ಸಾರಾಂಶ
ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ರೋಣಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳಿಯ ಪುರಸಭೆ ಪಟ್ಟಣದಾದ್ಯಂತ 30ಕ್ಕೂ ಹೆಚ್ಚು ಸಿಸ್ಟನ್ ಟ್ಯಾಂಕ್ (ನೀರು ಪೂರೈಕೆ ಮಿನಿ ಟ್ಯಾಂಕ್) ನಿರ್ಮಿಸಿದ್ದು, ಇವುಗಳಲ್ಲಿ ಕೇವಲ 12ಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಉಳಿದ ಸಿಸ್ಟನ್‌ಗಳು ಕೇವಲ ಹೆಸರಿಗೆ ಮಾತ್ರ ಎಂಬಂತಿವೆ.ನೀರಿಗಾಗಿ ನಲ್ಲಿಗಳನ್ನು ಹೊಂದಿದವರ ಮನೆಗೂ 6ರಿಂದ 8 ದಿನಕ್ಕೊಮ್ಮೆ ನೀರು ಬರುತ್ತಿದ್ದು, ಕನಿಷ್ಠ 3 ದಿನಕ್ಕೊಮ್ಮೆ ನೀರು ಪೂರೈಸುವಂತೆ ಜನತೆ ಪುರಸಭೆಗೆ ಒತ್ತಡ ಹಾಕುತ್ತಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಕೆಲವೇ ಬಡಾವಣೆಗಳಲ್ಲಿ ನೀರಿನ ಅಲ್ಪಸ್ವಲ್ಪ ಸಮಸ್ಯೆ ಮಾತ್ರ ಎದುರಿಸುತ್ತಿದ್ದು 3ರಿಂದ 4 ದಿನಕ್ಕೆ ಆಯಾ ವಾರ್ಡ್, ಬಡಾವಣೆಗೆ ನೀರು ಪೂರೈಸಲಾಗುತ್ತಿದೆ. 3ನೇ ವಾರ್ಡ್, 1ನೇ ವಾರ್ಡ, 11, 15, 16ನೇ ವಾರ್ಡಿನ ಕೆಲ ಬಡಾವಣೆಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಇದನ್ನು ಹೊರತುಪಡಿಸಿ ಸದ್ಯಕ್ಕೆ ರೋಣದಾದ್ಯಂತ ಬಹುತೇಕ ವಾರ್ಡ್‌ಗಳಲ್ಲಿ ಅಷ್ಟಾಗಿ ನೀರಿನ ಸಮಸ್ಯೆಯಿಲ್ಲ.
ಸಿಸ್ಟನ್‌ಗಳು ಸುಣ್ಣ ಬಣ್ಣಕ್ಕೆ ಸೀಮಿತ: ಪಟ್ಟಣದಾದ್ಯಂತ ಅಲ್ಲಲ್ಲಿ ಸಾರ್ವಜನಿಕರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಸಾರ್ವಜನಿಕ ಸಿಸ್ಟನ್ (ಮಿನಿ ನೀರು ಸಂಗ್ರಹಗಾರ) ನಿರ್ಮಿಸಲಾಗಿದೆ. ಜನತೆ ಮತ್ತು ಜಾನುವಾರುಗಳಿಗೆ ಕುಡಿವ ನೀರನ್ನು ಸಿಸ್ಟನ್ ಮೂಲಕ ದಿನದ 24 ತಾಸು ನೀರು ಪೂರೈಸಬೇಕು ಎಂಬ ನಿಯಮವಿದ್ದರೂ, ಪುರಸಭೆ ಮಾತ್ರ ಕಾಟಾಚಾರಕ್ಕೆಎಂಬಂತೆ ನೀರು ಪೂರೈಸುತ್ತಿದೆ. 30ರಲ್ಲಿ ಕೆಲವು ಸಿಸ್ಟನ್ ಗಳಿಗೆ ಕೊಳವೆಬಾವಿ ಮೋಟಾರ್ ಮೂಲಕ, ಇನ್ನೂ ಕೆಲವು ಸಿಸ್ಟನ್‌ಗಳಿಗೆ ವಾರ್ಡ್ ಅಥವಾ ಬಡಾವಣೆಗೆ ನೀರು ಪೂರೈಸುವ ವೇಳೆಯಲ್ಲಿ ವಾಲ್ ತಿರುವಿದಲ್ಲಿ ಮಾತ್ರ ನೀರು ಬರುತ್ತದೆ. ಸ್ವಂತ ನಲ್ಲಿ ಹೊಂದಿದವರು, ಮನೆಯಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿಕೊಂಡವರು ವಾರಕ್ಕಾಗುವಷ್ಟು ಅಥವಾ ಪುರಸಭೆ ನೀರು ಸರಬರಾಜು ಮಾಡುವ ಅವಧಿವರೆಗೆ ಸಾಕಾಗುವಂತೆ ನೀರು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಆದರೆ ಬಡವರು, ಮನೆಯಲ್ಲಿ ನೀರಿನ ಟ್ಯಾಂಕ್ ಇಲ್ಲದವರು, ಕೂಲಿ ಕಾರ್ಮಿಕರು ಸಾರ್ವಜನಿಕ ನಳಗಳನ್ನೆ ಆಶ್ರಯಿಸಿದವರಿಗೆ ನೀರಿನ ಸಮಸ್ಯೆಯಾಗುತ್ತಿದೆ. ನೀರಿಗಾಗಿ ಉದ್ಯೋಗ ಬಿಟ್ಟು ಕಾಯುವಂತಾಗಿದೆ. 30ಕ್ಕೂ ಹೆಚ್ಚ ಸಿಸ್ಟನ್‌ಗಳಲ್ಲಿ 12 ವರ್ಷಕ್ಕೊಮ್ಮೆ ಸುಣ್ಣ, ಬಣ್ಣ ಹಚ್ಚಲು, ಜಾಹಿರಾತು ಫಲಕ ಅಂಟಿಸಲು ಮಾತ್ರ ಸೀಮಿತವಾಗಿವೆ ಎಂಬುದೇ ವಿಪರ್ಯಾಸ ಸಂಗತಿಯಾಗಿದೆ. ಎಲ್ಲೆಲ್ಲಿ ಸಿಸ್ಟನ್‌ಗೆ ನೀರಿಲ್ಲ: ಪಟ್ಟಣದ ಮುಗಳಿ ರಸ್ತೆಯಲ್ಲಿರುವ ಸಿಸ್ಟನ್, ಸಾಧು ಅಜ್ಜನ ಮಠ ಹತ್ತಿರ, ಜಕ್ಕಲಿ ರಸ್ತೆ ಗಾದಿ ಕಾರ್ಖಾನೆ ಹತ್ತಿರ, ಗಜೇಂದ್ರಗಡ ರಸ್ತೆಯ ರಂಗನಗೌಡ್ರ ಮನೆ ಹತ್ತಿರ, ಆಶಾ ಕಿರಣ ಶಾಲೆ ಹತ್ತಿರ, ಅಂಬೇಡ್ಕರ್ ನಗರ ಹತ್ತಿರ, ಮುಲ್ಲಾನ ಬಾವಿ ಹತ್ತಿರ ಹಾಗೂ 3ನೇ ವಾರ್ಡ್‌ನಲ್ಲಿ, ಶಿವಪೇಟಿ 1ನೇ ಕ್ರಾಸ್‌ನಿಂದ 8 ಕ್ರಾಸ್ ವರಗೆ ಇರುವ 4ಕ್ಕೂ ಹೆಚ್ಚು ಸಿಸ್ಟನ್ ಟ್ಯಾಂಕ್ ಸೇರಿದಂತೆ ವಿವಿಧೆಡೆ ಇರುವ ಟ್ಯಾಂಕ್‌ಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಸಾರ್ವಜನಿಕ ನಲ್ಲಿಗಳನ್ನು ನಂಬಿದ ಜನತೆಗೆ ನೀರಿನ ಸಮಸ್ಯೆಯಾಗುತ್ತಿದ್ದು, ನೀರಿನ ಮೂಲ ಹುಡುಕಿಕೊಂಡು ಎಲ್ಲೆಂದರಲ್ಲಿ ಅಲೆಯುವಂತಾಗಿದೆ.ಇನ್ನಾದರೂ ಮುಂಜಾಗ್ರತೆ ವಹಿಸಿ:ಮನೆಗೆ ನಳಗಳನ್ನು ಹೊಂದಿದವರಿಗಿಂತ ಸಿಸ್ಟನ್‌ಗಳನ್ನೆ ಆಶ್ರಯಿಸಿದವರಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಅಲ್ಲಲ್ಲಿ ನಿಷ್ಕ್ರೀಯವಾಗಿರುವ ಸಿಸ್ಟನ್‌ಗಳಿಗೆ ನೀರು ಪೂರೈಸುವಲ್ಲಿ ಕ್ರಮ ಕೈಗೊಳ್ಳಬೇಕು. ಬೇಸಿಗೆಯಲ್ಲಿ ಮತ್ತಷ್ಟು ನೀರಿನ ಸಮಸ್ಯೆಯಾಗದಂತೆ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಜೊತೆಗೆ ಸಂಗ್ರಹಾರಗಳಿಗೆ ನೀರು ಪೂರೈಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ಜನರ ಆಗ್ರಹವಾಗಿದೆ. ರೋಣದಲ್ಲಿನ ಪ್ರತಿಯೊಂದು ಸಿಸ್ಟನ್‌ಗಳಿಗೆ ನೀರು ಪೂರೈಸುವಲ್ಲಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. 15 ಸಿಸ್ಟನ್‌ಗಳಿಗೆ ನೀರು ಪೂರೈಸಲು ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೆ ನಿವಾರಿಸಲಾಗುವುದು. ಬೇಸಿಗೆಯಲ್ಲಿ ರೋಣ ಪಟ್ಟಣಕ್ಕೆ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ರೋಣ ಪುರಸಭೆ ಮುಖ್ಯಾಧಿಕಾರಿ ರಮೇಶ ಗೊಂದಕರ ಹೇಳುತ್ತಾರೆ.