ ಶಾಲೆಯ ರೇಷನ್ ಕಳ್ಳತನದ ವಿಷಯ ಕಳವಳಕಾರಿಯಾಗಿದೆ. ಇದರ ಬಗ್ಗೆ ಯಾವ ಕ್ರಮ ಜರುಗಿಸಿದ್ದೀರಿ? ಎಂದು ಶಾಸಕರು ಅಕ್ಷರ ದಾಸೋಹ ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಈಗಾಗಲೇ ರೇಷನ್ ಕಳ್ಳರನ್ನು ಬಂಧಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಶಾಲಾ ಮುಖ್ಯ ಗುರುಗಳಿಗೆ ಕಟ್ಟಡದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ಸಲ್ಲದು. ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದ ಘಟನೆ ಅಮಾನುಷವಾಗಿದೆ. ಕೂಡಲೇ ಪೊಲೀಸ್ ಇಲಾಖೆ ತನಿಖೆ ನಡೆಸಿ ಸರಿಯಾದ ವರದಿ ಸಲ್ಲಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ವಹಣೆ ದೊಡ್ಡ ತಲೆನೋವಾಗಿದೆ. ನಿರ್ವಹಣೆಯಿಲ್ಲದ ಕಾರಣ ಅವು ದುರಸ್ತಿಗೆ ಬರುತ್ತವೆ. ಇದಕ್ಕೆ ಗ್ರಾಮಸ್ಥರ ಸಹಕಾರ ಬೇಕು ಎಂದು ಬಿಇಒ ಸಭೆಗೆ ಮಾಹಿತಿ ನೀಡಿದರು.

ಕೆಲವು ಶಿಕ್ಷಕರು ಶಾಲೆಗಳಿಗೆ ಸರಿಯಾಗಿ ಹೋಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಅಂತಹ ಶಿಕ್ಷಕರ ಮೇಲೆ ಕ್ರಮ ಜರುಗಿಸಿದ್ದೀರಾ? ಎಂದು ಶಾಸಕರು ಬಿಇಒ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಿಇಒ ಎಂ.ಎಚ್. ಪಾಟೀಲ ತಾಲೂಕಿನಲ್ಲಿ ಸುಮಾರು 13 ಶಿಕ್ಷಕರಿಗೆ ಕಾರಣ ಕೇಳಿ ನೋಟಿಸು ನೀಡಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ತುಂಗಾ ಮೇಲ್ದಂಡೆ ಯೋಜನೆ, ಆರೋಗ್ಯ, ತೋಟಗಾರಿಕೆ, ಅಬಕಾರಿ, ಅರಣ್ಯ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ತಾಪಂ ಕಾನಿ ಅಧಿಕಾರಿ ಸುಮಲತಾ ಎಸ್.ಪಿ. ಉಪಸ್ಥಿತರಿದ್ದರು.

ಸಭೆಯ ಪ್ರಾರಂಭದಲ್ಲಿ ನಗರದಲ್ಲಿ ಕೆಲವು ತಿಂಗಳ ಹಿಂದೆ ವಿಘ್ನೇಶ್ವರ ಸ್ಪಾರ್ಕಲ್ ಕ್ಯಾಂಡಲ್ ತಯಾರಿಕೆ ಘಟಕದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಎರಡು ಲಕ್ಷ ಪರಿಹಾರದ ಚೆಕ್‌ನ್ನು ಶಾಸಕರು ವಿತರಿಸಿದರು.

ಶೋಕಾಸ್ ನೋಟಿಸು ನೀಡಿ:

ಸಭೆಯ ಪ್ರಾರಂಭದಲ್ಲಿ ಹಾಜರಿದ್ದ ಭದ್ರಾ ಕಾಡಾ ಸಿಬ್ಬಂದಿ ಸ್ವಲ್ಪ ಹೊತ್ತಿನ ಆನಂತರ ಯಾರಿಗೂ ತಿಳಿಸದೇ ಸಭೆಯಿಂದ ಹೊರಕ್ಕೆ ತೆರಳಿದ್ದರು. ಇದರಿಂದ ರೊಚ್ಚಿಗೆದ್ದ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಶೋಕಾಸ್ ನೋಟಿಸು ನೀಡುವಂತೆ ತಾಪಂ ಇಒ ಅವರಿಗೆ ಆದೇಶಿಸಿದರು.