ನೈಋತ್ಯ ರೈಲ್ವೆ ಸೆಪ್ಟೆಂಬರ್‌ನಲ್ಲಿ 4.41 ದಶಲಕ್ಷ ಟನ್ ಸರಕು ಸಾಗಣೆ ದಾಖಲಿಸುವ ಮೂಲಕ ಸಾರ್ವಕಾಲಿಕ ಗರಿಷ್ಠ ಸಾಧನೆ ಮಾಡಿದೆ. ಇದರೊಂದಿಗೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ ವರೆಗಿನ 6 ತಿಂಗಳಲ್ಲಿ ಒಟ್ಟು ಸರಕು ಸಾಗಣೆ 26.1 ದಶ ಲಕ್ಷ ಟನ್‌ಗೆ ತಲುಪಿದೆ.

ಹುಬ್ಬಳ್ಳಿ:

ನೈಋತ್ಯ ರೈಲ್ವೆ ಸೆಪ್ಟೆಂಬರ್‌ನಲ್ಲಿ 4.41 ದಶಲಕ್ಷ ಟನ್ ಸರಕು ಸಾಗಣೆ ದಾಖಲಿಸುವ ಮೂಲಕ ಸಾರ್ವಕಾಲಿಕ ಗರಿಷ್ಠ ಸಾಧನೆ ಮಾಡಿದೆ. ಇದರೊಂದಿಗೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ ವರೆಗಿನ 6 ತಿಂಗಳಲ್ಲಿ ಒಟ್ಟು ಸರಕು ಸಾಗಣೆ 26.1 ದಶ ಲಕ್ಷ ಟನ್‌ಗೆ ತಲುಪಿದೆ. ಸೆಪ್ಟೆಂಬರ್‌ನಲ್ಲಿ ₹870 ಕೋಟಿ ಒಟ್ಟು ಆದಾಯ ಗಳಿಸಿದ್ದು, 6 ತಿಂಗಳ ಒಟ್ಟು ಆದಾಯ ₹4,730 ಕೋಟಿಗೆ ಏರಿಕೆಯಾಗಿದೆ.

ಸೆಪ್ಟೆಂಬರ್‌ನ ಸರಕು ಸಾಗಣೆ 2025ರ ಇದೇ ಅವಧಿಯ 4.17 ದಶಲಕ್ಷ ಟನ್‌ಗೆ ಹೋಲಿಸಿದರೆ ಶೇ. 5.9ರಷ್ಟು ಹೆಚ್ಚಳವಾಗಿದೆ. ಸರಕು ಸಾಗಣೆಯಲ್ಲಿ ಕಬ್ಬಿಣದ ಅದಿರು 1.70 ದಶ ಲಕ್ಷ ಟನ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದು, ಶೇ. 4ರಷ್ಟು ಬೆಳವಣಿಗೆ ದಾಖಲಿಸಿದೆ. ಪಿಗ್ ಐರನ್ ಮತ್ತು ಸಿದ್ಧಪಡಿಸಿದ ಉಕ್ಕು 1.127 ದಶಲಕ್ಷ ಟನ್, ಕಲ್ಲಿದ್ದಲು 0.90 ದಶಲಕ್ಷ ಟನ್, ಖನಿಜ ತೈಲ 0.217 ದಶಲಕ್ಷ ಟನ್ ಹಾಗೂ ಇತರ ಸರಕುಗಳು 0.167 ದಶಲಕ್ಷ ಟನ್ ಸಾಗಣೆಯಾಗಿದೆ. ಕಂಟೈನರ್ 0.105 ದಶಲಕ್ಷ ಟನ್, ಸಿಮೆಂಟ್ 0.037 ದಶಲಕ್ಷ ಟನ್ ಹಾಗೂ ಆಹಾರ ಧಾನ್ಯ 0.007 ದಶಲಕ್ಷ ಟನ್ ಲೋಡಿಂಗ್ ದಾಖಲಾಗಿದೆ.

ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ ಸರಕು ಸಾಗಣೆ ಪ್ರಮಾಣ 26.1 ದಶಲಕ್ಷ ಟನ್ ಆಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 5.8ರಷ್ಟು ಹೆಚ್ಚಳವಾಗಿದೆ. ಕಬ್ಬಿಣದ ಅದಿರು 10.17 ದಶಲಕ್ಷ ಟನ್, ಪಿಗ್ ಐರನ್ ಮತ್ತು ಸಿದ್ಧಪಡಿಸಿದ ಉಕ್ಕು 5.95 ದಶಲಕ್ಷ ಟನ್, ಕಲ್ಲಿದ್ದಲು 5.36 ದಶ ಲಕ್ಷ ಟನ್ ಸಾಗಣೆಯಾಗಿದೆ. ಇತರ ಸರಕುಗಳು 1.25 ದಶ ಲಕ್ಷ, ಖನಿಜ ತೈಲ 1.24 ದಶಲಕ್ಷ ಹಾಗೂ ಕಂಟೈನರ್ 0.55 ದಶಲಕ್ಷ ಟನ್ ದಾಖಲಾಗಿದೆ.

ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕರ ಆದಾಯ ₹357.5 ಕೋಟಿ ಆಗಿದ್ದು, 1.5 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಯಾಣಿಕರ ಆದಾಯದಲ್ಲಿ ಶೇ. 26.87ರಷ್ಟು ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 6.83ರಷ್ಟು ಏರಿಕೆಯಾಗಿದೆ. ಸರಕು ಸಾಗಣೆ ಆದಾಯ ₹465 ಕೋಟಿಯಾಗಿದ್ದು, ಶೇ. 8.72ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ ಪ್ರಯಾಣಿಕರ ಆದಾಯ ₹1,904.10 ಕೋಟಿ ಆಗಿದ್ದು, 9.2 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಸರಕು ಸಾಗಣೆ ಆದಾಯ ₹2,546 ಕೋಟಿಗೆ ತಲುಪಿದೆ. ಪಾರ್ಸೆಲ್ ಆದಾಯ ₹89.50 ಕೋಟಿ ಹಾಗೂ ಟಿಕೆಟ್ ತಪಾಸಣೆ ಆದಾಯ ₹33.71 ಕೋಟಿ ದಾಖಲಾಗಿದೆ.

ಸೆಪ್ಟೆಂಬರ್‌ನಲ್ಲಿ ಒಟ್ಟು ಆದಾಯವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹119 ಕೋಟಿ ಅಥವಾ ಶೇ.15.91ರಷ್ಟು ಹೆಚ್ಚಳವಾಗಿದೆ. ಆರು ತಿಂಗಳ ಒಟ್ಟು ಆದಾಯದಲ್ಲೂ ₹221.32 ಕೋಟಿ ಅಥವಾ ಶೇ. 4.91ರಷ್ಟು ಏರಿಕೆಯಾಗಿದೆ. ನೈಋತ್ಯ ರೈಲ್ವೆಯ ಸಾಧನೆಗೆ ಮಹಾಪ್ರಬಂಧಕ ಪಿ. ಅನಂತ್ ಅವರು ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಅಭಿನಂದಿಸಿದ್ದಾರೆ.