ಸಾರಾಂಶ
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಜಿಲ್ಲೆಗೊಂದರಂತೆ ೧೦ ನೂತನ ವಿಶ್ವವಿದ್ಯಾಲಯಗಳನ್ನು ಘೋಷಣೆ ಮಾಡಿತ್ತು. ಈಗ ಕೊಡಗು ಸೇರಿದಂತೆ ರಾಜ್ಯದ ೯ ವಿವಿಗಳನ್ನು ಮುಚ್ಚುವ ಬಗ್ಗೆ ಸಂಪುಟ ಉಪಸಮಿತಿ ತೀರ್ಮಾನಿಸಿರುವುದು ಖಂಡನೀಯ ಎಂದು ಸೋಮವಾರಪೇಟೆ ಕೊಡವ ಸಮಾಜ ಹೇಳಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗು ವಿಶ್ವವಿದ್ಯಾನಿಲಯವನ್ನು ಸ್ಥಗಿತಗೊಳಿಸುವ ಅಥವಾ ಬೇರೆ ವಿವಿಯೊಂದಿಗೆ ವಿಲೀನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿದ್ದರೆ ತಕ್ಷಣ ಅದನ್ನು ಕೈಬಿಟ್ಟು ಕೊಡಗು ವಿಶ್ವವಿದ್ಯಾನಿಲಯವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಸೋಮವಾರಪೇಟೆ ಕೊಡವ ಸಮಾಜ ಒತ್ತಾಯಿಸಿದೆ.ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಮಾತನಾಡಿ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಜಿಲ್ಲೆಗೊಂದರಂತೆ ೧೦ ನೂತನ ವಿಶ್ವವಿದ್ಯಾಲಯಗಳನ್ನು ಘೋಷಣೆ ಮಾಡಿತ್ತು. ಈಗ ಕೊಡಗು ಸೇರಿದಂತೆ ರಾಜ್ಯದ ೯ ವಿವಿಗಳನ್ನು ಮುಚ್ಚುವ ಬಗ್ಗೆ ಸಂಪುಟ ಉಪಸಮಿತಿ ತೀರ್ಮಾನಿಸಿರುವುದು ಖಂಡನೀಯ. ಈ ನಿರ್ಧಾರಕ್ಕೆ ಕೊಡಗಿನಲ್ಲಿ ವ್ಯಾಪಕವಾಗಿ ವಿರೋಧ ಹೆಚ್ಚುತ್ತಿದ್ದು, ಜಿಲ್ಲೆಯ ಶಾಸಕರು ಈ ಕುರಿತು ಕೂಡಲೇ ಸರ್ವಪಕ್ಷಗಳ ಪ್ರಮುಖರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಕೊಡಗು ವಿವಿಯನ್ನು ಉಳಿಸಿಕೊಳ್ಳಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದರು.ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಹೊರ ಜಿಲ್ಲೆಗೆ ತೆರಳುವುದು ಅಸಾಧ್ಯವಾಗಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ವಿಶೇಷ ಪ್ರಕರಣದಡಿ ಇದನ್ನು ಪರಿಗಣಿಸಿ ಕೊಡಗು ವಿವಿಯನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್, ನಿರ್ದೇಶಕರಾದ ಹಂಚೆಟ್ಟೀರ ನಿತಿನ್ ತಮ್ಮಯ್ಯ, ಮಚ್ಚಂಡ ಪ್ರಕಾಶ್, ಮಣವಟ್ಟೀರ ಹರೀಶ್ ಅಯ್ಯಣ್ಣ ಮತ್ತಿತರರು ಇದ್ದರು.