ವಿಜಯನಗರದಲ್ಲಿ ಸೈಬರ್‌, ಮಹಿಳಾ ಪೊಲೀಸ್‌ ಠಾಣೆ ಶೀಘ್ರ ಸ್ಥಾಪನೆ

| Published : Dec 20 2023, 01:15 AM IST

ವಿಜಯನಗರದಲ್ಲಿ ಸೈಬರ್‌, ಮಹಿಳಾ ಪೊಲೀಸ್‌ ಠಾಣೆ ಶೀಘ್ರ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಪಿ ಬಿ.ಎಲ್. ಶ್ರೀಹರಿಬಾಬು ಅವರು ಕಳೆದ ಮೂರು ತಿಂಗಳಿಂದ ನಿರಂತರವಾಗಿ ಶ್ರಮಿಸಿ ಸಂಚಾರ ವ್ಯವಸ್ಥೆ ಸುಧಾರಿಸುವ ಸಲುವಾಗಿ ಉತ್ತಮ ಕೆಲಸ ಮಾಡಿದ್ದಾರೆ

ಹೊಸಪೇಟೆ: ಜಿಲ್ಲೆಯಲ್ಲಿ ಸೈಬರ್ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಮಂಜೂರಾಗಲಿದೆ ಎಂದು ಶಾಸಕ ಎಚ್‌.ಆರ್‌. ಗವಿಯಪ್ಪ ತಿಳಿಸಿದರು. ಮಂಗಳವಾರ ನಗರದ ಡಾ. ಪುನೀತ್ ರಾಜಕುಮಾರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್‌ಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇದೆ. ವಿಶೇಷವಾಗಿ ಹೊಸಪೇಟೆ ನಗರದಲ್ಲಿ ಸಿಬ್ಬಂದಿ ಸಮಸ್ಯೆ ಇದೆ. ಈ ಕುರಿತು ಎಸ್ಪಿ ಅವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ನೇಮಕಾತಿ ಪ್ರಕ್ರಿಯೆ ಕೂಡ ನಡೆಯುತ್ತಿರುವುದರಿಂದ ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.ಡಾ. ಪುನೀತ್ ರಾಜಕುಮಾರ್ ವೃತ್ತ, ಅಂಬೇಡ್ಕರ್ ವೃತ್ತ, ಪುಣ್ಯಮೂರ್ತಿ ವೃತ್ತ, ಸಾಯಿಬಾಬಾ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದ್ದು, ಸೇವೆ ಆರಂಭಿಸಲಾಗಿದೆ ಎಂದರು.

ಐತಿಹಾಸಿಕ ತಾಣ ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮ ಸೇರಿ ಅನೇಕ ಪ್ರವಾಸಿ ತಾಣಗಳು ಸಮೀಪದಲ್ಲಿ ಇರುವುದರಿಂದ ಹೊಸಪೇಟೆ ನಗರಕ್ಕೆ ದೇಶ- ವಿದೇಶಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹಾಗಾಗಿ ನಮ್ಮ ನಗರದಲ್ಲಿ ಸಂಚಾರ ಪ್ರಜ್ಞೆ ತೋರಿಸಬೇಕಿದೆ. ಈ ನಿಟ್ಟಿನಲ್ಲಿ ಎಸ್ಪಿ ಬಿ.ಎಲ್. ಶ್ರೀಹರಿಬಾಬು ಅವರು ಕಳೆದ ಮೂರು ತಿಂಗಳಿಂದ ನಿರಂತರವಾಗಿ ಶ್ರಮಿಸಿ ಸಂಚಾರ ವ್ಯವಸ್ಥೆ ಸುಧಾರಿಸುವ ಸಲುವಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಎಸ್ಪಿ ಬಿ.ಎಲ್. ಶ್ರೀಹರಿಬಾಬು ಮಾತನಾಡಿ, ನೂತನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಸುಧಾರಿಸಲು ಎರಡು ಹೊಸ ಮತ್ತು ಈಗಾಗಲೇ ಇದ್ದ ಎರಡು ಸಿಗ್ನಲ್‌ಗಳನ್ನು ನವೀಕರಣಗೊಳಿಸಲಾಗಿದೆ. ಇನ್ನು ಮುಂದೆ ನಿರಂತರವಾಗಿ ಸಿಗ್ನಲ್ ಕಾರ್ಯನಿರ್ವಹಿಸಲಿವೆ ಎಂದರು.

ಸಂಚಾರಿ ಠಾಣೆ ಪಿಐ ಶ್ರೀನಿವಾಸ್ ಮೇಟಿ ಸೇರಿದಂತೆ ಇತರರಿದ್ದರು.ನಾನೇ ಸಕ್ಕರೆ ಕಾರ್ಖಾನೆ ಸ್ಥಾಪಿಸುವೆ:

ಸಕ್ಕರೆ ಕಾರ್ಖಾನೆಗೆ ಸರ್ಕಾರಿ ಭೂಮಿ ಸಿಕ್ಕರೆ ಸರಿ. ಇಲ್ಲದಿದ್ದರೆ ನಾನೇ ಕಾರ್ಖಾನೆ ಸ್ಥಾಪಿಸಿ ತೋರಿಸುವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.

ಇಬ್ಬರ ತಿಕ್ಕಾಟದಲ್ಲಿ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಕ್ಕರೆ ಕಾರ್ಖಾನೆಯ ಅವಶ್ಯಕತೆ ಇದೆ. ಸಾಧ್ಯವಿದ್ದಲ್ಲಿ ಕಾರ್ಖಾನೆ ಕೆಲಸ ಆರಂಭಿಸಲಾಗುವುದು. ಆಗದಿದ್ದಲ್ಲಿ ನಾನೇ ಕಾರ್ಖಾನೆ ಸ್ಥಾಪಿಸಲು ಮುಂದಾಗುವೆ ಎಂದು ಮುನರುಚ್ಛರಿಸಿದರು.

ಹಂಪಿ ಶುಗರ್ಸ್‌ಗೆ ಭೂಮಿ ಕೊಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆಂಬ ಪ್ರಶ್ನೆಗೆ, ಅವರಿಗೆ ಕೊಟ್ಟಿರುವುದು ಖಾಸಗಿ ಜಮೀನಲ್ಲ, ಸರ್ಕಾರಿ ಭೂಮಿ. ನನ್ನ ಸ್ವಂತ ಜಮೀನಾಗಿದ್ದರೆ ಏನಾದರೂ ಮಾಡಬಹುದಿತ್ತು. ಸರ್ಕಾರಿ ಜಮೀನಲ್ಲಿ ಯಾರೋ ಮಾಡುವುದಕ್ಕೆ ನಾವು ಹೇಗೆ ಒಪ್ಪಲು ಸಾಧ್ಯ. ನಾನೂ ಕೂಡ ಅವರ ಜತೆ ಮಾತನಾಡುತ್ತೇನೆ. ಸರ್ಕಾರಿ ಭೂಮಿಯಲ್ಲಿ ನಮಗೆ ಏನು ಒಳ್ಳೆಯದು ಅನಿಸುತ್ತೆ ಅದನ್ನು ಮಾಡುತ್ತೇವೆ. ಯಾರಿಗೋ ಕೊಡಬೇಕೆಂದು ಕಾನೂನಿಲ್ಲ ಎಂದು ತಿರುಗೇಟು ನೀಡಿದರು.

ರೈತ ಸಮುದಾಯಕ್ಕೆ ಸಮಸ್ಯೆ ಆಗಲು ಬಿಡುವುದಿಲ್ಲ. ಸಕ್ಕರೆ ಕಾರ್ಖಾನೆ ಒಂದೇ ರಾತ್ರಿಯಲ್ಲಿ ಆಗುವ ಕೆಲಸ ಅಲ್ಲ. ಮುಖ್ಯಮಂತ್ರಿಗಳ ಜತೆ ಮಾತನಾಡಿ ಅವರ ಆದೇಶದಂತೆ ಮುಂದುವರಿಯಲಾಗುವುದು ಎಂದರು.