ಯಾರದ್ದೋ ಭೂಮಿಗೆ ಯಾರಿಗೋ ಪರಿಹಾರ!

| Published : Aug 24 2024, 01:19 AM IST

ಸಾರಾಂಶ

ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ನೂರಾರು ರೈತರಿಗೆ ಭೂದಾಖಲೆಗಳ ಸಮಸ್ಯೆ ಇದೆ. ಯಾರೋ ಉಳುಮೆ ಮಾಡುತ್ತಿದ್ದ ಜಾಗಕ್ಕೆ ಜಿಪಿಎಸ್‌ನಲ್ಲಿ ಇನ್ಯಾರದ್ದೋ ಹೆಸರು ತೋರಿಸುತ್ತಿದೆ. ಹೀಗಾಗಿ ರೈತರು ಪರಿಹಾರಕ್ಕಾಗಿ ಪರದಾಡುವಂತಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಯಾರದ್ದೋ ಹೆಸರು ಇರುವ ಭೂಮಿಯಲ್ಲಿ ಇನ್ಯಾರೋ ಉಳುಮೆ ಮಾಡುತ್ತಿದ್ದಾರೆ. ಯಾರದೋ ಭೂಮಿಗೆ ನೀಡುವ ಪರಿಹಾರ ಮತ್ಯಾರದೋ ಖಾತೆಗೆ ಜಮೆಯಾಗುತ್ತದೆ!

ಹೌದು, ಇದು ಕೊಪ್ಪಳ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿರುವ ಬಹುದೊಡ್ಡ ಸಮಸ್ಯೆ. ಈ ರೀತಿ ಬರೋಬ್ಬರಿ 38 ಗ್ರಾಮಗಳು ಸಮಸ್ಯೆ ಎದುರಿಸುತ್ತಿವೆ. ಎಂದೋ ಆಗಿರುವ ತಪ್ಪಿಗೆ ಇಂದಿಗೂ ಭೂಮಿಯ ಮಾಲೀಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

ತಳಕಲ್ ಗ್ರಾಮದ ಸರ್ವೆ ನಂಬರ್ 470-11, 477ರಲ್ಲಿ ವಿಂಡ್‌ ಪವರ್‌ ಕಂಬಗಳನ್ನು ಹಾಕಲಾಗಿದೆ. ಈ ಭೂಮಿಗೆ ಲಕ್ಷ್ಮವ್ವ ಮ್ಯಾಗಳಮನಿ ಹಾಗೂ ಹುಲಿಗೆಮ್ಮ ಹಣವಾಣ ಅನುಕ್ರಮವಾಗಿ ಮಾಲೀಕರು. ಆದರೆ, ಈ ಭೂಮಿಯಲ್ಲಿ ಈಗ ಅವರಿಗೆ ಗೊತ್ತಿಲ್ಲದೆ ವಿಂಡ್ ಪವರ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಕೇಳಿದರೆ ನಿಮ್ಮ ಭೂಮಿಗೆ ಅದಾಗಲೇ ಪರಿಹಾರ ನೀಡಿದ್ದೇವೆ ಎನ್ನುತ್ತಾರೆ. ಆಕ್ಷೇಪ ಮಾಡಿದರೂ ಕೇಳದೇ ಕಂಬಗಳನ್ನು ಅಳವಡಿಸುತ್ತಿದ್ದಾರೆ.

ಅಚ್ಚರಿ ಎಂದರೆ ಬಸವರಾಜ ಭಜಂತ್ರಿ ಎನ್ನುವವರ ಬ್ಯಾಂಕ್ ಖಾತೆಗೆ ₹12 ಲಕ್ಷ ಪರಿಹಾರ ಜಮೆಯಾಗಿದೆ. ಈ ಭೂಮಿ ಬಸವರಾಜ ಭಜಂತ್ರಿ ಅವರ ಹೆಸರಿನಲ್ಲಿರುವ ಭೂಮಿಯ ಜಿಪಿಎಸ್ ತೋರಿಸುತ್ತದೆ. ಹೀಗಾಗಿ, ಸಮಸ್ಯೆಯಾಗಿದೆ.

ಇದನ್ನು ಪ್ರಶ್ನೆ ಮಾಡಿ, ಲಕ್ಷ್ಮವ್ವ ಮತ್ತು ಹುಲಿಗೆವ್ವ ಕಂದಾಯ ಇಲಾಖೆಯ ಕಚೇರಿಗೆ ಸುತ್ತಾಡಿದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆಯುತ್ತಿಲ್ಲ. ಹೀಗಾಗಿ ಅವರು ರೋಸಿಹೋಗಿದ್ದಾರೆ. ನಮ್ಮ ಭೂಮಿಯಲ್ಲಿ ವಿದ್ಯುತ್ ಕಂಬ ಹಾಕುತ್ತಿದ್ದಾರೆ. ಪರಿಹಾರವನ್ನು ಬೇರೆಯವರ ಖಾತೆಗೆ ಜಮೆ ಮಾಡುವುದು ಯಾವ ನ್ಯಾಯ? ಎಂದು ಕಣ್ಣೀರು ಹಾಕುತ್ತಿದ್ದಾರೆ.

ಇದು ಕೇವಲ ಒಂದು ಉದಾಹರಣೆ ಅಷ್ಟೇ, ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ನೂರಾರು ರೈತರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ.

38 ಗ್ರಾಮಗಳಲ್ಲಿ ಸಮಸ್ಯೆ: ಇದು ಇಂದಿನ ಸಮಸ್ಯೆಯಲ್ಲ, 40-50 ವರ್ಷಗಳ ಹಿಂದೆಯೇ ಆಗಿರುವುದು. ನಿಜಾಮರ ಕಾಲದಲ್ಲಿ ನೀಡಲಾಗುತ್ತಿದ್ದ ಖಾಸ್ರಾ ಪಹಣ ವೇಳೆಯಲ್ಲಿಯೂ ಒಂದಿಷ್ಟು ಸಮಸ್ಯೆಗಳು ಇದ್ದವು. ಈ ಸಮಸ್ಯೆ ಇತ್ಯರ್ಥ ಮಾಡಲು ಜಿಲ್ಲಾಡಳಿತದಿಂದ ನಿರಂತರ ಪ್ರಯತ್ನ ನಡೆಯುತ್ತಿದೆಯಾದರೂ ನಿರೀಕ್ಷಿತ ಫಲಿತಾಂಶ ದೊರೆಯುತ್ತಿಲ್ಲ. ಗ್ರಾಮದಲ್ಲಿಯೇ ಕಂದಾಯ ಇಲಾಖೆಯ ನ್ಯಾಯಾಲಯ ತೆರೆದು, ಶೇ. 80ರಷ್ಟು ಸಮಸ್ಯೆ ಇತ್ಯರ್ಥ ಮಾಡಿದ್ದೇವೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆಯಾದರೂ ಇನ್ನು ಇತ್ಯರ್ಥವಾಗದೆ ಇರುವ ಸಮಸ್ಯೆಗಳು ಸಾಕಷ್ಟು ಇವೆ.

ಇದು ಕೇವಲ ಒಂದೆರಡು ಸಮಸ್ಯೆಲ್ಲ, ಕೊಪ್ಪಳ ಜಿಲ್ಲೆಯ 38 ಗ್ರಾಮಗಳಲ್ಲಿ ಈ ಸಮಸ್ಯೆ ಇದೆ. ಈಗಾಗಲೇ ಶೇ. 80ರಷ್ಟು ಇತ್ಯರ್ಥ ಮಾಡಿದ್ದು, ಇನ್ನುಳಿದ ಸಮಸ್ಯೆ ಇತ್ಯರ್ಥ ಮಾಡಲಾಗುತ್ತಿದೆ ಎಂದು ಕೊಪ್ಪಳ ಎಸಿ ಮಹೇಶ ಮಾಲಗಿತ್ತಿ ಹೇಳಿದರು.

ನಾವೇನು ಮಾಡಬೇಕು ನೋಡಿ ಸರ್, ನಮ್ಮ ಹೊಲದಲ್ಲಿ ವಿಂಡ್ ಪವಾರ್ ಕಂಬ ಹಾಕಿ, ಬೇರೆಯವರಿಗೆ ಪರಿಹಾರ ನೀಡಿದರೆ ಹೇಗೆ? ಎಂದು ನೊಂದ ಮಹಿಳೆ ಲಕ್ಷ್ಮವ್ವ ಹೇಳುತ್ತಾರೆ.

ಹೋರಾಟಕ್ಕೆ ನಿರ್ಧಾರ: ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘವೂ ಮನವಿ ಸಲ್ಲಿಸಿದೆ. ಸೆ. 11ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.