ಪಾರ್ವತಿ ಬೆಟ್ಟದಲ್ಲಿ ವಿಜೃಂಭಣೆಯ ಸೋಮೇಶ್ವರ ಜಾತ್ರೆ

| Published : May 24 2024, 12:51 AM IST

ಪಾರ್ವತಿ ಬೆಟ್ಟದಲ್ಲಿ ವಿಜೃಂಭಣೆಯ ಸೋಮೇಶ್ವರ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಂದೇಗಾಲದ ಸ್ಕಂದಗಿರಿ ಪಾರ್ವತಿ ಬೆಟ್ಟದಲ್ಲಿ ಪಾರ್ವತಾಂಭ, ಸೋಮೇಶ್ವರ ಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಕಂದೇಗಾಲದ ಸ್ಕಂದಗಿರಿ ಪಾರ್ವತಿ ಬೆಟ್ಟದಲ್ಲಿ ಪಾರ್ವತಾಂಭ, ಸೋಮೇಶ್ವರ ಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ದೇವಾಲಯದ ಪಶ್ಚಿಮ ಪಾರ್ಶ್ವದಲ್ಲಿ ಧ್ವಜ, ಪತಾಕೆ, ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಪಾರ್ವತಾಂಭ ಸಮೇತ ಸೋಮೇಶ್ವರಸ್ವಾಮಿ ಉತ್ಸವ ಮೂರ್ತಿ ಇರಿಸಿದ ಬಳಿಕ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ತಹಸೀಲ್ದಾರ್ ಮಂಜುನಾಥ್‌ ಪೂಜೆ ಸಲ್ಲಿಸಿ, ಈಡುಗಾಯಿ ಒಡೆವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ರಥವು ಮುಂದೆ ಸಾಗಿ ದೇವಾಲಯದ ಉತ್ತರ ಪಾರ್ಶ್ವದಲ್ಲಿ ರಥೋತ್ಸವ ಕೊನೆಗೊಂಡಿತು.

ಮಾರಾಟ ಜೋರು: ಸ್ಕಂದಗಿರಿ ಪಾರ್ವತಿ ಬೆಟ್ಟದ ತಪ್ಪಲಿನಲ್ಲಿ ರಥೋತ್ಸವದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳು, ಗೃಹಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು, ತಂಪುಪಾನೀಯ, ಹಣ್ಣು-ಹಂಪಲು, ಸಿಹಿ ತಿಂಡಿಗಳ ಮಾರಾಟ ಜೋರಾಗಿತ್ತು. ಭಕ್ತರು ಜಾತ್ರೆಗೆ ಬಂದ ಜನರಿಗೆ ಅರವಟ್ಟಿಗೆ ತೆರೆದು ಮಜ್ಜಿಗೆ, ಪಾನಕ ನೀಡಿದರು. ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ ವಾಹನಗಳ ಓಡಾಟವೂ ಸಹ ಹೆಚ್ಚಿತ್ತು. ಪ್ರತಿ ವರ್ಷದಂತೆ ಕಂದೇಗಾಲ, ಮೊಳ್ಳಯ್ಯನಹುಂಡಿ, ಶಿಂಡನಪುರ, ಕಂದೇಗಾಲದ ಹೊಸಹಳ್ಳಿ ಗ್ರಾಮಸ್ಥರು ಪ್ರಸಾದ ವಿನಿಯೋಗ ನೆರವೇರಿಸಿದರು.

ಎಸ್ಪಿ, ಎಎಸ್ಪಿ ಭೇಟಿ: ಚಾಮರಾಜನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌, ಡಿಎಸ್ಪಿ ಲಕ್ಷ್ಮಯ್ಯ, ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ ಭೇಟಿ ಮಾಡಿ ದರ್ಶನ ಪಡೆದರು. ಶಾಸಕರೊಂದಿಗೆ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ಎಪಿಎಂಸಿ ಅಧ್ಯಕ್ಷ ಮೊಳ್ಳಯನಹುಂಡಿ ಬಸವರಾಜು, ತಾಪಂ ಮಾಜಿ ಸದಸ್ಯ ಬೆಟ್ಟಹಳ್ಳಿ ಕೆಂಪರಾಜು, ಪುರಸಭೆ ಸದಸ್ಯ ಗೌಡ್ರ ಮಧು ಇದ್ದರು.

ಪೋಲಿಸರ ಬಿಗಿ ಬಂದೋಬಸ್ತ್: ಕಳೆದ ೨೦೨೨ರ ಜಾತ್ರೆಯ ದಿನ ರಥದ ಚಕ್ರ ಹರಿದು ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆ ಗುಂಡ್ಲುಪೇಟೆ ಪೊಲೀಸರು ಈ ಬಾರಿ ರಥೋತ್ಸವದ ಮೇಲೆ ವಿಶೇಷ ನಿಗಾ ವಹಿಸಿದ್ದರು. ರಥದ ಸುತ್ತಲೂ ಸಿಐಎಸ್‌ಎಫ್ ಸಿಬ್ಬಂದಿ ಮತ್ತು ಪೊಲೀಸರು ಹಗ್ಗದ ಸರಪಳಿ ನಿರ್ಮಿಸಿ ಜನರು ಹತ್ತಿರ ಹೋಗದಂತೆ ಎಚ್ಚರ ವಹಿಸಿದ್ದ ಹಿನ್ನೆಲೆ ಜಾತ್ರೆ ಸುಗಮವಾಗಿ ನಡೆಯಿತು.