ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಕರ ಸಂಕ್ರಾಂತಿಗೆ ರಾಜಧಾನಿಯಿಂದ ವಿವಿಧ ನಗರಗಳಿಗೆ ವಿಶೇಷ ರೈಲನ್ನು ಬಿಡದ ಹಿನ್ನೆಲೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಶನಿವಾರ ರಾತ್ರಿ ತೆರಳಿದ ಹಲವು ರೈಲುಗಳಲ್ಲಿ ತೀವ್ರ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡಿದರು. ವಿಶೇಷ ರೈಲು ಬಿಡದ ನೈಋತ್ಯ ರೈಲ್ವೆ ಧೋರಣೆಗೆ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ನಗರದಿಂದ ತೆರಳಿದ ಉದ್ಯಾನ ಎಕ್ಸ್‌ಪ್ರೆಸ್, ಕರ್ನಾಟಕ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್ ಹಾಗೂ ಸೋಲಾಪುರ ಎಕ್ಸ್‌ಪ್ರೆಸ್ ಸೇರಿ ಹಲವು ರೈಲುಗಳಲ್ಲಿ ಪ್ರಯಾಣಿಕರು ತುಂಬಿಕೊಂಡಿದ್ದರು. ವಿಶ್ವಮಾನವ ರೈಲಿನಲ್ಲಿ ನಿಂತುಕೊಳ್ಳಲೂ ಆಗದಷ್ಟು ಪ್ರಯಾಣಿಕರ ದಟ್ಟಣೆಯಿತ್ತು. ಕೆಎಸ್‌ಆರ್ ನಿಲ್ದಾಣದ ನಾಲ್ಕಾರು ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಲಿಡಲು ಆಗದಷ್ಟು ಜನರು ಸೇರಿದ್ದರು.
ವಿಶೇಷ ಸಂದರ್ಭ, ಹಬ್ಬ ಹರಿದಿನಗಳಲ್ಲಿ ವಿಶೇಷ ರೈಲು ಕಾರ್ಯಾಚರಣೆ ನಡೆಸುವುದು ಸಾಮಾನ್ಯ. ಈ ಬಾರಿ ತಮಿಳುನಾಡು, ಕೇರಳ ಸೇರಿ ಕೆಲ ರಾಜ್ಯಗಳಿಗೆ ನೈಋತ್ಯ ರೈಲ್ವೆ ವಿಶೇಷ ರೈಲುಗಳು ಸೇವೆ ನೀಡಿದೆ. ಆದರೆ, ರಾಜ್ಯದ ಒಳಗಡೆ ವಿಶೇಷ ರೈಲನ್ನು ಬಿಟ್ಟಿಲ್ಲ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೆ ತೆರಳುವವರಿಗೆ ಹೆಚ್ಚುವರಿ ರೈಲಿನ ವ್ಯವಸ್ಥೆಯನ್ನು ಮಾಡಿಲ್ಲ. ಇದರಿಂದಾಗಿ ಪರದಾಡುತ್ತಿದ್ದೇವೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳನ್ನು ಕೇಳಿದರೂ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಜನತೆ ಅಸಮಾಧಾನ ಹೊರಹಾಕಿದರು.ದಕ್ಷಿಣ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ ವಲಯಗಳು ಕರ್ನಾಟಕಕ್ಕೆ ವಿಶೇಷ ರೈಲನ್ನು ಬಿಡಲ್ಲ. ಆದರೆ, ನೈಋತ್ಯ ರೈಲ್ವೆ ಹಬ್ಬದ ವೇಳೆ ರಾಜ್ಯ ಬಿಟ್ಟು ಉಳಿದೆಡೆ ವಿಶೇಷ ರೈಲು ಬಿಡುತ್ತದೆ. ಈಚೆಗೆ ವಂದೇ ಭಾರತ್, ಅಮೃತ್ ಭಾರತ್ ರೈಲಿಗೆ ಜನಪ್ರತಿನಿಧಿಗಳು ನೀಡುತ್ತಿರುವಷ್ಟು ಪ್ರಾಮುಖ್ಯತೆಯನ್ನು ಸಾಧಾರಣ ರೈಲುಗಳಿಗೆ ಕೊಡುತ್ತಿಲ್ಲ. ಯಾವೊಬ್ಬ ಸಂಸದರೂ ವಿಶೇಷ ರೈಲುಗಳನ್ನು ಬಿಡುವ ಬಗ್ಗೆ ಇಲಾಖೆಗೆ ಪತ್ರ ಬರೆಯುವಂತ ವಿಚಾರಕ್ಕೆ ಕೈ ಹಾಕುತ್ತಿಲ್ಲ ಎಂದು ದಾನೇಶ್ ಸಂಗೋಳ್ಳಿ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ ಕಾರ್ಪ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.