ಕಾರ್ಕಳ ಅಜೆಕಾರು ಕೆಮ್ಮಂಜ ಮಲ್ಟಿ ಪರ್ಪಸ್ ಹಾಲ್‌ನಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧೀನದ ಕಾರ್ಕಳ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನೆರವೇರಿತು.
ಕಾರ್ಕಳ: ಯುವಕರು ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸಿದಾಗ ಊರಿನ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಯುವ ಉದ್ಯಮಿಗಳು ಗ್ರಾಮದ ಸಮಗ್ರ ಬೆಳವಣಿಗೆಯ ಆಧಾರ ಸ್ತಂಭವಿದ್ದಂತೆ ಎಂದು ಉದ್ಯಮಿ ಎಂ. ದಿನೇಶ್ ಪೈ ಹೇಳಿದರು.
ಕಾರ್ಕಳ ಅಜೆಕಾರು ಕೆಮ್ಮಂಜ ಮಲ್ಟಿ ಪರ್ಪಸ್ ಹಾಲ್‌ನಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧೀನದ ಕಾರ್ಕಳ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಛಾಯಾಗ್ರಾಹಕರ ಕಲೆ ಅವರ ಕೈಯಲ್ಲೇ ಅಡಗಿದ್ದು, ನಿರಂತರವಾಗಿ ಮುಂದುವರಿಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಛಾಯಾಗ್ರಾಹಕರು ಹೆಜ್ಜೆ ಹಾಕಬೇಕು ಎಂದು ಕಿವಿಮಾತು ಹೇಳಿದರು. ಆಧುನಿಕ ಸವಾಲುಗಳೊಂದಿಗೆ ಬದುಕುವುದನ್ನು ಕಲಿಯುವುದು ಛಾಯಾಗ್ರಾಹಕರಿಗೆ ಅನಿವಾರ್ಯವಾಗಿದೆ. ಛಾಯಾಗ್ರಾಹಕರು ಸಮಾಜದ ಕಣ್ಣಿನಂತೆ ಕಾರ್ಯನಿರ್ವಹಿಸಿ, ಸುತ್ತಮುತ್ತಲಿನ ಎಲ್ಲವನ್ನೂ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಮಾಹಿತಿಯನ್ನು ಜನರಿಗೆ ತಲುಪಿಸುವ ಮಹತ್ವದ ಹೊಣೆಗಾರಿಕೆ ಹೊಂದಿದ್ದಾರೆ. ಅವರಲ್ಲಿ ಸಾಮಾಜಿಕ ಬದ್ಧತೆಯನ್ನು ತೋರಿಸುವ ಮನೋಭಾವ ಸ್ಪಷ್ಟವಾಗಿ ಕಾಣುತ್ತದೆ ಎಂದರು.ಪದಗ್ರಹಣ ಸ್ವೀಕರಿಸಿದ ಕಾರ್ಕಳದ ಎಸ್‌ಕೆಪಿಎ ಅಧ್ಯಕ್ಷ ಪ್ರಮೋದಚಂದ್ರ ಪೈ ಮಾತನಾಡಿ, 3,500ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಸ್‌ಕೆಪಿಎ) ಒಂದು ಬೃಹತ್ ಸಂಸ್ಥೆಯಾಗಿದ್ದು, ಇದುವರೆಗೆ 19 ಅಧ್ಯಕ್ಷರನ್ನು ಒಳಗೊಂಡ ಪರಂಪರೆಯನ್ನು ಹೊಂದಿದೆ ಎಂದರು.ಸಂಸ್ಥೆಯ ಮೂಲಕ ಆರೋಗ್ಯ ಶಿಬಿರಗಳು, ಕ್ಯಾಮರಾ ಕಾರ್ಯಾಗಾರಗಳು, ಸದಸ್ಯರಿಗಾಗಿ ಆರೋಗ್ಯ ಜಾಗೃತಿ ಹಾಗೂ ಕಲ್ಯಾಣ ಕಾರ್ಯಕ್ರಮಗಳು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಸ್‌ಕೆಪಿಎ ಸಂಘಕ್ಕೆ ಸ್ವಂತ ಕಟ್ಟಡವನ್ನು ಹೊಂದುವ ಸಂಕಲ್ಪವಿದ್ದು, ರಾಜ್ಯಮಟ್ಟದಲ್ಲಿ ಮಾದರಿ ಸಂಘವನ್ನಾಗಿ ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗುತ್ತದೆ ಎಂದು ಹೇಳಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಹರೀಶ್ ಶೆಟ್ಟಿ, ಪಡುಪರ್ಕಳ ಮಾತನಾಡಿ, ಸಹಕಾರದ ಮನೋಭಾವವನ್ನು ರೂಪಿಸುವ ಎಸ್‌ಕೆಪಿಎ ಸದಸ್ಯರ ಕಾರ್ಯ ಶ್ಲಾಘನೀಯ. ಫೋಟೋಗ್ರಾಫರ್ ಗಳು ಮಾನವೀಯತೆ ಹಾಗೂ ಸಹೃದಯತೆಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಎಸ್.ಕೆ.ಪಿ.ಎ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಅಧ್ಯಕ್ಷ ನವೀನ್ ರೈ ಪಂಜಳ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಪಿ.ಎ. ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ವಾಸುದೇವ ರಾವ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀ ಸುಜಯ್ ಶೆಟ್ಟಿ, ಉದ್ಯಮಿ ಶಂಕರ ಶೆಟ್ಟಿ, ಹಿರಿಯರಾದ ಶ್ರಿಧರ ಪೈ, ಉದ್ಯಮಿ ಶಶಿಕಾಂತ ನಾಯಕ್, ಎಸ್.ಕೆ.ಪಿ.ಎ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಕಾರ್ಕಳದ ಎಸ್.ಕೆ.ಪಿ.ಎ. ಗೌರವಾಧ್ಯಕ್ಷ ಟಿ.ವಿ. ಸುಶೀಲ್ ಕುಮಾರ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ, ಹಿರಿಯರಾದ ಗೋಪಾಲ್ ಸುಳ್ಯ ಸೆರಿದಂತೆ ಎಲ್ಲ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು.ನೂತನ ಪದಾಧಿಕಾರಿಗಳಾಗಿ ಕೋಶಾಧಿಕಾರಿ ವಿ.ಆರ್. ಸತೀಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ್ ಕುಕ್ಕುಜೆ, ಉಪಾಧ್ಯಕ್ಷರಾಗಿ ಪ್ರಕಾಶ್ ಪ್ರಭು ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಸೇರಿದಂತೆ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಪ್ರಶಾಂತ್ ಕೆರುವಾಶೆ ಸ್ವಾಗತಿಸಿದರು. ಪ್ರಸಾದ್ ಐಸಿರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ಮುನಿಯಾಲಿನ ಅಪ್ತಿ ಎಸ್. ಆಚಾರ್ಯ ಅವರಿಂದ ಜಿಮ್ನಾಸ್ಟಿಕ್ ಮಾದರಿಯ ನೃತ್ಯ ಪ್ರದರ್ಶನ ನಡೆಯಿತು.