ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಲಿ: ಡಿಕೆಸು!

| Published : Feb 02 2024, 01:01 AM IST / Updated: Feb 02 2024, 03:59 PM IST

DK Suresh

ಸಾರಾಂಶ

ಕೇಂದ್ರ ಸರ್ಕಾರ ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚುತ್ತಿದೆ. ಪ್ರಧಾನಿ ಮೋದಿ ಅವರ ಸರ್ಕಾರದ ಈ ನೀತಿಯಿಂದಾಗಿ ನಮಗೆ ಆರ್ಥಿಕವಾಗಿ ತೊಂದರೆ ಆಗುತ್ತಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ

ಕೇಂದ್ರ ಸರ್ಕಾರ ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚುತ್ತಿದೆ. ಪ್ರಧಾನಿ ಮೋದಿ ಅವರ ಸರ್ಕಾರದ ಈ ನೀತಿಯಿಂದಾಗಿ ನಮಗೆ ಆರ್ಥಿಕವಾಗಿ ತೊಂದರೆ ಆಗುತ್ತಿದೆ. 

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದಕ್ಷಿಣ ಹಾಗೂ ಉತ್ತರ ಭಾರತಗಳು ಪ್ರತ್ಯೇಕವಾಗುವಂತೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಧ್ಯಂತರ ಬಜೆಟ್ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಜೆಟ್‌ನಲ್ಲಿ ಹೊಸದೇನೂ ಇಲ್ಲ. ನಾಮಫಲಕ ಮಾತ್ರ ಬದಲಾಗಿದ್ದು, ಯೋಜನೆಗಳಿಗೆ ಬೇರೆ, ಬೇರೆ ದೇಸಿ ಹೆಸರು ಇಡಲಾಗಿದೆ. 

ಚುನಾವಣೆಗೆ ಸಂಬಂಧಿಸಿ ಒಂದಷ್ಟು ಘೋಷಣೆ ಬಿಟ್ಟರೆ ಬೇರೇನೂ ಇಲ್ಲ. ಜನಸಾಮಾನ್ಯರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ವಿತ್ತ ಸಚಿವರು ಮಾಡಿದ್ದಾರೆ. 

ಹಿಂದೆ ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದವರು ಇಂದು ಗ್ಯಾರಂಟಿ ಹೆಸರಲ್ಲಿ ಚುನಾವಣೆಗೆ ಹೊರಟಿದ್ದಾರೆ ಎಂದು ಟೀಕಿಸಿದರು.

ಆರ್ಥಿಕ ಸಮೀಕ್ಷಾ ವರದಿಯನ್ನು ಇಟ್ಟಿದ್ದರೆ ದೇಶದ ಪರಿಸ್ಥಿತಿ ಏನಿದೆ?, ಕಳೆದ ಸಾಲಿನಲ್ಲಿ ದೇಶ ಯಾವ ರೀತಿಯ ಸಾಧನೆ ಮಾಡಿದೆ ಎನ್ನುವ ಸಂಗತಿ ಗೊತ್ತಾಗುತ್ತಿತ್ತು. ದೇಶದ ಪ್ರಗತಿ ಕುರಿತ ಸರ್ಕಾರದ ಹೇಳಿಕೆ ಬಗ್ಗೆ ಅನುಮಾನ ಶುರುವಾಗಿದೆ ಎಂದರು.