ಸಾರಾಂಶ
ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೊಡಲಿಯಿಂದ ಹೊಡೆದು ತಾಯಿಯನ್ನೆ ಮಗ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು: ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೊಡಲಿಯಿಂದ ಹೊಡೆದು ತಾಯಿಯನ್ನೆ ಮಗ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.
ಭವಾನಿ (52) ಮಗನಿಂದಲೇ ಹತ್ಯೆಯಾದ ದುರ್ಧೈವಿ. ತಾಯಿ ಕೊಲೆ ಮಾಡಿದ ಪವನ್ (28) ಇದೀಗ ಪೊಲೀಸರ ಅತಿಥಿ ಯಾಗಿದ್ದಾನೆ.
ಬುಧವಾರ ರಾತ್ರಿ ಪವನ್ ಮದ್ಯಪಾನ ಮಾಡಲು ಹಣ ನೀಡುವಂತೆ ತಾಯಿ ಜತೆ ಜಗಳ ತೆಗೆದಿದ್ದಾನೆ. ಹಣ ನೀಡಲು ನಿರಾಕರಿಸಿದ ಆಕೆಯ ಮೇಲೆ ಆಕ್ರೋಶಗೊಂಡ ಪವನ್ ಮನೆಯಲ್ಲಿದ್ದ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮನೆ ಒಳಗೆ ತಾಯಿ ಮೃತ ದೇಹಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಭವಾನಿಯವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದು ಕೈ ಮತ್ತು ಕಾಲುಗಳು ಮಾತ್ರ ಉಳಿದುಕೊಂಡಿದ್ದವು. ಮದ್ಯದ ಅಮಲಿನಲ್ಲಿದ್ದ ಪವನ್ ತಾಯಿ ಹತ್ಯೆ ಮಾಡಿದ ಪರಿವೆಯೇ ಇಲ್ಲದೆ ತಾಯಿಯನ್ನು ಸುಟ್ಟ ಜಾಗದಲ್ಲಿಯೇ ಪ್ರಜ್ಞೆ ಇಲ್ಲದವನಂತೆ ಮಲಗಿದ್ದನು.
ಮಗ ತಾಯಿ ಜತೆ ದುಡ್ಡಿಗಾಗಿ ಜಗಳ ಮಾಡುವಾಗ ಅದನ್ನು ಬಿಡಿಸಲು ಹೋದ ತಂದೆ ಸೋನೆಗೌಡನ ಮೇಲೂ ಪವನ್ ಹಲ್ಲೆಗೆ ಮುಂದಾಗಿದ್ದರಿಂದ ಹೆದರಿ ರಾತ್ರಿ ಅಲ್ಲಿಂದ ಓಡಿ ಹೋಗಿದ್ದರು. ಕೆಲ ಸಮಯದ ಬಳಿಕ ಮನೆಗೆ ತಂದೆ ಹಿಂದುರಿಗಿದಾಗ ಹೆಂಡತಿ ಹತ್ಯೆಯಾಗಿರುವುದು ತಿಳಿದು ಅವರು ಆಲ್ದೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತಾಯಿ ಹತ್ಯೆ ಮಾಡಿ ಪಕ್ಕದಲ್ಲಿಯೇ ಪ್ರಜ್ಞೆ ಇಲ್ಲದೆ ಮಲಗಿದ್ದ ಪವನ್ ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪವನ್ 2 ತಿಂಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದಿದ್ದ. ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಸಂಜೆ ವೇಳೆ ಮದ್ಯಪಾನ ಮಾಡಿ ನಿರಂತರವಾಗಿ ತಂದೆ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ತಂದೆಗೆ ಲೆದರ್ ಬೆಲ್ಟ್ ನಿಂದ ಬೆನ್ನಿನ ಚರ್ಮ ಕಿತ್ತು ಬರುವಂತೆ ಹೊಡೆದಿದ್ದ. ಆಗ ಸ್ಥಳೀಯರು ಪವನ್ ಗೆ ಬುದ್ಧಿ ಹೇಳಿದರು. ಆದರೆ ತಂದೆ ತಾಯಿ, ಮಗ ಎನ್ನುವ ಕಾರಣಕ್ಕೆ ಅಂದು ಪೊಲೀಸರಿಗೆ ದೂರು ನೀಡಿರಲಿಲ್ಲ. ಇಷ್ಟು ದಿನ ತಂದೆ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ಮಗ ಇಂದು ತಾಯಿಯನ್ನೇ ಕೊಲೆ ಮಾಡಿರುವುದರಿಂದ ಸ್ಥಳೀಯರು ಭಯಗೊಂಡಿದ್ದಾರೆ.