ಸಾರಾಂಶ
ರಾಜ್ಯ ಹೆದ್ದಾರಿಯಲ್ಲೂ ಟೋಲ್ ಸಂಗ್ರಹಿಸುತ್ತಿರುವುದು ಲಾರಿ ಮಾಲೀಕರಿಗೆ ಹೊರೆಯಾಗಿದೆ. ಫೈನಾನ್ಸ್ ಕಂಪನಿಗಳಿಂದ ಲಾರಿ ಮಾಲೀಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ ವಹಿಸಬೇಕು.
ಹುಬ್ಬಳ್ಳಿ:ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಒಂದೂವರೆ ವರ್ಷದಲ್ಲಿ ಅದನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ ನೀಡಿದರು.
ಅವರು ನಗರದ ಗಬ್ಬೂರಿನ ಸ್ಟಾರ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್‌ನ 33ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ರಾಜ್ಯಮಟ್ಟದ ಲಾರಿ ಮಾಲೀಕರು ಮತ್ತು ಸರಕು ಸಾಗಣೆದಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಹೆದ್ದಾರಿಯಲ್ಲೂ ಟೋಲ್ ಸಂಗ್ರಹಿಸುತ್ತಿರುವುದು ಲಾರಿ ಮಾಲೀಕರಿಗೆ ಹೊರೆಯಾಗಿದೆ. ಫೈನಾನ್ಸ್ ಕಂಪನಿಗಳಿಂದ ಲಾರಿ ಮಾಲೀಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ ವಹಿಸಬೇಕು ಎಂದರು.
ಅಸೋಸಿಯೇಷನ್ ಅಧ್ಯಕ್ಷ ಸಿ. ನವೀನ ರೆಡ್ಡಿ ಮಾತನಾಡಿ, ರಾಜ್ಯ, ಹೊರ ರಾಜ್ಯದಲ್ಲಿ ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳು ತಪಾಸಣೆ ನೆಪದಲ್ಲಿ ಲಾರಿ ಚಾಲಕರಿಗೆ ತೊಂದರೆ ನೀಡುತ್ತಿದ್ದಾರೆ. ಜಿಎಸ್‌ಟಿ ಅಧಿಕಾರಿಗಳು, ಫೈನಾನ್ಸ್ ಕಂಪನಿಗಳ ಕಾಟವೂ ಹೆಚ್ಚಾಗಿದೆ. ಇದರಿಂದ ಕೆಲವು ಲಾರಿ ಮಾಲೀಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನು ಕೆಲವರು ಉದ್ಯಮ ತೊರೆಯಲು ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಈ ಕುರಿತು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವಂತೆ ಮನವಿ ಮಾಡಿದರು.ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಆರ್.ಡಿ. ಮರುಳಸಿದ್ದಪ್ಪ ಮಾತನಾಡಿ, ಅತಿ ವೇಗದಿಂದ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಲಾರಿ ಚಾಲಕರು ಆಗಾಗ್ಗೆ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹು-ಧಾ ಸರಕು ಸಾಗಾಣಿಕೆ ಮತ್ತು ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ರವೀಂದ್ರ ಬೆಳಂಕರ, ಅಸೋಸಿಯೇಷನ್ ಉಪಾಧ್ಯಕ್ಷ ಜಿ. ನಾರಾಯಣಪ್ರಸಾದ, ಗೈಬುಸಾಬ ಹೊನ್ಯಾಳ, ಖಜಾಂಚಿ ಗೌಸ್ ಮುಲ್ಲಾ, ಪಾಲಿಕೆ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ, ಮೋಹನ ಅಸುಂಡಿ, ವಾಸು ಕೋನರಡ್ಡಿ, ಚನ್ನಪ್ರಸನ್ನ ಕುಮಾರ, ಎಚ್.ಎಸ್. ಸಂಜಯಕುಮಾರ, ಕೆ.ಎಸ್. ಚಂದ್ರಶೇಖರ, ಸಮೀರ್ ಪೀರಜಾದೆ ಸೇರಿದಂತೆ ವಿವಿಧ ರಾಜ್ಯಗಳ ಅಸೋಸಿಯೇಷನ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.