ಸಾರಾಂಶ
ಬೆಂಗಳೂರು : ಸಾಲಭಾದೆ ಹಾಗೂ ತಾಯಿಯ ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುತ್ರನ ಆತ್ಮಹತ್ಯೆ ಬೆಳಕಿಗೆ ಬಂದ 3 ತಾಸಿನ ಬಳಿಕ ಅನಾರೋಗ್ಯ ಪೀಡಿತ ತಾಯಿ ಸಹ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕಾಮಾಕ್ಷಿಪಾಳ್ಯದ ಕಾವೇರಿಪುರ ನಿವಾಸಿ ಅರುಣ್ ಕುಮಾರ್(37) ಮೃತ ದುರ್ದೈವಿ. ಈತನ ತಾಯಿ ಸರಸ್ವತಿ(73) ಮೃತಪಟ್ಟವರು. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮೃತ ಸ್ವರಸ್ವತಿ ಅವರ 3 ಗಂಡು ಮಕ್ಕಳ ಪೈಕಿ ಹಿರಿಯ ಮತ್ತು ಕೊನೆಯ ಮಗ ಪ್ರತ್ಯೇಕವಾಗಿ ವಾಸವಾಗಿದ್ದಾರೆ. 2ನೇ ಮಗ ಅರುಣ್ ಕುಮಾರ್ ಜತೆಗೆ ಸರಸ್ವತಿ ಕಾವೇರಿಪುರದಲ್ಲಿ ವಾಸಿಸುತ್ತಿದ್ದರು. ಅರುಣ್ ಕುಮಾರ್ ಅವಿವಾಹಿತನಾಗಿದ್ದು, ಕ್ಯಾಬ್ ಚಾಲಕನಾಗಿದ್ದ. ಸಾಕಷ್ಟು ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದ. 1 ವರ್ಷದ ಹಿಂದೆ ಸ್ನಾನದ ಕೋಣೆಯಲ್ಲಿ ತಾಯಿ ಸರಸ್ವತಿ ಅವರು ಜಾರಿ ಬಿದ್ದು ಬೆನ್ನು ಮೂಳೆ ಮುರಿದುಕೊಂಡಿದ್ದರು. ಚಿಕಿತ್ಸೆ ಪಡೆಯುತ್ತಾ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಹೀಗಾಗಿ ಅರುಣ್ ಕುಮಾರ್ ತಾಯಿಯ ಆರೈಕೆ ಮಾಡುತ್ತಿದ್ದ.
ಡೆತ್ ನೋಟ್ ಬರೆದು ಆತ್ಮಹತ್ಯೆ:
ಸಾಲಭಾದೆ ಹಾಗೂ ತಾಯಿಯ ಅನಾರೋಗ್ಯದಿಂದ ಅರುಣ್ ಕುಮಾರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಭಾನುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ 12.30ಕ್ಕೆ ಸಹೋದರ ಮನೆಗೆ ಬಂದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅರುಣ್ ಕುಮಾರ್ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಮರಣಪತ್ರ ಸಿಕ್ಕಿದ್ದು, ಅದರಲ್ಲಿ ತನ್ನ ಸಾಲ, ತಾಯಿಯ ಅನಾರೋಗ್ಯದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿರುವುದು ಕಂಡು ಬಂದಿದೆ. ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
3 ತಾಸಿನ ಬಳಿಕ ತಾಯಿ ಸಾವು:
ಪುತ್ರ ಅರುಣ್ ಕುಮಾರ್ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದು 3 ತಾಸಿನ ಬಳಿಕ ಅನಾರೋಗ್ಯಪೀಡಿತ ತಾಯಿ ಸರಸ್ವತಿ ತಾವು ಮಲಗಿದ್ದ ಹಾಸಿಗೆಯಲ್ಲೇ ಮೃತಪಟ್ಟಿದ್ದಾರೆ. ಮಗನ ಆತ್ಮಹತ್ಯೆಯ ಆಘಾತ ಹಾಗೂ ಅನಾರೋಗ್ಯದಿಂದ ಆಕೆ ಮೃತಪಟ್ಟಿರುವ ಸಾಧ್ಯತೆಯಿದೆ. ಆತ್ಮಹತ್ಯೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
;Resize=(690,390))
;Resize=(128,128))
;Resize=(128,128))