ಸೋರುತಿಹುದು ಶಾಸಕರ ಮಾದರಿ ಶಾಲೆ

| Published : May 28 2024, 01:07 AM IST

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಸ್ಥಾಪನೆಯಾದ ಇಲ್ಲಿನ ಶಾಸಕರ ಮಾದರಿ ಶಾಲೆಯ ಕೊಠಡಿಗಳು ಸೋರುತ್ತಿವೆ.

ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಸ್ಥಾಪನೆಯಾದ ಶಾಲೆಗಿಲ್ಲ ಅಭಿವೃದ್ಧಿ ಭಾಗ್ಯ । ಇದ್ದು ಇಲ್ಲದಂತಾದ ಶೌಚಾಲಯಎಂ. ಪ್ರಹ್ಲಾದ್ ಕನ್ನಡಪ್ರಭ ವಾರ್ತೆ ಕನಕಗಿರಿ

ದೇಶದ ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಸ್ಥಾಪನೆಯಾದ ಇಲ್ಲಿನ ಶಾಸಕರ ಮಾದರಿ ಶಾಲೆಯ ಕೊಠಡಿಗಳು ಸೋರುತ್ತಿವೆ.

ಶಾಲೆಯ 22 ಕೊಠಡಿಗಳ ಪೈಕಿ 12 ಕೊಠಡಿಗಳು ಸೋರುತ್ತಿದ್ದರೆ, ಇನ್ನುಳಿದ ಕೊಠಡಿಗಳು ದುರಸ್ತಿಯಲ್ಲಿವೆ. ಕೇವಲ ಎಂಟತ್ತು ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕಲಿಯುವಂತಾಗಿದ್ದು, ಕೆಲವು ತರಗತಿಗಳು ಬಯಲಲ್ಲಿ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. 1936ರಲ್ಲಿ ಈ ಶಾಲೆ ಸ್ಥಾಪನೆಗೊಂಡಿದ್ದು, ಸದ್ಯ 430 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಮಾದರಿಯಾಗದ ಶಾಲೆ:

ಇಲ್ಲಿ 1ರಿಂದ 8ನೇ ತರಗತಿಗಳು ನಡೆಯುತ್ತಿದ್ದು, ಶಾಲೆಯ ಬಹುತೇಕ ಕಟ್ಟಡಗಳು ದುರಸ್ತಿಯಲ್ಲಿವೆ. ಮಳೆ ಬಂದರೆ ಸಾಕು ಕೊಠಡಿಗಳು ಒಂದರ ನಂತರ ಒಂದು ಸೋರುತ್ತಿವೆ. ಕಟ್ಟಡದುದ್ದಕ್ಕೂ ಮೇಲ್ಛಾವಣಿಗೆ ಬಳಸಲಾದ ಕಬ್ಬಿಣದ ರಾಡುಗಳು ಹೊರ ಬಂದಿವೆ. ಇದರಿಂದ ಕಟ್ಟಡದ ಕುಸಿತದ ಭೀತಿ ಎದುರಾಗಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಕೆಲ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ದುರಸ್ತಿಗೆ ಹಣ ಮಂಜೂರಾದರೂ ಜಿರ್ಣೋದ್ಧಾರವಾಗದೆ ಪಾಳು ಬಿದ್ದಿವೆ. ಸಮಸ್ಯೆಗಳ ಸುಳಿಯಲ್ಲಿರುವ ಶಾಸಕರ ಮಾದರಿ ಶಾಲೆಯ ಅಭಿವೃದ್ಧಿಗೆ ಇಲಾಖೆ, ಸ್ವ-ಕ್ಷೇತ್ರದ ಶಾಸಕ, ಸಚಿವರಾಗಿರುವ ಶಿವರಾಜ ತಂಗಡಗಿ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದ್ದೂ ಇಲ್ಲವಾದ ಶೌಚಾಲಯ:

ಶಾಲೆಯ ಶೌಚಾಲಯ ಇದ್ದು ಇಲ್ಲದಂತಾಗಿದೆ. ಇದರಿಂದ ಮಕ್ಕಳು ಬಯಲಲ್ಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಶಿಕ್ಷಕರು ಕೂಡಾ ವಿದ್ಯಾರ್ಥಿಗಳಂತೆ ಬಯಲಿನಲ್ಲಿಯೇ ಮೂತ್ರ ವಿಸರ್ನನೆ ಮಾಡುತ್ತಿದ್ದಾರೆ. ಇನ್ನು ಮಹಿಳಾ ಶಿಕ್ಷಕಿಯರ ಪರಿಸ್ಥಿತಿ ಹೇಳತೀರದಾಗಿದೆ.

ದುರಸ್ತಿಯಾಗದ ಕೊಠಡಿಗಳು:

ಮೂರ್ನಾಲ್ಕು ತಿಂಗಳಿಂದ ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ಅವರಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯೋಪಾಧ್ಯಾಯರು ಶಾಲೆಯ ಸ್ಥಿತಿ-ಗತಿಯ ಬಗ್ಗೆ ಗಮನ ತಂದಿದ್ದು, ಹಂತ-ಹಂತವಾಗಿ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದರು. ಆದರೆ, ದುರಸ್ತಿಗೆ ಅನುದಾನ ಮಂಜೂರಾದರೂ ಕಾಮಗಾರಿ ಆರಂಭಿಸಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಗಮನಕ್ಕಿದ್ದರೂ ಬಿಇಒ ಕ್ರಮ ಕೈಗೊಳ್ಳದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಕನಕಗಿರಿಯ ಶಾಸಕರ ಮಾದರಿ ಶಾಲೆ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದನ್ನು ಪರಿಶೀಲಿಸಿದ್ದೇನೆ. ಕಟ್ಟಡದ ತೆರವಿಗೆ ಹಾಗೂ ದುರಸ್ತಿಯಲ್ಲಿರುವ ಕಟ್ಟಡಗಳ ಕಾಮಗಾರಿ ಆರಂಭಿಸಲು ಕ್ರಮವಹಿಸಲಾಗುವುದು ಎಂದು ಬಿಇಒ ವೆಂಕಟೇಶ ರಾಮಚಂದ್ರಪ್ಪ ತಿಳಿಸಿದ್ದಾರೆ.

ಶಾಲೆಯ ಬಹಳಷ್ಟು ಕೊಠಡಿಗಳು ಶಿಥಿಲಗೊಂಡಿವೆ. ಹಳೇ ಕಟ್ಟಡ ತೆರವುಗೊಳಿಸಿ ಕಾಮಗಾರಿ ನಡೆಸಲು ಸಚಿವರೊಂದಿಗೆ ಚರ್ಚಿಸಲಾಗಿದೆ. ತುರ್ತಾಗಿ ಏನೇನು ಬೇಕು ಎನ್ನುವುದರ ಬಗ್ಗೆ ಪಟ್ಟಿ ಮಾಡಿ ಇಲಾಖೆಗೆ ನೀಡಲಾಗಿದೆ. ಕುಡಿಯುವ ನೀರು, ಶೌಚಗೃಹ ಹಾಗೂ ಕೊಠಡಿ ವ್ಯವಸ್ಥೆ ಅಗತ್ಯವಾಗಿದೆ. ಈ ಬಗ್ಗೆ ಜೂನ್ ತಿಂಗಳಲ್ಲಿ ಸಚಿವರಿಗೆ ಹಾಗೂ ಶಾಲಾ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಚೂಡಾಮಣಿ ಹೇಳಿದ್ದಾರೆ.