ಸಾರಾಂಶ
ಸೋಮವಾರಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯದ್ವಾರಗಳಲ್ಲಿ ಶ್ರೀರಾಮ ಮಂದಿರದ ಬೃಹತ್ ಬ್ಯಾನರ್, ಕೇಸರಿ ಬಂಟಿಂಗ್ಸ್‌ಗಳನ್ನು ಅಳವಡಿಸಿ ಶುಭಕೋರಲಾಗಿದೆ. ಪಟ್ಟಣದ ಅಂಗಡಿಗಳಲ್ಲಿ ಅಯೋಧ್ಯೆ ಧ್ವಜಗಳ ಮಾರಾಟ ಭರದಿಂದ ಸಾಗಿದೆ. ರಾಮಭಕ್ತರು ತಮ್ಮ ವಾಹನಗಳಲ್ಲಿ ಕೇಸರಿ ಧ್ವಜಗಳನ್ನು ಅಳವಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ಮಂದಿರ ಉದ್ಘಾಟನೆ ಅಂಗವಾಗಿ ಸೋಮವಾರಪೇಟೆ ಪಟ್ಟಣ ಕೇಸರಿಮಯವಾಗಿ ಸಿಂಗಾರಗೊಂಡಿದೆ.ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ರಾಮಮಂದಿರ ಉದ್ಘಾಟನೆಯ ಸಂಭ್ರಮ ಕಂಡುಬರುತ್ತಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗುತ್ತಿದೆ.ಸೋಮವಾರಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯದ್ವಾರಗಳಲ್ಲಿ ಶ್ರೀರಾಮ ಮಂದಿರದ ಬೃಹತ್ ಬ್ಯಾನರ್, ಕೇಸರಿ ಬಂಟಿಂಗ್ಸ್‌ಗಳನ್ನು ಅಳವಡಿಸಿ ಶುಭಕೋರಲಾಗಿದೆ. ಪಟ್ಟಣದ ಅಂಗಡಿಗಳಲ್ಲಿ ಅಯೋಧ್ಯೆ ಧ್ವಜಗಳ ಮಾರಾಟ ಭರದಿಂದ ಸಾಗಿದೆ. ರಾಮಭಕ್ತರು ತಮ್ಮ ವಾಹನಗಳಲ್ಲಿ ಕೇಸರಿ ಧ್ವಜಗಳನ್ನು ಅಳವಡಿಸಿಕೊಂಡಿದ್ದಾರೆ.ಈಗಾಗಲೇ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನಿಂದ ವಿತರಿಸಲಾಗಿರುವ ಅಕ್ಷತೆಯನ್ನು ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ಕೆಲವು ದೇವಾಲಯಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.
ಜ.22ರಂದು ಪಟ್ಟಣದ ಶ್ರೀರಾಮ ಮಂದಿರ, ಗಣಪತಿ ದೇವಾಲಯ, ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯ, ಆಂಜನೇಯ ದೇವಾಲಯ, ಶ್ರೀಮುತ್ತಪ್ಪ-ಅಯ್ಯಪ್ಪ ದೇವಾಲಯ, ಬಜೆಗುಂಡಿ ಅಯ್ಯಪ್ಪ ದೇವಾಲಯ, ಸಿದ್ದಲಿಂಗಪುರ-ಅರಶಿನಕುಪ್ಪೆಯ ಶ್ರೀಮಂಜುನಾಥ ಮತ್ತು ನವನಾಗನಾಥ ಸನ್ನಿಧಿ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಲವೊಂದು ದೇವಾಲಯಗಳಲ್ಲಿ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ತಮ್ಮ ತಮ್ಮ ಗ್ರಾಮಗಳಲ್ಲಿರುವ ದೇವಾಲಯಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಶೇಷ ಪೂಜೆಗಳನ್ನು ನಿರ್ವಹಿಸುವುದು, ಸಂಜೆ ಮನೆಗಳಲ್ಲಿ 5 ದೀಪಗಳನ್ನು ಬೆಳಗಿಸಿ ಉತ್ತರಾಭಿಮುಖವಾಗಿ ಆರತಿ ಮಾಡುವುದು, ಕುಟುಂಬ ವರ್ಗದೊಂದಿಗೆ ಪೂಜೆಗಳನ್ನು ನೆರವೇರಿಸಬೇಕೆಂಬ ಸೂಚನೆಯನ್ನು ಕಾರ್ಯಕರ್ತರಿಗೆ ನೀಡಲಾಗಿದ್ದು, ಅದರಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಪ್ರಮುಖರು ತಿಳಿಸಿದ್ದಾರೆ.