ಸೌಂದರ್ಯ ಲಹರಿ ಪಠಣಕ್ಕೆ ಲಿಂಗಭೇದ ಇಲ್ಲ: ನಾಗಮಣಿ ಶಾಸ್ತ್ರಿ

| Published : Oct 09 2024, 01:45 AM IST

ಸಾರಾಂಶ

ಜಗತ್ತಿನ ಸೃಷ್ಟಿ, ಸ್ಥಿತಿ, ಲಯಕರ್ತರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆಲ್ಲರೂ ದೇವಿಯ ಅಂಶವಾಗಿದ್ದಾರೆ ಎಂಬುದನ್ನು ಸಾಕ್ಷೀಕರಿಸಲು ಆದಿಶಂಕರಾಚಾರ್ಯರು ಸೌಂದರ್ಯ ಲಹರಿ ಕಾವ್ಯ ರಚಿಸಿದ್ದಾರೆ ಎಂದು ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ ಹರಿಹರದಲ್ಲಿ ಹೇಳಿದ್ದಾರೆ.

- ಮಾತೃ ಮಂಡಳಿ ಮಾತೆಯರಿಂದ ಸೌಂದರ್ಯ ಲಹರಿ ಸಾಮೂಹಿಕ ಪಠಣ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ

ಜಗತ್ತಿನ ಸೃಷ್ಟಿ, ಸ್ಥಿತಿ, ಲಯಕರ್ತರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆಲ್ಲರೂ ದೇವಿಯ ಅಂಶವಾಗಿದ್ದಾರೆ ಎಂಬುದನ್ನು ಸಾಕ್ಷೀಕರಿಸಲು ಆದಿಶಂಕರಾಚಾರ್ಯರು ಸೌಂದರ್ಯ ಲಹರಿ ಕಾವ್ಯ ರಚಿಸಿದ್ದಾರೆ ಎಂದು ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ ಹೇಳಿದರು.

ನಗರದ ನಡವಲ ಪೇಟೆಯ ನಾಮದೇವ ಕಲ್ಯಾಣ ಮಂಟಪದಲ್ಲಿ 21ನೇ ವರ್ಷದ ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ನಿಮಿತ್ತ ಇತ್ತೀಚೆಗೆ ನಡೆದ ದುರ್ಗಾ ಪೂಜೆ, ಮಾತೃ ಮಂಡಳಿ ಮಾತೆಯರಿಂದ ಶ್ರೀಆದಿಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೌಂದರ್ಯ ಲಹರಿ ಕಾವ್ಯ, 100 ಶ್ಲೋಕಗಳನ್ನು ಹೊಂದಿದೆ. ಕಾವ್ಯ ಮತ್ತು ಅಧ್ಯಾತ್ಮ ದೃಷ್ಠಿಯಿಂದ ಅತ್ಯುತ್ತಮವಾಗಿದ್ದು, ಪುರುಷಾರ್ಥ ಮತ್ತು ಪಾರಮಾರ್ಥ ಎರಡರ ಬಗ್ಗೆ ಸಮನ್ವಯ ನೀಡುತ್ತದೆ. ಎಂದರು.

ತಾಯಿ ಜಗನ್ಮಾತೆ ಹಾಗೂ ಸರ್ವಶಕ್ತೆ. ಆಕೆಯ ಆರಾಧನೆ ಜಗತ್ತಿನ ಸರ್ವಶಕ್ತಿಯ ಆರಾಧನೆಯಾಗಿದೆ. ಸೌಂದರ್ಯ ಲಹರಿಯನ್ನು ನಿತ್ಯ ಪಾರಾಯಣ ಮಾಡುವುದರಿಂದ ಎಲ್ಲ ಭವಬಂಧನಗಳು ಕಳಚುತ್ತವೆ. ಲಿಂಗಭೇದವಿಲ್ಲದೇ, ಪುರುಷ ಹಾಗೂ ಮಹಿಳೆಯರು ಪಠಣ ಮಾಡಬಹುದು. ಗುರುಮುಖೇನ ಕಲಿತು, ಪಠಣ ಮಾಡುವುದು ಉತ್ತಮ. ಉಚ್ಛಾರ ದೋಷದಿಂದ ಮೂಲ ಅರ್ಥ ಅನರ್ಥವಾಗುವ ಜತೆಗೆ ವ್ಯತಿರಿಕ್ತ ಅಥವಾ ವಿರುದ್ಧ ಪರಿಣಾಮ ಬೀರುತ್ತದೆ ಎಂದರು.

ನಗರದ ವಿವಿಧ ಸಮಾಜದ ಮಹಿಳಾ ಸಂಘಟನೆಗಳ ಮಹಿಳೆಯರು ಹಾಗೂ ಸಾಮೂಹಿಕ ದಸರಾ ಮಹೋತ್ಸವ ಸಮಿತಿಯ 100ಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಲಹರಿಯನ್ನು ಸಾಮೂಹಿಕ ಪಠಣದಲ್ಲಿ ಭಾಗವಹಿಸಿದ್ದರು. ಅನಂತರ ಪ್ರತಿಯೊಬ್ಬ ಮಹಿಳೆಯರಿಗೂ ಉಡಿ ತುಂಬ ಕಾರ್ಯಕ್ರಮ ನೆರವೇರಿತು.

ಸಮಿತಿ ಅಧ್ಯಕ್ಷ ಶಂಕರ್ ಖಟಾವಕರ್, ಶಿವಪ್ರಕಾಶ್ ಶಾಸ್ತ್ರಿ, ಟಿ.ಜೆ. ಮುರುಗೇಶಪ್ಪ, ವಿಶ್ವನಾಥ್ ಎಂಜಿನಿಯರ್, ಕರಿಬಸಪ್ಪ ಕಂಚಿಕೇರಿ, ರಾಜು ಖಿರೋಜಿ, ಪ್ರಮೀಳಾ ನಲ್ಲೂರು, ಅಂಜನಾ ಖಟಾವಕರ್, ಶಾರದ ಶಾಸ್ತ್ರೀ, ಜಯಶ್ರೀ ಮೆಹರವಾಡೆ, ನಾಗರತ್ನ ಅಂಬಾಸಾ, ಸಂಗೀತಾ ಐರಣಿ, ಅರುಣಾ ಗಂಗಾಧರ್, ವೀಣಾದೀಕ್ಷಿತ್, ಪದ್ಮಾವತಿ ಬೊಂಗಾಳೆ ಇತರರು ಉಪಸ್ಥಿತರಿದ್ದರು.

- - -

ಕೋಟ್‌ ನವರಾತ್ರಿಯಂದು ಜಗನ್ಮಾತೆ ದುರ್ಗಾದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮೀ ಮಹಾಸರಸ್ವತಿ ರೂಪದಲ್ಲಿ ಭಕ್ತರು ಪೂಜಿಸುತ್ತಾರೆ. ಶ್ರೀ ಶಂಕರ ಭಗವತ್ಪಾದರು ತಾಯಿಯ ಸೌಂದರ್ಯ ವರ್ಣಿಸುತ್ತಾ ಭಕ್ತಿಭಾವದಿಂದ ಅವಳಿಗೆ ನಮಿಸುವ ಸಕಲ ಮಂತ್ರ-ತಂತ್ರ ಸಾರವಿರುವ ಸೌಂದರ್ಯ ಲಹರಿಯು ಅತ್ಯಂತ ಶ್ರೇಷ್ಠ ಕೃತಿಯಾಗಿದೆ. ಇದನ್ನು ಪಠಿಸುವುದರ ಮೂಲಕ ಎಲ್ಲರ ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ ಎನ್ನುವುದು ಆಸ್ತಿಕರ ಭಾವನೆಯಾಗಿದೆ

- ನಾಗಮಣಿ ಶಾಸ್ತ್ರಿ, ನಿವೃತ್ತ ಶಿಕ್ಷಕಿ

- - - -5ಎಚ್‍ಆರ್‍ಆರ್2:

ಹರಿಹರದಲ್ಲಿ ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ನಿಮಿತ್ತ ಇತ್ತೀಚೆಗೆ ನಡೆದ ಶ್ರೀಆದಿಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ವಿವಿಧ ಮಾತೃ ಮಂಡಳಿ ಸದಸ್ಯರು ಭಾಗವಹಿಸಿದ್ದರು.