ಕಾಯಕಲ್ಪಕ್ಕೆ ಕಾದಿದೆ ಸೋಂದಾ ಕೋಟೆ

| Published : Sep 07 2024, 01:31 AM IST

ಸಾರಾಂಶ

ಶಾಲ್ಮಲಾ ನದಿ ಪಕ್ಕದಲ್ಲಿ ನೇರವಾಗಿ ಕೋಟೆಗೆ ಹೋಗುವ ರಸ್ತೆಗೆ ಸಂಪರ್ಕಿಸಲು ತೂಗು ಸೇತುವೆ ನಿರ್ಮಿಸಬೇಕು. ಹಾಗಾದರೆ ಮಾತ್ರ ಐತಿಹಾಸಿಕ ಕೋಟೆಗೆ ಮತ್ತಷ್ಟು ಮೆರುಗು ಬರುತ್ತದೆ ಎಂದು ಸೋಂದಾ ಜಾಗೃತ ವೇದಿಕೆಯ ಸಂಚಾಲಕ ರತ್ನಾಕರ ಹೆಗಡೆ ಆಗ್ರಹಿಸಿದರು.

ಶಿರಸಿ: ಐತಿಹಾಸಿಕ ಪುರಾಣ ಕ್ಷೇತ್ರವಾದ ಸೋಂದಾದಲ್ಲಿರುವ ಶತಮಾನಗಳ ಹಿಂದಿನ ಕೋಟೆಯ ಬಹುತೇಕ ಸ್ಮಾರಕಗಳು ಜೀರ್ಣಾವಸ್ಥೆಯಲ್ಲಿದ್ದು, ಅವುಗಳ ರಕ್ಷಣೆಗೆ ಸಂಬಧಿಸಿದ ಇಲಾಖೆ ಮುಂದಾಗಬೇಕೆಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

ಸಹ್ಯಾದ್ರಿ ಪಾರಂಪರಿಕ ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ತಾಲೂಕಿನ ಸೋಂದಾ ಕೋಟೆ ಹಲವು ಐತಿಹಾಸಿಕ ಘಟನೆಗಳನ್ನು ಒಳಗೊಂಡಿದೆ. ವಿಜಯನಗರದ ಸಾಮಂತರಾಗಿದ್ದ ಸೋದೆ ಅರಸರು ಯಾವ ಚಕ್ರವರ್ತಿಗಳಿಗೂ ಕಮ್ಮಿ ಇಲ್ಲದಂತೆ ರಾಜ್ಯಭಾರ ನಡೆಸಿದ್ದರು. ಅದರಲ್ಲಿ ಸೋದೆ ಸದಾಶಿವರಾಯ ಸುಂಕೇರಿಯಿಂದ ಕಾರವಾರದ ಮುತ್ತಿಗೆಗೆ ಬಂದ ಬ್ರಿಟಿಷರನ್ನು ಸೋಲಿಸಿದ ಮಹಾನ್ ಪರಾಕ್ರಮಿ ಎಂದೇ ಖ್ಯಾತಿ ಪಡೆದ ವ್ಯಕ್ತಿ.

ಇಂತಹ ಐತಿಹಾಸಿಕ ಪುರುಷರು ಶಾಲ್ಮಲಾ ನದಿಯ ದಡದಲ್ಲಿ ನಿರ್ಮಿಸಿದ್ದ ಕೋಟೆಯಲ್ಲಿ ಈಗಲೂ ರಾಜಮನೆತನದ ಅವಶೇಷಗಳಾದ ಸಣ್ಣ ದೇವಾಲಯ, ಕೆಲವು ಫಿರಂಗಿಗಳು ಮತ್ತು ಅಲಂಕರಿಸಲ್ಪಟ್ಟ ಒಂದು ಕಲ್ಲಿನ ಮಂಚವನ್ನು ಸಂರಕ್ಷಿಸಲಾಗಿದೆ. ಉಳಿದಂತೆ ಇಡೀ ಕೋಟೆ ಆವರಣ ಕಾಡಿನಂತೆ ಭಾಸವಾಗುತ್ತಿದ್ದು, ನೂರಾರು ಸ್ಮಾರಕಗಳು ರಕ್ಷಣೆಯಿಲ್ಲದೆ ಸೊರಗಿವೆ.

ಕಲ್ಲಿನ ದೋಣಿಗಳು, ಎರಡು ಫಿರಂಗಿ, ವೀರಗಲ್ಲು, ರಾಣಿಯರ ಸ್ನಾನ ಗೃಹ, ದೇವರ ಮೂಲ, ಕುದುರೆ ಲಾಯ, ನಕ್ಷತ್ರ ಬಾವಿ, ರಾಟಾಳ ಬಾವಿ, ರಾಜರಕಾಲದ ಗೋಪುರ, ಅಡುಗೆ ಮನೆಯ ಅವಶೇಷಗಳು ಸೇರಿ ಹಲವು ಸ್ಮಾರಕಗಳು ಅಲ್ಲಲ್ಲಿ ಮಣ್ಣಿಗೆ ಬಿದ್ದು, ಮೂಲ ಸ್ವರೂಪ ಕಳೆದುಕೊಳ್ಳುತ್ತಿವೆ. ಇವುಗಳ ಜತೆ ಕೋಟೆ ಆವರಣದಲ್ಲಿರುವ ಶಿವಮಂದಿರ ಜೀರ್ಣಗೊಳ್ಳುತ್ತಿದೆ. ಶಾಲ್ಮಲಾ ಸಂಗಮದ ಬಳಿ ನಿರ್ಮಿಸಿರುವ ಪಿಚ್ಚಿಂಗ್ ಕುಸಿಯುತ್ತಿದೆ. ಆದರೆ ಇವುಗಳನ್ನು ರಕ್ಷಿಸಬೇಕಿರುವ ಕೇಂದ್ರ ಪುರಾತತ್ವ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಸ್ಮಾರಕಗಳು ಎಲ್ಲಿವೆಯೋ ಅಲ್ಲಿಯೇ ಕಟ್ಟೆ, ಶೆಡ್ ನಿರ್ಮಿಸಿ ರಕ್ಷಿಸುವ ಕೆಲಸ ಆಗಬೇಕು. ಇವುಗಳ ವೀಕ್ಷಣೆಗೆ ಪೂರಕ ಫುಟ್‌ಪಾತ್ ನಿರ್ಮಿಸಬೇಕು. ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು. ಕಾಯಂ ವಾಚ್‌ಮನ್ ನೇಮಿಸಬೇಕು. ಕೋಟೆ ಬಗ್ಗೆ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡಲು ಗೈಡ್ ನೇಮಿಸಬೇಕು. ವಿಶ್ರಾಂತಿ ಗೃಹ, ಶೌಚಾಲಯ ನಿರ್ಮಿಸುವ ಜತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಲ್ಮಲಾ ನದಿ ಪಕ್ಕದಲ್ಲಿ ನೇರವಾಗಿ ಕೋಟೆಗೆ ಹೋಗುವ ರಸ್ತೆಗೆ ಸಂಪರ್ಕಿಸಲು ತೂಗು ಸೇತುವೆ ನಿರ್ಮಿಸಬೇಕು. ಹಾಗಾದರೆ ಮಾತ್ರ ಐತಿಹಾಸಿಕ ಕೋಟೆಗೆ ಮತ್ತಷ್ಟು ಮೆರುಗು ಬರುತ್ತದೆ ಎಂದು ಸೋಂದಾ ಜಾಗೃತ ವೇದಿಕೆಯ ಸಂಚಾಲಕ ರತ್ನಾಕರ ಹೆಗಡೆ ಆಗ್ರಹಿಸಿದರು.

ಪಾರಂಪರಿಕ ತಾಣ: ಸೋಂದಾ ಕೋಟೆ ಪ್ರದೇಶದಲ್ಲಿ ಇನ್ನಷ್ಟು ಉತ್ಖನನ, ಐತಿಹಾಸಿಕ ಅಭ್ಯಾಸ ಕೈಗೊಳ್ಳಬೇಕು. ಕೋಟೆ ಜಾಗದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ಜಾರಿ ಮಾಡಬೇಕು. ಕೋಟೆಯನ್ನು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸಬೇಕು. ಈಗಾಗಲೇ ಜೀವವೈವಿಧ್ಯ ಮಂಡಳಿಗೆ ಸಲ್ಲಿಕೆಯಾದ ಪ್ರಸ್ತಾವಕ್ಕೆ ಅನುಮತಿ ನೀಡಬೇಕು ಎಂದು ಸೋಂದಾ ಜಾಗೃತ ವೇದಿಕೆ ಸಂಚಾಲಕ ರತ್ನಾಕರ ಹೆಗಡೆ ತಿಳಿಸಿದರು.