ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ ವಲಯ ಸರಕು ಸಾಗಣೆ ಕಾರ್ಯಾಚರಣೆ ಹಾಗೂ ಆದಾಯದಲ್ಲೂ ಅತ್ಯುತ್ತಮ ಸಾಧನೆ ದಾಖಲಿಸಿದ್ದು, ಬರೋಬ್ಬರಿ ₹ 503.84 ಕೋಟಿ ಗಳಿಸಿದೆ. ಇಲಾಖೆಯ ಒಟ್ಟು ಆದಾಯ 839.70 ಕೋಟಿ ಆಗಿದೆ.

ಹುಬ್ಬಳ್ಳಿ:

ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ ವಲಯ ಸರಕು ಸಾಗಣೆ ಕಾರ್ಯಾಚರಣೆ ಹಾಗೂ ಆದಾಯದಲ್ಲೂ ಅತ್ಯುತ್ತಮ ಸಾಧನೆ ದಾಖಲಿಸಿದ್ದು, ಬರೋಬ್ಬರಿ ₹ 503.84 ಕೋಟಿ ಗಳಿಸಿದೆ. ಇಲಾಖೆಯ ಒಟ್ಟು ಆದಾಯ 839.70 ಕೋಟಿ ಆಗಿದೆ.

ಒಂದು ತಿಂಗಳಲ್ಲಿ ವಲಯವು ಒಟ್ಟು 5.07 ಎಂಟಿ (ಮಿಲಿಯನ್ ಟನ್) ಮೂಲ ಸರಕು ಲೋಡ್ ಮಾಡಿದ್ದು, ಡಿಸೆಂಬರ್ 2024ರ 4.04 ಎಂಟಿಗೆ ಹೋಲಿಸಿದರೆ 1.03 ಎಂಟಿ (ಶೇ. 25.4) ಹೆಚ್ಚಳವಾಗಿದೆ. ಇದು ನೈಋತ್ಯ ರೈಲ್ವೆ ಇತಿಹಾಸದಲ್ಲಿಯೇ ಒಂದೇ ತಿಂಗಳಲ್ಲಿ ಸಾಧಿಸಿದ ಅತ್ಯಧಿಕ ಸರಕು ಸಾಗಣೆಯಾಗಿದ್ದು, ಮಾರ್ಚ್ 2024ರಲ್ಲಿ ದಾಖಲಾಗಿದ್ದ 5.04 ಎಂಟಿ ಹಿಂದಿನ ದಾಖಲೆ ಮೀರಿಸಿದೆ.

ಸರಕು ಪ್ರಕಾರದಲ್ಲಿ, ಕಬ್ಬಿಣದ ಅದಿರು ಲೋಡಿಂಗ್ 2.1 ಎಂಟಿಗೆ ಏರಿಕೆಯಾಗಿದ್ದು, 0.58 ಎಂಟಿ (ಶೇ. 38.6) ಬೆಳವಣಿಗೆ ಕಂಡು ಬಂದಿದೆ. ಕಲ್ಲಿದ್ದಲು ಲೋಡಿಂಗ್ 1.1 ಎಂಟಿಗೆ ಏರಿಕೆಯಾಗಿದ್ದು, 0.18 ಎಂಟಿ (ಶೇ. 19.5) ಹೆಚ್ಚಳ ದಾಖಲಿಸಿದೆ. ಉಕ್ಕು ಲೋಡಿಂಗ್ 0.91 ಎಂಟಿ ಆಗಿದ್ದು, ಹಿಂದಿನ ವರ್ಷಕ್ಕಿಂತ 0.12 ಎಂಟಿ (ಶೇ. 15.6) ಹೆಚ್ಚಾಗಿದೆ. ಕಚ್ಚಾ ವಸ್ತು ಸಾಮಗ್ರಿ ಸರಕು ಸಾಗಣೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬಂದು, ಲೋಡಿಂಗ್ 0.15 ಎಂಟಿಗೆ ಏರಿಕೆಯಾಗಿ 0.07 ಎಂಟಿ (ಶೇ. 97.4) ಹೆಚ್ಚಳ ದಾಖಲಿಸಿದೆ. ಖನಿಜ ತೈಲ ಲೋಡಿಂಗ್ 0.22 ಎಂಟಿ ಆಗಿದ್ದು, 0.03 ಎಂಟಿ (ಶೇ. 14) ಹೆಚ್ಚಳದೊಂದಿಗೆ ನೈಋತ್ಯ ರೈಲ್ವೆ ಪ್ರಾರಂಭವಾದ ಬಳಿಕದ ಅತ್ಯಧಿಕ ಮಾಸಿಕ ಲೋಡಿಂಗ್ ಸಾಧಿಸಿದೆ. ಇದಲ್ಲದೆ, ರಸಗೊಬ್ಬರ ಲೋಡಿಂಗ್ 0.1 ಎಂಟಿಗೆ (ಶೇ. 15.4), ಕಂಟೇನರ್ ಲೋಡಿಂಗ್ 0.1 ಎಂಟಿಗೆ (ಶೇ. 3.5) ಏರಿಕೆಯಾಗಿದೆ.

ಒಟ್ಟಾರೆಯಾಗಿ, 2025-26 ಹಣಕಾಸು ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ, ನೈಋತ್ಯ ರೈಲ್ವೆ 38.36 ಎಂಟಿ ಮೂಲ ಸರಕು ಲೋಡ್ ಮಾಡಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.98 ಎಂಟಿ (ಶೇ. 18.5) ಹೆಚ್ಚಳವಾಗಿದೆ. ಇದು ನೈಋತ್ಯ ರೈಲ್ವೆ ಇತಿಹಾಸದಲ್ಲಿಯೇ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸಾಧಿಸಿದ ಅತ್ಯಧಿಕ ಸರಕು ಸಾಗಣೆಯಾಗಿದ್ದು, 2023-24ರಲ್ಲಿ ದಾಖಲಾಗಿದ್ದ 36.09 ಎಂಟಿ ಹಿಂದಿನ ದಾಖಲೆ ಮೀರಿಸಿದೆ.

ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ ₹839.70 ಕೋಟಿ ಒಟ್ಟು ಆದಾಯ ಗಳಿಸಿದ್ದು, ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ. 14.36 ಬೆಳವಣಿಗೆ ಸಾಧಿಸಿದೆ. ಸರಕು ಸಾಗಣೆ ಆದಾಯ ₹503.84 ಕೋಟಿಗೆ ಏರಿಕೆಯಾಗಿ ಶೇ. 12.43 ಹೆಚ್ಚಳ ದಾಖಲಿಸಿದೆ. ಪ್ರಯಾಣಿಕರ ಆದಾಯ ₹296.18 ಕೋಟಿ ಆಗಿದ್ದು, ಶೇ. 21.40 ಬೆಳವಣಿಗೆಯೊಂದಿಗೆ ಈ ಅವಧಿಯಲ್ಲಿ ಸುಮಾರು 1.46 ಕೋಟಿ ಪ್ರಯಾಣಿಕರನ್ನು ಸಾಗಿಸಲಾಗಿದೆ. ವಿವಿಧ ಆದಾಯ ₹10.31 ಕೋಟಿಗೆ ಏರಿಕೆಯಾಗಿ ಶೇ. 17.16 ಹೆಚ್ಚಳ ಕಂಡಿದೆ.

2025ರ ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ, ನೈಋತ್ಯ ರೈಲ್ವೆ ₹6,922.94 ಕೋಟಿ ಒಟ್ಟು ಆದಾಯ ಗಳಿಸಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 15.21 ಬೆಳವಣಿಗೆ ದಾಖಲಿಸಿದೆ. ಈ ಅವಧಿಯಲ್ಲಿ ಪ್ರಯಾಣಿಕರ ಆದಾಯ ₹2,543.44 ಕೋಟಿಗೆ (ಶೇ. 8.20), ಸರಕು ಸಾಗಣೆ ಆದಾಯ ₹3,969.81 ಕೋಟಿಗೆ ಮತ್ತು ವಿವಿಧ ಆದಾಯ ₹157.70 ಕೋಟಿಗೆ (ಶೇ. 14.82) ಏರಿಕೆಯಾಗಿದೆ ಎಂದು ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.