ಅಭಿವೃದ್ಧಿ ಸಹಿಸದೆ ಕೆಲಸ ಕಾರ್ಯಗಳಿಗೆ ಕೆಲವರಿಂದ ತೊಂದರೆ: ಕೆ.ಎಂ.ಉದಯ್

| Published : Aug 31 2025, 01:08 AM IST

ಸಾರಾಂಶ

ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಗ್ರಾಮಸ್ಥರ ಕೋರಿಕೆ ಮೇರೆಗೆ ಗ್ರಾಮದ ಅಭಿವೃದ್ಧಿಗಾಗಿ ಈಗಾಗಲೇ ಎರಡು ರಸ್ತೆಗಳನ್ನು ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿನ ರಸ್ತೆ ಮತ್ತು ಚರಂಡಿಗಳ ಕಾಮಗಾರಿ ಕೈಗೊಂಡು ಅಭಿವೃದ್ಧಿಪಡಿಸಲಾಗವುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ನರೇಗಾ ಯೋಜನೆಯಡಿ ಗ್ರಾಮಗಳಲ್ಲಿ ಹೆಚ್ಚಿನ ಕೆಲಸ ನಡೆಸಲಾಗುತ್ತಿದೆ. ಕೆಲವರು ಅಭಿವೃದ್ಧಿ ಸಹಿಸದೆ ಮಾಡುವ ಕೆಲಸ ಕಾರ್ಯಗಳಿಗೆ ತೊಂದರೆ ನೀಡುತ್ತಿರುವ ಹಲವು ನಿದರ್ಶನಗಳು ಕಂಡು ಬಂದಿವೆ ಎಂದು ಶಾಸಕ ಕೆ.ಎಂ.ಉದಯ್ ಬೇಸರ ವ್ಯಕ್ತಪಡಿಸಿದರು.

ಮಾದರಹಳ್ಳಿಯಲ್ಲಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನರೇಗಾದಿಂದ ಗ್ರಾಮಗಳು ಸಾಕಷ್ಟು ಅಭಿವೃದ್ಧಿಯಾಗುತ್ತವೆ. ಆದರೆ, ಅದನ್ನು ಸಹಿಸದೇ ಕೆಲವರು ತೊಂದರೆ ಮಾಡುತ್ತಿರುವುದರಿಂದ ಗ್ರಾಮಗಳ ಪ್ರಗತಿಗೆ ಹಿನ್ನಡೆಯಾಗುತ್ತಿದೆ ಎಂದರು.

ರಾಜಕೀಯ ಮಾಡದೇ ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸ್ಥರು ಪಕ್ಷಾತೀತ, ಜ್ಯಾತ್ಯತೀತವಾಗಿ ಸ್ಥಳೀಯ ಜನಪ್ರತಿನಿಧಿಗಳ ಜತೆ ಕೈಜೋಡಿಸಬೇಕು. ಗ್ರಾಪಂಸದಸ್ಯರು ಒಗ್ಗಟ್ಟಿನಿಂದ ಸೇವೆ ನೀಡಿದರೆ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.

ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಗ್ರಾಮಸ್ಥರ ಕೋರಿಕೆ ಮೇರೆಗೆ ಗ್ರಾಮದ ಅಭಿವೃದ್ಧಿಗಾಗಿ ಈಗಾಗಲೇ ಎರಡು ರಸ್ತೆಗಳನ್ನು ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿನ ರಸ್ತೆ ಮತ್ತು ಚರಂಡಿಗಳ ಕಾಮಗಾರಿ ಕೈಗೊಂಡು ಅಭಿವೃದ್ಧಿಪಡಿಸಲಾಗವುದು ಎಂದು ಭರವಸೆ ನೀಡಿದರು.

ಮದ್ದೂರು ಕ್ಷೇತ್ರವು ಅಭಿವೃದ್ಧಿ ವಿಚಾರದಲ್ಲಿ 20 ವರ್ಷಗಳ ಹಿಂದೆ ಬಿದ್ದಿದೆ. ಕ್ಷೇತ್ರದಲ್ಲಿನ ವಿವಿಧ ಗ್ರಾಮಗಳು ಅಭಿವೃದ್ಧಿ ಕಾಣುತ್ತಿಲ್ಲ. ತಾಲೂಕಿನ ನೀರಾವರಿ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದಿದ್ದೇನೆ. ಕಳೆದ ಸಚಿವ ಸಂಪುಟದಲ್ಲಿ ಸೂಳೆಕೆರೆ ನಾಲೆ ವ್ಯಾಪ್ತಿ ಕಾಮಗಾರಿಗೆ ಸರ್ಕಾರದಿಂದ ಸುಮಾರು 45 ಕೋಟಿ ವೆಚ್ಚ ಹಾಗೂ ಕೆರೆ ಹೂಳೆತ್ತುವ ಕಾರ್ಯಕ್ಕೆ 34 ಕೋಟಿ ಸೇರಿ 77 ಕೋಟಿ ಅನುದಾನ ಬಿಡುಗಡೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದೆ ಎಂದರು.

ಇದೆ ವೇಳೆ ಪಿಡಿಒ ಅಶೋಕ್, ಕಾರ್ಯದರ್ಶಿ ಸುವರ್ಣ, ದ್ವಿತೀಯ ದರ್ಜೆ ಸಹಾಯಕಿ ಭವ್ಯ , ರಾಷ್ಟ್ರೀಯ ಜೂಡೋ ಪಟು ವಸುಂಧರರನ್ನು ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ತಾಪಂ ಇಒ ರಾಮಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಗ್ರಾಪಂ ಅಧ್ಯಕ್ಷೆ ಪವಿತ್ರ, ಮಾಜಿ ಅಧ್ಯಕ್ಷರಾದ ದೇವಿರಮ್ಮ, ಎಂ.ವಿ.ಕೃಷ್ಣ, ಉಪಾಧ್ಯಕ್ಷ ಶಿವಲಿಂಗಯ್ಯ, ಮಾಜಿ ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಕೆ.ಪಿ.ರಕ್ಷಿತ್ ಕುಮಾರ್, ಎ.ಸಿ.ಮಹೇಶ್, ಗೀತಾ, ಸುಧಾ ಚನ್ನ ವೀರೇಗೌಡ, ಸಿದ್ದಶೆಟ್ಟಿ, ಲಕ್ಷಿ, ರತ್ನಮ್ಮ, ಮಂಜುಳಾ, ರೇಣುಕಮ್ಮ, ಪೂರ್ಣಿಮಾ, ಮಂಚಶೆಟ್ಟಿ, ಪಿಡಿಒ ಓದುಲಿಂಗಸ್ವಾಮಿ ಇದ್ದರು.