ಸೋ.ಪೇಟೆ: ‘ಬೆಳ್ಳಿ ಗೆಜ್ಜೆ’ ಕವನ ಸಂಕಲನ ಬಿಡುಗಡೆ

| Published : Jul 15 2025, 11:45 PM IST

ಸಾರಾಂಶ

ಕನ್ನಡ ಸಿರಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಭಾರಧ್ವಜ್ ಕೆ. ಆನಂದತೀರ್ಥ ‘ಬೆಳ್ಳಿ ಗೆಜ್ಜೆ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಯುವ ಬರಹಗಾರ ಹೇಮಂತ್ ಪಾರೇರ ರಚಿಸಿರುವ ‘ಬೆಳ್ಳಿ ಗೆಜ್ಜೆ’ ಕೃತಿ ಬಿಡುಗಡೆ ಸಮಾರಂಭ ಪತ್ರಿಕಾಭವನದಲ್ಲಿ ಮಂಗಳವಾರ ನಡೆಯಿತು.ಕನ್ನಡ ಸಿರಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಭಾರಧ್ವಜ್ ಕೆ. ಆನಂದತೀರ್ಥ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಸರಳವಾಗಿ ಬರೆದ ಕವನಗಳು ಓದುಗರ ಹೃದಯಕ್ಕೆ ತಲುಪುತ್ತವೆ. ಯಾವುದೇ ಕಥೆ, ಕವನಗಳು ಓದುಗರಿಂದ ಓದಿಸಿಕೊಂಡು ಹೋಗುವಂತೆ, ವಿಷಯಗಳ, ಪದಗಳ ಜೋಡಣೆ ಬರಹಗಾರರಿಗೆ ಬಹು ಮುಖ್ಯವಾಗಿರುತ್ತದೆ. ಅದನ್ನು ಕವಿಗಳು ತಮ್ಮ ಕವಿತೆಯಲ್ಲಿ ಮೂಡಿಸಿದ್ದಾರೆ ಎಂದರು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಅರಿಸಿನಗುಪ್ಪೆ ಸಿದ್ಧಲಿಂಗಪುರದ ಶ್ರೀ ಮಂಜುನಾಥ ದೇವಾಲಯದ ಶ್ರೀ ರಾಜೇಶನಾಥ್ ಗುರೂಜಿ ಮಾತನಾಡಿ, ಇಂದು ಸಾಹಿತ್ಯ ಬರಹಗಾರರಿಗೆ ಸಾಕಷ್ಟು ಅವಕಾಶಗಳಿವೆ. ಪತ್ರಿಕೆ ಸೇರಿದಂತೆ, ಸಾಮಾಜಿಕ ಜಾಲತಾಣಗಳಲ್ಲೂ ಬರಹಗಾರರು ತಮ್ಮ ಬರಹವನ್ನು ಬರೆಯಲು ಅವಕಾಶಗಳು ಹೆಚ್ಚಾಗಿವೆ. ಇದು ಯುವ ಸಾಹಿತಿಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆ ಬಳಸುವವರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ನಮ್ಮ ಮಾತೃ ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದಲ್ಲಿ ಕನ್ನಡ ಭಾಷೆಯನ್ನು ಗುರುತಿಸುವ ಕೆಲಸ ನಮ್ಮಿಂದಾಗಬೇಕು ಎಂದರು.ಕೃತಿ ಪರಿಚಯವನ್ನು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಿದ್ದರು. ವೇದಿಕೆಯಲ್ಲಿ ಬರಹಗಾರರಾದ ಪವಿತ್ರ ಹೆತ್ತೂರು, ಉದ್ಯಮಿ ಸುಗುರಾಜ್ ಕುಟ್ಟಪ್ಪ ಇದ್ದರು.