ಕುಷ್ಟಗಿ: ಮಹಿಳಾ ಮೀಸಲಾತಿ ಜಾರಿ ನೆಪದಲ್ಲಿ ಕ್ಷೇತ್ರ ವಿಂಗಡಣೆ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಖಂಡನೀಯ, ಕ್ಷೇತ್ರ ವಿಂಗಡಣೆ ಮಾಡಿದರೆ ದಕ್ಷೀಣ ಭಾರತದ ಯಾರೊಬ್ಬರು ಮುಂದಿನ 50 ವರ್ಷದವರೆಗೆ ಪ್ರಧಾನಮಂತ್ರಿ,ರಾಷ್ಟ್ರಪತಿ ಹುದ್ದೆ ಅಲಂಕರಿಸಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ 2023ರ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತರದೆ ದೇಶದ ಮಹಿಳೆಯರಿಗೆ ಸುಳ್ಳು ಹೇಳಿ ದ್ರೋಹ ಮಾಡಿದ ಬಿಜೆಪಿ ವಿರುದ್ಧ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಉತ್ತರ ಪ್ರದೇಶದಲ್ಲಿ 80 ಸೀಟುಗಳಿದ್ದು, ಕರ್ನಾಟಕದಲ್ಲಿ 28 ಸೀಟುಗಳಿವೆ, ಕ್ಷೇತ್ರ ವಿಂಗಡಣೆ ಜಾರಿಗೆ ಬಂದರೆ ಕರ್ನಾಟಕದಲ್ಲಿ 32 ಸೀಟುಗಳಾಗುತ್ತವೆ ಆದರೆ ಉತ್ತರ ಪ್ರದೇಶದಲ್ಲಿ 150 ಸೀಟುಗಳಾಗುತ್ತವೆ ಈ ಒಂದೇ ರಾಜ್ಯವು ದಕ್ಷೀಣ ಭಾರತದ ಏಳು ರಾಜ್ಯಗಳಿಗೆ ಸಮವಾಗಲಿದೆ ಎಂದರು.
2023ರಲ್ಲಿ ಮಹಿಳಾ ಮೀಸಲಾತಿ ಒಟ್ಟು 544 ಸೀಟುಗಳಲ್ಲಿ 33% ಮಹಿಳೆಯರಿಗೆ ನೀಡಬೇಕೆಂದು ತಿರ್ಮಾನಗೊಂಡು ಗೆಜೆಟ್ ನೋಟಿಫೀಕೇಷನ್ ಆಗಿದ್ದು, ಈಗ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಮಾತು ಹಾಸ್ಯಾಸ್ಪದವಾಗಿದೆ. ಈ ಮೊದಲಿನಿಂದಲೂ ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದರು.ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ ಮಾತನಾಡಿ, ಮಹಿಳಾ ಮೀಸಲಾತಿ ಕಾನೂನು ಮತ್ತು ಕ್ಷೇತ್ರ ಪುನರ್ ವಿಂಗಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಎನ್‌ಡಿಎ ಸರ್ಕಾರ ಕೇವಲ ರಾಜಕೀಯ ಲಾಭಕ್ಕಾಗಿ ಈ ವಿಷಯ ಬಳಸಿಕೊಳ್ಳುತ್ತಿದೆ ಎಂದರು.
ಮಹಿಳಾ ಮೀಸಲಾತಿ ಕಾನೂನು ಜಾರಿಗೆ ತರುವ ಪ್ರಾಮಾಣಿಕ ಉದ್ದೇಶ ಸರ್ಕಾರಕ್ಕಿದ್ದರೆ, ಅದಕ್ಕೆ ಕ್ಷೇತ್ರ ಪುನರ್ ವಿಂಗಡಣೆಯ ವಿಷಯ ಜೋಡಿಸುವ ಅಗತ್ಯವಿರಲಿಲ್ಲ. ಶೇ. 33ರಷ್ಟು ಮೀಸಲಾತಿ ನೀಡುವ ಮಾತು ಕೇವಲ ರಾಜಕೀಯ ಗಿಮಿಕ್ ಆಗಿದ್ದು, 2023ರಲ್ಲಿ ಇಂಡಿಯಾ ಮೈತ್ರಿಕೂಟದ ಎಲ್ಲ ಪಕ್ಷಗಳು ಮಹಿಳಾ ಮೀಸಲಾತಿಗೆ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದರೂ ಅದನ್ನು ಜಾರಿಗೆ ತರದೆ ಕ್ಷೇತ್ರ ಪುನರ್ ವಿಂಗಡಣೆ ಮುಂದಿಟ್ಟಿರುವುದು ಬಿಜೆಪಿಯ ರಾಜಕೀಯ ಷಡ್ಯಂತ್ರವಾಗಿದೆ ಎಂದರು.
ಅಂದಿನ ಪ್ರಧಾನ ಮಂತ್ರಿ ದಿ. ರಾಜೀವ್ ಗಾಂಧಿ 73-74ನೇ ತಿದ್ದುಪಡಿಗೆ ಮುನ್ನುಡಿ ಬರೆಯುವ ಮೂಲಕ ಎಲ್ಲ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಿದ್ದರಿಂದ ಇಂದು ಸ್ಥಳಿಯ ಸಂಸ್ಥೆಗಳಲ್ಲಿ ಶೇ.50% ಮಹಿಳಾ ಮೀಸಲು ಇದೆ. ಮನುವಾದಿ ಬಿಜೆಪಿ ಮಹಿಳೆಯರನ್ನು ಸದಾ ಹತ್ತಿಡುತ್ತಾ ನಾಟಕ ಮಾಡುತ್ತಾ ಬಂದಿದೆ. ಕಾಂಗ್ರೆಸ್ 16 ವರ್ಷ ಮಹಿಳಾ ಪ್ರಧಾನಿ ಕೊಟ್ಟಿದೆ. ಕಾಂಗ್ರೆಸ್ ಸದಾ ಮಹಿಳೆಯರ ಪರವಾಗಿದೆ ಎಂದರು.
ಮಾಜಿ ಜಿಪಂ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿ, ದೇಶ ಕಟ್ಟಿದಂತಹ ಕಾಂಗ್ರೆಸ್ ಮಹಿಳೆಯರಿಗೆ ಅನ್ಯಾಯ ಮಾಡಿರುವದಿಲ್ಲ 2023ರ ಬಿಲ್ ಪ್ರಕಾರ ಮಹಿಳಾ ಮೀಸಲಾತಿ ಅಂಗೀಕರಿಸುವ ಜತೆಗೆ ಎಸ್ಸಿಎಸ್ಟಿಗೆ 18% ಮೀಸಲಾತಿ ಒದಗಿಸಿಕೊಡಬೇಕಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತವಾಡ, ಯುವಮುಖಂಡ ದೊಡ್ಡಬಸನಗೌಡ ಬಯ್ಯಾಪೂರ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ, ಶಂಕರಗೌಡ ಪಾಟೀಲ, ಮೈನುದ್ದೀನ್ ಮುಲ್ಲಾ, ಗ್ಯಾರಂಟಿ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್, ಕೇದಾರನಾಥ ತುರಕಾಣಿ, ಮಹಾಂತೇಶ ಬಂಡೇರ, ಅಮರೇಶ ಗಾಂಜಿ, ವಸಂತ ಮೇಲಿನಮನಿ, ಉಮೇಶ ಮಂಗಳೂರು, ಯಮನೂರ ಸಂಗಟಿ, ಮಾನಪ್ಪ ತಳವಾರ, ರೇಣುಕಾ ಪುರದ, ಆಯಿಷಾ, ಅನ್ನಪೂರ್ಣ ಬಬಲೇಶ್ವರ, ಉಮಾದೇವಿ ಹನಮನಾಳ, ಶೋಭಾ ಪುರ್ತಗೇರಿ, ಹುಲಿಗೆಮ್ಮ ವಡ್ಡರ, ನಿರ್ಮಲಾ ಕರಡಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.ಪ್ರತಿಭಟನಾ ಮೆರವಣಿಗೆ:
ಕುಷ್ಟಗಿ ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸ್ ನಿಲ್ದಾಣ,ಮಾರುತಿ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಕಾಲ್ನಡಿಗೆಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.