ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸೋಮನಾಥ ದೇವಾಲಯದ ಮೂಲ ಜ್ಯೋತಿರ್ಲಿಂಗ ದರ್ಶನ, ಪೂಜಾ ಸತ್ಸಂಗ ಕಾರ್ಯಕ್ರಮ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ನಡೆಯಿತು.

ಸೋಮವಾರಪೇಟೆ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸೋಮನಾಥ ದೇವಾಲಯದ ಮೂಲ ಜ್ಯೋತಿರ್ಲಿಂಗ ದರ್ಶನ, ಪೂಜಾ ಸತ್ಸಂಗ ಕಾರ್ಯಕ್ರಮ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ನಡೆಯಿತು.

ಆರ್ಟ್ ಆಫ್ ಲಿವಿಂಗ್‌ನ ಸ್ವಾಮೀಜಿ ದಿವ್ಯಪಾದಜೀ ಅವರು ಶ್ರೀ ಸೋಮನಾಥ ಜ್ಯೋತಿರ್ಲಿಂಗದ ಬಗ್ಗೆ ಮಾಹಿತಿ ನೀಡಿದರು. ಸೋಮನಾಥ ಜ್ಯೋತಿರ್ಲಿಂಗವು ಸುವರ್ಣ ಯುಗದಲ್ಲಿ ಸಾಕ್ಷಾತ್ ಚಂದ್ರನಿಂದ ಸ್ಥಾಪಿಸಲ್ಪಟ್ಟಿದ್ದು, ಶ್ರೀ ಕೃಷ್ಣನಿಂದ ಪೂಜಿಸಲ್ಪಟ್ಟಿತ್ತು ಎಂಬ ಪ್ರತೀತಿಯಿದೆ ಎಂದು ಹೇಳಿದರು.

ಕ್ರಿಸ್ತಶಕ ೧೦೨೬ರಲ್ಲಿ ಗುಜರಾತ್‌ನ ಸೋಮನಾಥ ದೇವಸ್ಥಾನದ ಮೇಲೆ ಮಹಮ್ಮದ್ ಘಜ್ನಿ ದಾಳಿ ಮಾಡಿದ ಸಂದರ್ಭ ಶಿವಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಅರ್ಚಕರು ಸಂರಕ್ಷಿಸಿ, ಆ ಚೂರುಗಳಿಗೆ ಶಿವಲಿಂಗದ ರೂಪವನ್ನು ಕೊಟ್ಟು ನೂರಾರು ವರ್ಷಗಳ ಕಾಲ ಸಂರಕ್ಷಿಸಿಕೊಂಡು ಬಂದಿದ್ದರು. ೧೯೨೪ ರಲ್ಲಿ ಕಂಚಿ ಶ್ರೀ ಗಳು ಹೇಳಿದಂತೆ ಶ್ರೀ ರವಿಶಂಕರ್ ಗುರೂಜಿಯವರಿಗೆ ಅವುಗಳನ್ನು ಇತ್ತೀಚೆಗೆ ಹಸ್ತಾಂತರ ಮಾಡಲಾಗಿದ್ದು, ಗುರೂಜಿಯವರು ಈ ಜ್ಯೋತಿರ್ಲಿಂಗಗಳನ್ನು ಜನರಿಗೆ ದರ್ಶನ ಮಾಡಿಸುತ್ತಿದ್ದಾರೆ ಎಂದು ವಿವರಿಸಿದರು.

ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕರಾದ ಭವಾನಿ ನಾಣಯ್ಯ, ಮಧು ಮಾಚಯ್ಯ, ಟೀನಾ ಸತ್ಸಂಗ ನಡೆಸಿಕೊಟ್ಟರು. ಹಿರಿಯ ಶಿಕ್ಷಕರಾದ ಬೆಂಗಳೂರಿನ ಎಸ್. ಆರ್. ವೆಂಕಟೇಶ್, ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ರಾಹ್ಮಣ ಸಮಾಜದ ಉಪಾಧ್ಯಕ್ಷರಾದ ಸೋಮೇಶ್, ದೇವಿ ಬಳಗದ ಅಧ್ಯಕ್ಷೆ ಸುಮಾ ಆನಂದ್, ಕಾರ್ಯದರ್ಶಿ ಆಶಾ ಸತೀಶ್, ವಿದ್ಯಾ ಸೋಮೇಶ್, ರತಿ ನಂದಕುಮಾರ್, ಅರ್ಚಕ ಚಿತ್ರಕುಮಾರ್ ಭಟ್ ಅವರ ಸಹಕಾರದೊಂದಿಗೆ ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ರಾಗಿಣಿ ಕಾರ್ಯಕ್ರಮ ಆಯೋಜಿಸಿದ್ದರು. ಕುಶಾಲನಗರ ಹಾಗೂ ಸೋಮವಾರಪೇಟೆಯ ಸುತ್ತಮುತ್ತಲಿನ ಭಕ್ತರು ಮೂಲ ಸೋಮನಾಥ ಜ್ಯೋತಿರ್ಲಿಂಗದ ದರ್ಶನ ಪಡೆದರು.