ಪಟ್ಟಣದ ಖಾಜೇಖಾನ್ ಗಲ್ಲಿಯ ಹೂರಾಂಬಿ ಜಂಗ್ಲಿಸಾಬ್ ಮುಲ್ಕಿ(೬೦) ಎಂಬುವರೇ ದೂರು ದಾಖಲಿಸಿದ್ದು, ಹುಬ್ಬಳ್ಳಿಯಲ್ಲಿ ವಾಸವಿರುವ ಅವರ ಏಕೈಕ ಪುತ್ರ ಶೌಕತ್ ಅಲಿ ಮುಲ್ಕಿ(೩೯) ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಶಿಗ್ಗಾಂವಿ: ಜೀವಂತ ಇರುವಾಗಲೇ ಸುಳ್ಳು ಅರ್ಜಿ ನೀಡಿ ತಾಯಿಯ ಮರಣ ಪ್ರಮಾಣಪತ್ರ ಪಡೆದು ವ್ಯಕ್ತಿಯೊಬ್ಬ ಆಸ್ತಿ ಕಬಳಿಸಲು ಪ್ರಯತ್ನಿಸಿ ಪೊಲೀಸರ ಅತಿಥಿಯಾದ ಘಟನೆ ಪಟ್ಟಣದ ಖಾಜೇಖಾನ್ ಗಲ್ಲಿಯಲ್ಲಿ ನಡೆದಿದೆ. ಮರಣ ಪ್ರಮಾಣಪತ್ರ ನೀಡಿದ ಪುರಸಭೆಯ ಅಧಿಕಾರಿಗೂ ನೋಟಿಸ್ ನೀಡಲಾಗಿದೆ.

ಪಟ್ಟಣದ ಖಾಜೇಖಾನ್ ಗಲ್ಲಿಯ ಹೂರಾಂಬಿ ಜಂಗ್ಲಿಸಾಬ್ ಮುಲ್ಕಿ(೬೦) ಎಂಬುವರೇ ದೂರು ದಾಖಲಿಸಿದ್ದು, ಹುಬ್ಬಳ್ಳಿಯಲ್ಲಿ ವಾಸವಿರುವ ಅವರ ಏಕೈಕ ಪುತ್ರ ಶೌಕತ್ ಅಲಿ ಮುಲ್ಕಿ(೩೯) ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.ಘಟನೆಯ ಹಿನ್ನೆಲೆ: ದೂರುದಾರರ ಪತಿ ೨೦೦೧ರಲ್ಲೇ ತೀರಿಕೊಂಡಿದ್ದು, ಪುತ್ರ ಶೌಕತ್ ಅಲಿ ಸುಮಾರು ೧೦ ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಬೇರೆ ಮನೆ ಮಾಡಿಕೊಂಡು ಪತ್ನಿಯೊಂದಿಗೆ ವಾಸವಾಗಿದ್ದಾನೆ. ಹೂರಾಂಬಿ ಶಿಗ್ಗಾಂವಿಯಲ್ಲಿ ಒಂಟಿಯಾಗಿ ವಾಸವಿದ್ದಾರೆ. ೨ ಎಕರೆ ಜಮೀನು ಹೂರಾಂಬಿ ಹಾಗೂ ಪುತ್ರನ ಜಂಟಿ ಖಾತೆಯ ಹೆಸರಿನಲ್ಲಿದೆ. ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಮಗ, ಆರೋಪಿ ಶೌಕತ್ ಪುರಸಭೆಯಲ್ಲಿ ೨೦೨೫ರ ಮೇ ೬ರಂದು ಶಿಗ್ಗಾಂವಿ ಪಟ್ಟಣದ ಖಾಜೆಖಾನ್ ಗಲ್ಲಿಯಲ್ಲಿ ತಾಯಿ ಮರಣ ಹೊಂದಿದ್ದಾಳೆ ಎಂದು ಮರಣ ಪ್ರಮಾಣಪತ್ರವನ್ನು ಪಡೆದಿದ್ದಾನೆ. ಈ ವಿಷಯ ಆತನ ತಾಯಿಗೆ ಗೊತ್ತಾಗಿದ್ದು, ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಾನೂನು ಕ್ರಮ: ಜನನ, ಮರಣ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿ ನೀಡಬೇಕು. ಪಟ್ಟಣದ ಖಾಜೇಖಾನ್ ಗಲ್ಲಿಯ ನಿವಾಸಿ ಹೂರಾಂಬಿ ಅವರ ಮರಣ ಪ್ರಮಾಣಪತ್ರ ನೀಡಿರುವ ಅಧಿಕಾರಿಗೆ ನೋಟಿಸ್ ನೀಡಲಾಗಿದ್ದು, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ತಿಳಿಸಿದರು.

ಕರ್ತವ್ಯಲೋಪ: ಶಿಗ್ಗಾಂವಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪದಿಂದ ಈ ಘಟನೆ ನಡೆದಿದೆ. ಹೂರಾಂಬಿ ಜಂಗ್ಲಿಸಾಬ್ ಮುಲ್ಕಿ ಅವರು ನನ್ನ ವಾರ್ಡ್ ನಿವಾಸಿಯಾಗಿದ್ದು, ವಾರ್ಡ್ ಜನಪ್ರತಿನಿಧಿಯಾಗಿರುವ ನನ್ನ ಗಮನಕ್ಕೂ ತಾರದೆ ಅವರು ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪುರಸಭೆ ಸದಸ್ಯ ದಯಾನಂದ ಅಕ್ಕಿ ತಿಳಿಸಿದರು.ದುರುದ್ದೇಶ: ನಾನು ಜೀವಂತ ಇರುವಾಗಲೇ ನನ್ನ ಮಗ ಶೌಕತ್ ಅಲಿ ನಮ್ಮಿಬ್ಬರ ಜಂಟಿ ಹೆಸರಿನಲ್ಲಿರುವ ಆಸ್ತಿಯನ್ನು ಮೋಸದಿಂದ ಕಬಳಿಸುವ ದುರುದ್ದೇಶದಿಂದ ಪುರಸಭೆಗೆ ಸುಳ್ಳು ಅರ್ಜಿ ಕೊಟ್ಟು ಮರಣ ಪ್ರಮಾಣಪತ್ರ ಸೃಷ್ಟಿಸಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಿಗ್ಗಾಂವಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ದೂರು ದಾಖಲಿಸಿರುವ ವೃದ್ಧೆ ಹೂರಾಂಬಿ ತಿಳಿಸಿದರು.ಸೋರುವ ಸಾರಿಗೆ ಬಸ್: ಪ್ರಯಾಣಿಕರ ಆಕ್ರೋಶ

ಹಾವೇರಿ: ಸಾರಿಗೆ ಬಸ್‌ನಲ್ಲಿ ತಟ ತಟ ಎಂದು ಮಳೆನೀರು ಪ್ರಯಾಣಿಕರ ತಲೆ ಮೇಲೆ ಬಿದ್ದ ಘಟನೆ ಗುರುವಾರ ಹೊಸರಿತ್ತಿಯಿಂದ ಸವಣೂರಿಗೆ ಹೋಗುವ ಬಸ್‌ನಲ್ಲಿ ಜರುಗಿದೆ.ಸವಣೂರು ಡಿಪೋಗೆ ಸೇರಿದ ಸಾರಿಗೆ ಬಸ್ ಇದಾಗಿದ್ದು, ಸವಣೂರಿನಿಂದ ಹೊಸರಿತ್ತಿಗೆ ಸಂಚರಿಸುತ್ತದೆ. ಅದೇ ರೀತಿ ಗುರುವಾರ ಜಿಟಿ ಜಿಟಿ ಮಳೆ ಬೀಳುತ್ತಿತ್ತು. ಆ ವೇಳೆ ಬಸ್‌ ಸಂಚರಿಸುವಾಗ ಚಾವಣಿಯಿಂದ ನೀರು ಸೋರುತ್ತಿದ್ದು, ಪ್ರಯಾಣಿಕರು ನೀರಿನಿಂದ ರಕ್ಷಣೆ ಪಡೆಯಲು ಹರಸಾಹಸ ಪಟ್ಟರು. ಸರ್ಕಾರಿ ಬಸ್‌ನ ಈ ಅವ್ಯವಸ್ಥೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.