ಸಾರಾಂಶ
ಮುಂಡಗೋಡ: ಹಲವರು ಧರ್ಮ ಹಾಗೂ ದೇವರ ಬಗ್ಗೆ ತುಂಬ ಮಾತನಾಡುತ್ತಾರೆ. ಕೆಲವರು ಧರ್ಮವನ್ನು ಗುತ್ತಿಗೆ ಪಡೆದಂತೆ ಸಮಾಜದಲ್ಲಿ ಬಿಂಬಿಸುತ್ತಾರೆ. ಆದರೆ ದೇವಾಲಯ ಹಾಗೂ ಧರ್ಮಗಳಿಗಾಗಿ ಅಂತವರು ನೀಡಿದ ಕೊಡುಗೆ ಏನಿದೆ ಎಂಬುವುದನ್ನು ತಿಳಿಸಬೇಕು. ದೇವಾಲಯ ಮತ್ತು ಛತ್ರಪತಿ ಮೂರ್ತಿ ನಿರ್ಮಾಣಕ್ಕೆ ನಾವು ಬೇಕು. ಬಳಿಕ ನಮ್ಮ ವಿರುದ್ದವೇ ಮಾತನಾಡುತ್ತಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಬುಧವಾರ ತಾಲೂಕಿನ ಚಿಗಳ್ಳಿ ಗ್ರಾಮದ ಕಲ್ಮೇಶ್ವರ ದೇವಾಲಯದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಯಾವುದೇ ಒಂದು ಧರ್ಮವನ್ನು ರಾಜಕೀಯ ಪಕ್ಷಗಳು ಗುತ್ತಿಗೆ ಪಡೆಯಲು ಸಾಧ್ಯವಿಲ್ಲ. ಕಳೆದ ೧೫ ವರ್ಷಗಳಲ್ಲಿ ೨೪೫ ದೇವಾಲಯ ನಿರ್ಮಾಣ ಕೈಗೊಳ್ಳಲಾಗಿದೆ. ಅದರಲ್ಲಿ ೧೭೬ ದೇವಾಲಯ ನಿರ್ಮಾಣ ಮಾಡಲಾಗಿದೆ. ಇನ್ನುಳಿದ ೧೧೦ ದೇವಾಲಯ ನಿರ್ಮಾಣ ಹಂತದಲ್ಲಿವೆ. ಯಾರು ಬೇಡಿಕೆ ಈಡೇರಿಸುತ್ತಾರೆ ಅವರ ಬಳಿ ಮಾತ್ರ ಬೇಡುತ್ತಾರೆ. ಕೇವಲ ಹಣವಿದ್ದರೆ ದೇವಾಲಯ ಕಟ್ಟಲು ಸಾಧ್ಯವಿಲ್ಲ. ಈ ಧರ್ಮದ ಕೆಲಸ ಮಾಡಲು ಯೋಗ ಮತ್ತು ಭಾಗ್ಯ ಬೇಕು. ಆ ಕೆಲಸ ಮಾಡುವ ಶಕ್ತಿಯನ್ನು ಭಗವಂತ ತಮಗೆ ನೀಡಿದ್ದಾನೆ. ಎಲ್ಲ ದೇವರ ಆಶಿರ್ವಾದದಿಂದಲೇ ಇಷ್ಟೊಂದು ದೇವಾಲಯ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದರು.ಅನ್ನದಾತ ಸುಭಿಕ್ಷೆಯಾಗಬೇಕೆಂಬ ಉದ್ದೇಶದಿಂದ ಜಲಾಶಯದಿಂದ ಕುಡಿಯುವ ನೀರಿನ ಯೋಜನೆ ಹಾಗೂ ಕೆರೆ ತುಂಬಿಸುವ ಯೋಜನೆ ಕೈಗೊಳ್ಳಲಾಗಿದೆ. ನೀರು, ಗಾಳಿ ಹಾಗೂ ಬೆಂಕಿ ಇವೆಲ್ಲ ನಿಸರ್ಗದ ಸಂಪತ್ತು ಹಾಗಾಗಿ ಜಲಾಶಯದ ನೀರು ಅಗತ್ಯವಿರುವ ಪ್ರತಿಯೊಬ್ಬರಿಗೂ ವಿನಿಯೋಗವಾಗಬೇಕು. ನೀರು. ಸಂಪತ್ತು ಯಾವುದೇ ಊರು ಹಾಗೂ ವ್ಯಕ್ತಿಯ ಸಂಪತ್ತಲ್ಲ. ಸಮಾಜದಲ್ಲಿರುವ ಎಲ್ಲರಿಗೂ ತಲುಪಬೇಕು. ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಮೂಲಭೂತ ಉದ್ದೇಶವಾಗಿದ್ದು, ಅಭಿವೃದ್ದಿ ಎಂಬುವುದು ಯಾರೊಬ್ಬರ ಸ್ವತ್ತಲ್ಲ ಎಂದರು.
ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹಾಗೆಯೇ ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪನ ಹೆಸರಿಗೆ ದಕ್ಕೆ ತಂದವರಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದರು.ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಗ್ಯಾರಂಟಿ ಅಧ್ಯಕ್ಷ ರಾಜಶೇಖರ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಗೌಡ ಪಾಟೀಲ್, ಜ್ಞಾನದೇವ ಗುಡಿಯಾಳ, ಎಮ್.ಪಿ ಕುಸೂರ, ಗುಡ್ಡಪ್ಪ ಕಾತೂರ, ದೇವು ಜಾನು ಪಾಟೀಲ, ಲಕ್ಷ್ಮಣ ಬನ್ಸೋಡೆ, ಬಾಬುರಾವ್ ಲಾಡನವರ, ವೈ.ಪಿಭುಜಂಗಿ, ಮೋಹನ ಲಾಡನವರ, ನರೇಗಲ್ ಮುಂತಾದವರು ಉಪಸ್ಥಿತರಿದ್ದರು.