ಜಮೀನಿನ ಆಸೆಗೆ ತಾಯಿಯನ್ನೇ ಕೊಂದ ಮಗ ಬಂಧನ

| Published : Jun 27 2024, 01:15 AM IST

ಜಮೀನಿನ ಆಸೆಗೆ ತಾಯಿಯನ್ನೇ ಕೊಂದ ಮಗ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಜಮೀನಿನ ಆಸೆಗೆ ಹೆತ್ತ ತಾಯಿಯನ್ನೇ ಕೊಂದ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಪಾವಗಡ ತಾಲೂಕಿನ ಮಾಚಿರಾಜನಹಳ್ಳಿಯಲ್ಲಿ ನಡೆದಿದೆ.

ತುಮಕೂರು/ ಪಾವಗಡ: ಜಮೀನಿನ ಆಸೆಗೆ ಹೆತ್ತ ತಾಯಿಯನ್ನೇ ಕೊಂದ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಪಾವಗಡ ತಾಲೂಕಿನ ಮಾಚಿರಾಜನಹಳ್ಳಿಯಲ್ಲಿ ನಡೆದಿದೆ.

ಚಂದ್ರಕ್ಕ(50) ಕೊಲೆಯಾದವರು. ಆಂಧ್ರ ಪ್ರದೇಶ ಶ್ರೀ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ಎಲ್ಲೋಟಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು. ಐದು‌ ದಿನಗಳ ಹಿಂದೆ ಬೇವಿನ ಬೀಜ ಸಂಗ್ರಹಿಸಲು ತೆರಳಿದ್ದ ಚಂದ್ರಕ್ಕನನ್ನು ಕತ್ತುಕೊಯ್ದು ಹತ್ಯೆ ಮಾಡಲಾಗಿತ್ತು. ತನ್ನ ತಾಯಿಯನ್ನ ಕೊಂದವರನ್ನು ಬಂಧಿಸಿ‌ ನ್ಯಾಯ ಕೊಡಿಸುವಂತೆ ಸ್ವತಃ ಹಂತಕ ಮಗನೆ ಪಾವಗಡ ಪೊಲೀಸ್ ಠಾಣೆಗೆ‌ ದೂರು ನೀಡಿದ್ದ. ಪೊಲೀಸ್ ತನಿಖೆ ವೇಳೆ ಚಂದ್ರಕ್ಕನ ಮಗ ಆಂಜನೇಯಲುನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಆಂಜನೇಯಲುಗೆ ಸಾಥ್ ನೀಡಿದ್ದ ಪ್ರಭಾಕರ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿಯನ್ನು ವಿಚಾರಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಚಂದ್ರಕ್ಕನ ಹೆಸರಿನಲ್ಲಿದ್ದ ಐದು ಎಕರೆ ಜಮೀನು ಹತ್ಯೆಗೆ ಪ್ರಮುಖ ಕಾರಣ ಎಂಬ ವಿಷಯ ಬಯಲಾಗಿದೆ. ಜೂನ್ 20 ರಂದು ಬೇವಿನ ಬೀಜ ಸಂಗ್ರಹಿಸಲು ನೀಲಗಿರಿ ತೋಪಿಗೆ ಹೋಗಿದ್ದ ಚಂದ್ರಕ್ಕನನ್ನು ಹತ್ಯೆ ಮಾಡಲಾಗಿತ್ತು. ಸರ್ಕಾರ ಮಂಜೂರು ಮಾಡಿದ ಐದು ಎಕರೆ ಜಮೀನನ್ನು ಮಗಳ ಹೆಸರಿಗೆ ವರ್ಗಾಯಿಸುವುದಾಗಿ ಚಂದ್ರಕ್ಕ ಹೇಳಿದ್ದರು. ಇದೇ ವಿಷಯವಾಗಿ ತಾಯಿ ಮತ್ತು ಮಗನ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ.