ಸೊರಬ: ಪ್ರವಾಸಿ ತಾಣವಾದ ಬಂಗಾರಧಾಮ

| Published : Sep 04 2025, 01:00 AM IST

ಸಾರಾಂಶ

ಪಟ್ಟಣದ ಆಕರ್ಷಣೀಯ ಕೇಂದ್ರವಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಾಗೂ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರ ಧಾಮ ಪ್ರವಾಸಿ ತಾಣವಾಗಿ ಮನ್ನಣೆ ಪಡೆದು ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ.

ಎಚ್.ಕೆ.ಬಿ. ಸ್ವಾಮಿಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣದ ಆಕರ್ಷಣೀಯ ಕೇಂದ್ರವಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಾಗೂ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರ ಧಾಮ ಪ್ರವಾಸಿ ತಾಣವಾಗಿ ಮನ್ನಣೆ ಪಡೆದು ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ.ತಾಲೂಕಿನ ಕುಬಟೂರು (ಕೋಟಿಪುರ) ಗ್ರಾಮದಲ್ಲಿರುವ ಹೊಯ್ಸಳರ ಕಾಲದ ಶ್ರೀ ಕೈಠಬೇಶ್ವರ ದೇವಸ್ಥಾನ, ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬೆಯ ನೆಲೆಬೀಡು ಚಂದ್ರಗುತ್ತಿ, ರಾಜ್ಯದ ೨ನೇ ಪಕ್ಷಿಕಾಶಿ ಎಂದೇ ಗುರುತಿಸಿಕೊಂಡಿರುವ ಗುಡವಿ ಪಕ್ಷಿಧಾಮದ ನಂತರ ರಾಜ್ಯ ಸರ್ಕಾರ ಸೊರಬ ಪಟ್ಟಣದ ಹೃದಯ ಭಾಗದಲ್ಲಿರುವ ಬಂಗಾರಧಾಮವನ್ನು ಪ್ರವಾಸಿ ತಾಣವನ್ನಾಗಿ ಗುರುತಿಸಿ ಮನ್ನಣೆ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಬಂಗಾರಧಾಮ ತಾಲೂಕಿನ ೪ನೇ ಪ್ರವಾಸಿ ತಾಣವಾಗಿಸಿಕೊಂಡಿದೆ.ಎಸ್.ಬಂಗಾರಪ್ಪ ಅವರ ಚಿಂತನೆ, ಅಭಿರುಚಿಗೆ ಪೂರಕವಾಗಿ ಒಂದು ಕಾಲು ಎಕರೆ ಪ್ರದೇಶದಲ್ಲಿ ಬಂಗಾಧಾಮ ನಿರ್ಮಾಣವಾಗಿದೆ. ಧಾಮದ ಒಳಗಡೆ ಗ್ರಾನೈಟ್ ಮತ್ತು ಮಾರ್ಬಲ್ ಕೆತ್ತನೆಯ ಕಲಾಕೃತಿಗಳು ಅದರ ಸೌಂದರ್ಯ ಹೆಚ್ಚಿಸಿವೆ. ಧ್ಯಾನಮಂದಿರ, ಕುಡಿಯುವ ನೀರು, ಶೌಚಾಲಯ, ವಾಕಿಂಗ್ ಪಾಥ್, ಹೂವಿನ ತೋಟ, ಅಲಂಕಾರಿಕ ಗಿಡಗಳು ಸೇರಿದಂತೆ ಅಗತ್ಯ ಸೌಲಭ್ಯಗಳು ಇಲ್ಲಿ ಲಭ್ಯವಿದ್ದು, ಬೆಳಗಿನ ಮತ್ತು ಸಂಜೆಯ ವಾಯು ವಿಹಾರಕ್ಕೆಂದು ಬರುವವರಿಗೆ ಇದು ಆಹ್ಲಾದದ ಜೊತೆಗೆ ಮನಸ್ಸಿಗೂ ಮತ್ತು ದೇಹಕ್ಕೂ ಮುದ ನೀಡುತ್ತದೆ. ಹಾಗಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಬಂಗಾರಧಾಮ ತನ್ನಡೆಗೆ ಸೆಳೆಯುವ ಆಕರ್ಷಣೀಯ ಕೇಂದ್ರವಾಗಿದೆ.ಇದೂ ಅಲ್ಲದೇ ೧,೫೦೦ ಮಂದಿಗೆ ಆಸನ ವ್ಯವಸ್ಥೆಯೊಂದಿಗೆ ಆಧುನಿಕ ಬಯಲು ರಂಗಮಂದಿರ ನಿರ್ಮಾಣಗೊಂಡಿದೆ. ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ. ಬೆಸಿಗೆಯಲ್ಲಿ ತಂಪೆರೆಯಲು ಹೆಲಿಫ್ಯಾನ್ ಅಳವಡಿಕೆ ಮಾಡಲಾಗಿದೆ. ಸಂಪಿಗೆ ಮರ, ಕಲ್ಪವೃಕ್ಷ, ಈಚಲು ಮರಗಳನ್ನು ಒಳಗೊಂಡ ಸಸ್ಯ ಸಂಪತ್ತು ಮನಸ್ಸಿನ ನೋವನ್ನು ಮರೆಮಾಚುತ್ತದೆ. ೫೬ ಅಡಿ ಎತ್ತರದ ಕ್ಲಾಕ್ ಟವರ್, ವಿದ್ಯುತ್ ದೀಪಾಲಂಕಾರ ಹಾಗೂ ಹಿನ್ನೆಲೆಯಲ್ಲಿ ಸುಮಧುರ ಸಂಗೀತ ಬಂಗಾರ ಧಾಮದ ವೈಶಿಷ್ಟ್ಯತೆಯಿಂದ ಕರ್ಣಗಳಿಗೆ ಆಹ್ಲಾದವನ್ನು ನೀಡುತ್ತದೆ.ಕಳೆದ ಒಂದೂವರೆ ವರ್ಷದ ಹಿಂದೆ ಉದ್ಘಾಟನೆಗೊಂಡ ಬಂಗಾರಧಾಮ ವೀಕ್ಷಿಸಲೆಂದೇ ಗೃಹ ಸಚಿವ ಜಿ.ಪರಮೇಶ್ವರ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಭಾಪತಿ ಬಸವರಾಜ ಹೊರಟ್ಟಿ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ವಿವಿಧ ಗಣ್ಯರು ಹಾಗೂ ಮಠಮಾನ್ಯಗಳ ಶ್ರೀಗಳು ಆಗಮಿಸಿ ಬಂಗಾರಧಾಮ ದೇಶದಲ್ಲಿಯೇ ವಿಭಿನ್ನ ಶಕ್ತಿಧಾಮವಾಗಿದೆ ಎಂದು ಬಣ್ಣಿಸಿದ್ದಾರೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಎಸ್.ಬಂಗಾರಪ್ಪ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವ ಬಂಗಾರ ಧಾಮವನ್ನು ಅವರದ್ದೇ ನೇತೃತ್ವದ ಎಸ್.ಬಂಗಾರಪ್ಪ ಫೌಂಡೇಷನ್ ನಿರ್ವಹಿಸುತ್ತಿದೆ. ಹಾಗಾಗಿ ಬಂಗಾರಧಾಮ ರಾಜ್ಯದ ಹಿರಿಯ ರಾಜಕಾರಣಿ ಎಸ್.ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಪಣ್ಯಸ್ಥಳವಾಗಿ ಅಭಿಮಾನಿಗಳ ಮನದಾಳದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಬಂಗಾರಧಾಮವು ತನ್ನದೇ ಆದ ವೈಶಿಷ್ಟ್ಯತೆಯಿಂದ ಅಭಿಮಾನಿ ಬಳಗದಲ್ಲಿ ವಿಶೇಷ ಸ್ಥಾನ ಪಡೆದಿದೆ. ಇದನ್ನು ಗುರುತಿಸಿ ರಾಜ್ಯ ಸರ್ಕಾರ ಐತಿಹಾಸಕ ಪ್ರವಾಸಿ ತಾಣವನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿರುವುದು ತಮಗೆ ಸಂತಸ ತಂದಿದೆ. ಅದಕ್ಕಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ.

ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ