ಸಾರಾಂಶ
ಸೋಮೇಶ್ವರ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ- ಉಪಾಧ್ಯಕ ಸ್ಥಾನಕ್ಕೆ ಪುರಸಭಾ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿರುವ ನೂತನ ಸೋಮೇಶ್ವರ ಪುರಸಭೆಯ ಅಧ್ಯಕ್ಷರಾಗಿ ಕಮಲ ಅವರು ಅವಿರೋಧವಾಗಿ ಆಯ್ಕೆಯಾದರೆ, ರವಿಶಂಕರ್ ಸೋಮೇಶ್ವರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸೋಮೇಶ್ವರ ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ)ಕ್ಕೆ ಮೀಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಸೋಮೇಶ್ವರ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ- ಉಪಾಧ್ಯಕ ಸ್ಥಾನಕ್ಕೆ ಪುರಸಭಾ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಕಮಲ ಅವರಿಂದ ಏಕೈಕ ನಾಮ ಪತ್ರ ಸಲ್ಲಿಕೆಯಾಗಿದ್ದು, ಅವರು ಅವಿರೋಧವಾಗಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯ ರವಿಶಂಕರ್ ಸೋಮೇಶ್ವರ ಮತ್ತು ಕಾಂಗ್ರೆಸ್‌ನ ಯು. ಅಬ್ದುಲ್ ಸಲಾಮ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯ ರವಿಶಂಕರ್ ಅವರಿಗೆ ನಿರೀಕ್ಷೆಯಂತೆ 16 ಮತಗಳು ಲಭಿಸಿ ಜಯ ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್‌ನ ಯು. ಅಬ್ದುಲ್ ಸಲಾಮ್ ಅವರು 7 ಮತಗಳನ್ನು ಪಡೆದರು.ರಾಜ್ಯದ ಎರಡನೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಆಗಿದ್ದ ಸೋಮೇಶ್ವರವು ಪುರಸಭೆಯಾಗಿ ಮೇಲ್ದರ್ಜೆಗೇರಿ ಬರೋಬ್ಬರಿ ನಾಲ್ಕು ವರುಷದ ಬಳಿಕ ಕಳೆದ ವರ್ಷ ಡಿ.27ರಂದು 23 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಕಳೆದ ಮೂವತ್ತು ವರುಷಗಳಿಂದ ಸೋಮೇಶ್ವರ ಸ್ಥಳೀಯಾಡಳಿತವು ಬಿಜೆಪಿ ವಶದಲ್ಲಿದ್ದು ನೂತನ ಪುರಸಭೆಯಲ್ಲೂ ಬಿಜೆಪಿ ಬಹುಮತ ಪಡೆದಿತ್ತು. ಬಿಜೆಪಿ ಭರ್ಜರಿ 16 ಸ್ಥಾನಗಳನ್ನ ಗೆದ್ದು ಮೇಲುಗೈ ಸಾಧಿಸಿದರೆ ,ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನ ಗಳಿಸಿತ್ತು.
ಸೋಮೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಕಮಲ ಅವರು ಪುರಸಭೆಯ ಚುನಾವಣೆಯಲ್ಲೂ ಸ್ಫರ್ದಿಸಿ ಜಯಗಳಿಸಿ ಇದೀಗ ಮತ್ತೆ ಸೋಮೇಶ್ವರ ಪುರಸಭೆಯ ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರವಿಶಂಕರ್ ಸೋಮೇಶ್ವರ ಅವರು ತಾಲೂಕು ಪಂಚಾಯಿತಿ ಮಾಜಿ ಸದಸ್ಯರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ ಮೇಲೆ 15 ನೇ ಹಣಕಾಸಿನ ಅನುದಾನಗಳು ಬರುತ್ತವೆ.ಆ ಅನುದಾನಗಳನ್ನ ಸದ್ಭಳಕೆ ಮಾಡಲು ಸ್ಥಳೀಯ ಶಾಸಕರ ಸಹಕಾರ ಅಗತ್ಯ.ಬಂದ ಅನುದಾನಗಳನ್ನು ಶಾಸಕರು ತನ್ನ ಮೂಗಿನ ನೇರಕ್ಕೆ ವಿನಿಯೋಗಿಸಬಾರದು.ಸೋಮೇಶ್ವರ ಪುರಸಭೆಯ ನೂತನ ಅಧ್ಯಕ್ಷ,ಉಪಾಧ್ಯಕ್ಷರು ಅಭಿವೃದ್ಧಿಗೆ ಪೂರಕವಾದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂದರು.ಮಾಜಿ ವಿದಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ,ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರ್ ,ದಿ.ಮೈಸೂರು ಇಲೆಕ್ಟ್ರಿಕಲ್ಸ್ ಲಿ.ನ ನಿಕಟ ಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಕ್ಷೇತ್ರಾಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು,ಪ್ರದಾನ ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟ್ಟು, ಸುಜಿತ್ ಮಾಡೂರು,ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚ ಕ್ಷೇತ್ರಾಧ್ಯಕ್ಷ ಮುರಳಿ ಕೊಣಾಜೆ,ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯ ಸತೀಶ್ ಶೆಟ್ಟಿ,ಪ್ರಮುಖರಾದ ಯಶವಂತ ದೇರಾಜೆ,ಚಂದ್ರಶೇಖರ್ ಉಚ್ಚಿಲ್, ಯಶವಂತ ಅಮೀನ್, ಜಯಶ್ರೀ ಕರ್ಕೇರ,ಜೀವನ್ ತೊಕ್ಕೊಟ್ಟು,ಹರೀಶ್ ಅಂಬ್ಲಮೊಗರು ಮೊದಲಾವರು ಉಪಸ್ಥಿತರಿದ್ದರು.