ಸೋಮವಾರಪೇಟೆ: ರಾಷ್ಟ್ರಧ್ವಜಕ್ಕೆ ಅವಮಾನ ತಡೆಯಲು ಮನವಿ

| Published : Aug 11 2025, 02:17 AM IST

ಸಾರಾಂಶ

ರಾಷ್ಟ್ರ ಧ್ವಜ ದೇಶದ ಆತ್ಮವಾಗಿದ್ದು ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಆದರೆ ಅದನ್ನು ಕೆಲವರು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿ ದೂರಿದೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರಾಷ್ಟ್ರ ಧ್ವಜ ದೇಶದ ಆತ್ಮವಾಗಿದ್ದು, ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರ ಧ್ವಜವನ್ನು ಹಾರಿಸಲಾಗುತ್ತದೆ. ಆದರೆ, ಅದನ್ನು ಕೆಲವರು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿ ದೂರಿದೆ.ಆದರೆ, ಸಂಜೆಯಾಗುತ್ತಲ್ಲೆ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಇದರೊಂದಿಗೆ ಹೆಚ್ಚಿನವರು ಪ್ಲಾಸ್ಟಿಕ್ ಧ್ವಜಗಳನ್ನು ಬಳಸುವುದರಿಂದ, ಅದು, ತಕ್ಷಣವೇ ನಾಶವಾಗುವುದಿಲ್ಲ. ಆದ್ದರಿಂದ ಈ ರಾಷ್ಟ್ರ ಧ್ವಜಗಳು ಅನೇಕ ದಿನಗಳವರೆಗೆ ಅಗೌರವವನ್ನು ಕಾಣಬೇಕಾಗಿದೆ. ನ್ಯಾಯಾಲಯವು ಪ್ಲಾಸ್ಟಿಕ್ ಧ್ವಜದಿಂದ ಆಗುವ ಅವಮಾನವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆಯೂ ಈ ಸಂಬಂಧ ಸುತ್ತೋಲೆ ಹೊರಡಿಸಿತ್ತು. ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಹಾಗೂ ಬಳಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನವಾಗುವುದನ್ನು ತಡೆಯಲು ಸಮಿತಿಯು ಕಳೆದ 21 ರಿಂದ ಧ್ವಜಕ್ಕೆ ಅವಮಾನಿಸುವುದರ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕೃತಿ ಸಮಿತಿ ಸ್ಥಾಪಿಸಬೇಕು. ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಲ್ಲಿ ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಶಾಲೆಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ಉಪಕ್ರಮವನ್ನು ನಡೆಸಲು ಸೂಚನೆಗಳನ್ನು ನೀಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಯನ್ನು ತಾಲೂಕು ಕಚೇರಿಯ ಶಿರಸ್ತೇದಾರ್ ಲೋಹಿತ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಸುರೇಶ್, ಮಂಜುನಾಥ್ ಆಚಾರ್ಯ, ಆದಿತ್ಯ ಆಚಾರ್ಯ, ವಿನೋದ್ ಜಯರಾಮ್, ಸಾವಿತ್ರಿ, ದಿನೇಶ್ ಯಡವಾರೆ, ಹಿರಿಕರ ಧರ್ಮಪ್ಪ, ಪ್ರಸಾದ್ ಸೇರಿದಂತೆ ಹಲವರು ಇದ್ದರು.