ಮತದಾನ ಸುಸೂತ್ರವಾಗಿ ನಡೆಯಲು ಕೈಗೊಂಡಿದ್ದ ವ್ಯವಸ್ಥೆಗಳನ್ನು ವೀಕ್ಷಿಸಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.74.76ರಷ್ಟು ಮತದಾನ । ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ, ಪರಿಶೀಲನೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆಯು ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯಲ್ಲಿ ಒಟ್ಟು ಶೇ.74.76ರಷ್ಟು ಮತದಾನವಾಗಿದ್ದು, 26,262 ಮತದಾರರ ಪೈಕಿ 19,633 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಶುಕ್ರವಾರ ನಗರದ ಚಿಕ್ಕಬಳ್ಳಾಪುರ ತಾಲೂಕು ಕಚೇರಿಯ ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಮತದಾನ ಸುಸೂತ್ರವಾಗಿ ನಡೆಯಲು ಕೈಗೊಂಡಿದ್ದ ವ್ಯವಸ್ಥೆಗಳನ್ನು ವೀಕ್ಷಿಸಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು.ಜಿಲ್ಲೆಯಲ್ಲಿ ಒಟ್ಟು 36 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 14,984 ಪುರುಷ ಮತದಾರರು ಮತ್ತು 11,278 ಮಹಿಳಾ ಮತದಾರರು ಸೇರಿದಂತೆ 26,262 ಮತದಾರರು ನೋಂದಣಿಯಾಗಿದ್ದರು. ಇವರಲ್ಲಿ 11,401 ಪುರುಷರು ಹಾಗೂ 8,232 ಮಹಿಳೆಯರು ಮತ ಚಲಾಯಿಸಿದ್ದು, ಒಟ್ಟಾರೆ 19,633 ಮತಗಳು ಸಂಜೆ 4 ಗಂಟೆಯ ವೇಳೆಗೆ ಚಲಾವಣೆಯಾಗಿವೆ.
ತಾಲೂಕುವಾರು ಮತದಾನದ ವಿವರದಂತೆ ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.89.83ರಷ್ಟು ಮತದಾನವಾಗಿದ್ದರೆ, ಶಿಡ್ಲಘಟ್ಟದಲ್ಲಿ ಶೇ.78.23, ಗುಡಿಬಂಡೆಯಲ್ಲಿ ಶೇ.79.72, ಗೌರಿಬಿದನೂರಿನಲ್ಲಿ ಶೇ.75.02, ಚಿಕ್ಕಬಳ್ಳಾಪುರದಲ್ಲಿ ಶೇ.71.34, ಬಾಗೇಪಲ್ಲಿಯಲ್ಲಿ ಶೇ.71.82, ಚೇಳೂರಿನಲ್ಲಿ ಶೇ.63.52 ಹಾಗೂ ಚಿಂತಾಮಣಿಯಲ್ಲಿ ಶೇ.75.61ರಷ್ಟು ಮತದಾನವಾಗಿದೆ.ಚೇಳೂರು ತಾಲೂಕಿನಲ್ಲಿ ಶೇ.63.52ರಷ್ಟು ಮತದಾನವಾಗಿದ್ದು, ಜಿಲ್ಲೆಯ ತಾಲ್ಲೂಕುಗಳ ಪೈಕಿ ಕಡಿಮೆ ಪ್ರಮಾಣದ ಮತದಾನ ದಾಖಲಾಗಿದೆ. ಎಲ್ಲಾ ಮತೆಗಟ್ಟೆಗಳ ಬಳಿ ಎನ್.ಡಿ.ಎ., ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.
ನಗರದಲ್ಲಿ ಎನ್.ಡಿ.ಎ. ಅಭ್ಯರ್ಥಿ ಕೆ.ಎಂ.ಸುರೇಶ್ ಪರ ಬಿಜೆಪಿಯ ಕೆ.ವಿ.ನಾಗರಾಜ್, ಕೆ.ವಿ.ನವೀನ್ ಕಿರಣ್, ಮರಳಕುಂಟೆ ಕೃಷ್ಣಮೂರ್ತಿ, ಗಂಗರೇಕಾಲುವೆ ಪ್ರಸಾದ್ ಜೆಡಿಎಸ್ ನ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ, ಶಾಂತಮೂರ್ತಿ ಸೇರಿದಂತೆ ಹಲವಾರು ಮುಖಂಡರುಗಳು ಕಾರ್ಯಕರ್ತರು ಮತಯಾಚನೆ ಮಾಡಿದರು.ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಳಿಕುಂಟೆಮಠ್ ಪರ ರಾಜ್ಯ ಬೀಜ ನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾ ಕಾಮಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಲಾಯರ್ ನಾರಾಯಣಸ್ವಾಮಿಸ್ಮಾಜಿ ಶಾಸಕ ಡಾ.ಎಂ.ಶಿವಾನಂದ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂದೀಪ್ ಚಕ್ರವರ್ತಿ, ಮುಖಂಡರಾದ ವೆಂಕಟ್, ದಿಬ್ಬೂರು ಶ್ರೀನಿವಾಸ, ರಾಮಕೃಷ್ಣಪ್ಪ, ನಾರಾಯಣಸ್ವಾಮಿ , ಸೇರಿದಂತೆ ಹಲವಾರು ಮುಖಂಡರುಗಳು ಕಾರ್ಯಕರ್ತರು ಮತಯಾಚನೆ ಮಾಡಿದರು.
ಮತದಾನದ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮತಗಟ್ಟೆಗಳ ಬಳಿ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು.ಮತಗಟ್ಟೆ ಭೇಟಿ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ತಹಸೀಲ್ದಾರ್ ರಶ್ಮಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಸಿಕೆಬಿ-4 ಚಿಕ್ಕಬಳ್ಳಾಪುರ ತಾಲೂಕು ಕಚೇರಿಯ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿ ಹೊರಬಂದ ಪದವೀಧರ ಮಹಿಳೆಯರು ಮತ ಚಲಾಯಿಸಿದ್ದಕ್ಕೆ ತೋರು ಬೆರಳಿಗೆ ಶಾಯಿ ಹಚ್ಚಿರುವುದನ್ನು ಪ್ರದರ್ಶಿಸಿದರು.