ಅಪ್ಪ ಪ್ರತಿನಿಧಿಸುತ್ತಿದ್ದ ಶಿಗ್ಗಾಂವಿ ಕ್ಷೇತ್ರಕ್ಕೆ ಮಗನಿಗೆ ಟಿಕೆಟ್‌

| Published : Oct 20 2024, 01:56 AM IST

ಅಪ್ಪ ಪ್ರತಿನಿಧಿಸುತ್ತಿದ್ದ ಶಿಗ್ಗಾಂವಿ ಕ್ಷೇತ್ರಕ್ಕೆ ಮಗನಿಗೆ ಟಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಗೆ ಬಿಜೆಪಿಯಿಂದ ಭರತ್‌ ಬೊಮ್ಮಾಯಿಗೆ ಟಿಕೆಟ್‌ ಘೋಷಣೆಯಾಗಿದ್ದು, ಅಪ್ಪ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಮಗನ ರಾಜಕೀಯ ಎಂಟ್ರಿಯಾಗಿದೆ. ಆ ಮೂಲಕ ಉಪಕದನಕ್ಕೆ ರೋಚಕತೆ ಬಂದಿದೆ.

ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ, ಹಾವೇರಿಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಗೆ ಬಿಜೆಪಿಯಿಂದ ಭರತ್‌ ಬೊಮ್ಮಾಯಿಗೆ ಟಿಕೆಟ್‌ ಘೋಷಣೆಯಾಗಿದ್ದು, ಅಪ್ಪ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಮಗನ ರಾಜಕೀಯ ಎಂಟ್ರಿಯಾಗಿದೆ. ಆ ಮೂಲಕ ಉಪಕದನಕ್ಕೆ ರೋಚಕತೆ ಬಂದಿದೆ.

ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್‌ ಎಂಬ ಕುತೂಹಲಕ್ಕೆ ತೆರೆಬಿದ್ದಂತಾಗಿದೆ. ಬಿಜೆಪಿ ಟಿಕೆಟ್‌ಗಾಗಿ 57 ಜನ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಗೆಲ್ಲುವ ಮಾನದಂಡದ ಆಧಾರದಲ್ಲಿ ಭರತ್‌ಗೆ ಟಿಕೆಟ್‌ ದಕ್ಕಿದೆ. 2008ರಿಂದ ಸತತ ನಾಲ್ಕು ಸಲ ಶಿಗ್ಗಾಂವಿ ಕ್ಷೇತ್ರದಿಂದ ಗೆದ್ದು ಬಂದಿರುವ ಬಸವರಾಜ ಬೊಮ್ಮಾಯಿ ಈಗ ಪುತ್ರನಿಗೆ ರಾಜಕೀಯ ಎಂಟ್ರಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಜಿನಿಯರ್‌ ಪದವೀಧರ ಭರತ್‌: 35 ವರ್ಷದ ಭರತ್‌ ಬೊಮ್ಮಾಯಿ ವಿದೇಶದಲ್ಲಿ ಎಂಜಿನಿಯರಿಂಗ್‌ ಮತ್ತು ಎಂಬಿಎ ವ್ಯಾಸಂಗ ಮಾಡಿದ್ದಾರೆ. 1989ರಲ್ಲಿ ಜನಿಸಿರುವ ಇವರು, ಅಮೆರಿಕಾ ದೇಶದ ಇಂಡಿಯಾನಾ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಪೂರೈಸಿದ್ದಾರೆ. ಸಿಂಗಾಪುರ ಯುನಿವರ್ಸಿಟಿಯಲ್ಲಿ ಎಂಬಿಎ ಮಾಡಿದ್ದಾರೆ. ವಿದ್ಯಾಭ್ಯಾಸದ ಬಳಿಕ ರಾಜಕೀಯಕ್ಕಿಂತ ಉದ್ಯಮದ ಕಡೆ ಆಸಕ್ತಿ ತೋರಿ ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಆಟೋಟೆಕ್‌ ಎಂಜಿನಿಯರ್ಸ್‌, ವಾಲ್ಟೆಕ್‌ ಕಾರ್ಪೋರೇಶನ್‌, ವಾಲ್ಟೆಕ್‌ ಇಂಡಸ್ಟ್ರೀಸ್‌, ಅಶ್ವ ಎನರ್ಜಿ, ಐಬಿ ಕ್ಯೂಬ್‌, ಪ್ರಭಂಜನ ಅಪೀರಲ್ಸ್‌, ಬ್ಲೇಜ್ಡ್‌ ಫಾರ್ಮಾ ಮುಂತಾದ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಎರಡು ಚುನಾವಣೆಗಳಿಂದ ಅಪ್ಪನ ಪರವಾಗಿ ಸಕ್ರಿಯವಾಗಿ ಚುನಾವಣಾ ಪ್ರಚಾರ ನಡೆಸುತ್ತ ರಾಜಕೀಯದ ಪಟ್ಟುಗಳನ್ನೂ ಕಲಿತಿದ್ದಾರೆ. ಇದೀಗ ನೇರವಾಗಿ ತಾವೇ ಚುನಾವಣಾ ಕಣಕ್ಕೆ ದುಮುಕಿದ್ದಾರೆ.

ಇಬ್ಬರು ಸಿಎಂಗಳ ಕುಟುಂಬ: ಭರತ್‌ ಬೊಮ್ಮಾಯಿ ರಾಜಕೀಯ ಕುಟುಂಬದಲ್ಲೇ ಹುಟ್ಟಿ ಬೆಳೆದವರು. ಅಜ್ಜ ಎಸ್‌.ಆರ್‌. ಬೊಮ್ಮಾಯಿ, ಅಪ್ಪ ಬಸವರಾಜ ಬೊಮ್ಮಾಯಿ ಇಬ್ಬರೂ ರಾಜ್ಯದ ಮುಖ್ಯಮಂತ್ರಿಗಳಾದವರು. ಆದ್ದರಿಂದ ಸಹಜವಾಗಿಯೇ ಭರತ್‌ಗೆ ರಾಜಕೀಯ ರಕ್ತವೇ ಹರಿದಾಡುತ್ತಿದೆ. ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರಿನ ಭರತ್‌ ಕೂಡ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಂತಾಗಿದೆ. ಬಸವರಾಜ ಬೊಮ್ಮಾಯಿ ಅವರು ಮಗನ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿರುವುದರ ಜತೆಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ತಮ್ಮ ಹಿಡಿತ ತಪ್ಪದಂತೆ ಹೆಜ್ಜೆ ಇಟ್ಟಿದ್ದಾರೆ.

ಬೇಡ ಎನ್ನುತ್ತಲೇ ಟಿಕೆಟ್‌ ತಂದ ಬೊಮ್ಮಾಯಿ: ತಮ್ಮ ಮಗ ಭರತ್‌ ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳುತ್ತಲೇ ಬಂದಿದ್ದರು. ಆದರೆ ತೆರೆಮರೆಯಲ್ಲಿ ಪುತ್ರನಿಗೆ ಟಿಕೆಟ್‌ ಕೊಡಿಸಲು ನಡೆಸಿದ ಪ್ರಯತ್ನ ಎಲ್ಲರಿಗೂ ಗೊತ್ತಿತ್ತು. ಈ ಹಿಂದೆ ಹಾವೇರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೂಡ ತಾವು ಟಿಕೆಟ್‌ ಆಕಾಂಕ್ಷಿಯಲ್ಲ ಎನ್ನುತ್ತಲೇ ಟಿಕೆಟ್‌ ತಂದಿದ್ದರು. ಕ್ಷೇತ್ರದ ಜನರ ಮುಂದೆ ಬೇಡ ಎನ್ನುತ್ತ ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನಿಸಿ ಕೊನೆಗೂ ಪುತ್ರನಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಟುಂಬ ರಾಜಕಾರಣವನ್ನು ವಿರೋಧಿಸುವ ಬಿಜೆಪಿ ಈಗ ಅದನ್ನೇ ಮುಂದುವರಿಸಿದೆ. ಗೆಲ್ಲುವ ಮಾನದಂಡವನ್ನೇ ಪ್ರಮುಖವಾಗಿ ಇಟ್ಟುಕೊಂಡು ಬಿಜೆಪಿ ಹೈಕಮಾಂಡ್‌ ಟಿಕೆಟ್‌ ಘೋಷಿಸಿದೆ. ಈಗ ಪುತ್ರನನ್ನು ಗೆಲ್ಲಿಸಿಕೊಂಡು ಬರಬೇಕಾದ ಹೊಣೆಗಾರಿಕೆ ಅಪ್ಪನ ಹೆಗಲೇರಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ನಾಲ್ಕು ಚುನಾವಣೆ ಗೆದ್ದಿರುವ ಬೊಮ್ಮಾಯಿ ಅವರಿಗೆ ಕ್ಷೇತ್ರದ ಕಾರ್ಯಕರ್ತರ ನಾಡಿಮಿಡಿತ ಗೊತ್ತಿದೆ. ಆದ್ದರಿಂದ ಉಪಚುನಾವಣಾ ಕಣದಲ್ಲಿ ಇನ್ನು ಮುಂದೆ ಜಂಗೀ ಕುಸ್ತಿ ನಿರೀಕ್ಷಿಸಬಹುದಾಗಿದೆ.

ಭರತ್‌ ವರ್ಸಸ್‌ ಯಾರು?: ಬಿಜೆಪಿಯಿಂದ ಭರತ್‌ ಬೊಮ್ಮಾಯಿಗೆ ಟಿಕೆಟ್‌ ಆಗಿದ್ದು, ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ನೀಡಲಿದೆ ಎಂಬ ಕುತೂಹಲ ಕೆರಳಿಸಿದೆ.

ಬಿಜೆಪಿ ಅಭ್ಯರ್ಥಿ ನೋಡಿ ತಾನು ಟಿಕೆಟ್‌ ಘೋಷಿಸುವ ಕಾದು ನೋಡುವ ತಂತ್ರ ಅನುಸರಿಸಿದ್ದ ಕಾಂಗ್ರೆಸ್‌ ಯಾರಿಗೆ ಅವಕಾಶ ನೀಡಲಿದೆ ಎಂಬುದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ. ಅಲ್ಪಸಂಖ್ಯಾತರಿಗೆ ಮಣೆ ಹಾಕುತ್ತೋ ಅಥವಾ ಬಿಜೆಪಿಗೆ ಸೆಡ್ಡು ಹೊಡೆಯಲು ಲಿಂಗಾಯತ ದಾಳ ಉರುಳಿಸುತ್ತೋ ಎಂಬುದನ್ನು ಕಾದು ನೋಡಬೇಕಿದೆ.