ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಜ್ಞಾನ ಧ್ವನಿ ಸಮುದಾಯ ಬಾನುಲಿ ಕೇಂದ್ರ, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಬಾನುವಾರ ಫೋನ್ ಇನ್ ಕಾರ್ಯಕ್ರಮ ನಡೆಯಿತು.ಬೆಳಗ್ಗೆ 10.30 ರಿಂದ ಮಧ್ಯಾಹ್ನ 12ರವರೆಗೆ ಸುಮಾರು 47 ವಿದ್ಯಾರ್ಥಿಗಳು ಹಾಗೂ ಪೋಷಕರು ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಮಯ ಒಂದಾಣಿಕೆ. ಅನ್ವಯಿಕ ಪ್ರಶ್ನೆಗಳ ಬರೆಯುವ ವಿಧಾನ. ಇತಿಹಾಸದಲ್ಲಿ ಭಾರತದ ಭೂಪಟವನ್ನು ಬರೆದು ಪ್ರದೇಶಗಳನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆ ಹಾಗೂ ಇತಿಹಾಸ ಪಾಠದಲ್ಲಿ ಇಸವಿಯನ್ನು ನೆನಪು ಮಾಡಿಕೊಳ್ಳುವುದರ ಬಗ್ಗೆ ಹಾಗೂ ಇನ್ನಿತರ ಕ್ಲಿಷ್ಟಕರ ಪ್ರಶ್ನೆಗಳಿಗೆ ಪರಿಹಾರವನ್ನು ಕಂಡುಕೊಂಡರು.
ಗಣಿತದಲ್ಲಿ ಪ್ರಮೇಯ ಹಾಗೂ ನಕ್ಷೆಗಳ ಬಗ್ಗೆ ಒಂದು ಅಂಕ ಹಾಗೂ ಎರಡು ಅಂಕಗಳನ್ನು ಉತ್ತರಿಸುವ ಬಗ್ಗೆ, ವಿಜ್ಞಾನದಲ್ಲಿ ಅನ್ವಯಿಕ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದು ಎನ್ನುವುದರ ಬಗ್ಗೆ ಕನ್ನಡ ಇಂಗ್ಲಿಷ್ ಹಾಗು ಹಿಂದಿ ಭಾಷೆಗಳಲ್ಲಿ ಉತ್ತೀರ್ಣರಾಗುವುದು ಹೇಗೆ ಅಕ್ಷರವನ್ನು ಅಂದವಾಗಿ ಬರೆಯುತ್ತಾ ವೇಗವಾಗಿ ಬರೆಯುವುದು ಹೇಗೆ ಎಂಬುದರ ಬಗ್ಗೆ ಅನೇಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಫೋನಿನ ಕಾರ್ಯಕ್ರಮದ ಮೂಲಕ ನೇರವಾಗಿ ನುರಿತ ಸಂಪನ್ಮೂಲ ಶಿಕ್ಷಕರಿಗೆ ಕೇಳಿ ತಮ್ಮ ಸರಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರು. ಬೆಳಗ್ಗೆ ವೇಳೆ ಯಾವುದನ್ನು ಓದಬೇಕು? ಸಂಜೆ ವೇಳೆ ಯಾವುದನ್ನು ಓದಬೇಕು ಓದಿದ್ದನ್ನು ಹೇಗೆ ನೆನಪಿನಲ್ಲಿಟ್ಟಕೊಳ್ಳಬೇಕು. ಈ ಬಾರಿ ಪ್ರಶ್ನೆಪತ್ರಿಕೆ ಕಷ್ಟವಾಗಿರುತ್ತದೆಯೋ, ಸುಲಭವಾಗಿರುತ್ತೋ ಎಂದು ಮಕ್ಕಳು ಸಂಪನ್ಮೂಲ ಶಿಕ್ಷಕರಿಗೆ ಪ್ರಶ್ನೆಗಳ ಸುರಿಮಳೆಗೈದರು.ಫೋನ್‌ಇನ್ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀಕಂಠಸ್ವಾಮಿ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿಗಳು, ಶಿಕ್ಷಣ ಸಂಯೋಜಕ ಮನೋಹರ್, ಕುಮಾರ್, ನುರಿತ ಸಂಪನ್ಮೂಲ ಶಿಕ್ಷಕ ಬಸವರಾಜ್- ಸಮಾಜ ವಿಜ್ಞಾನ, ಶ್ವೇತಾ- ವಿಜ್ಞಾನ, ಅನಿಲ್ ಹಾಗೂ ಪ್ರದೀಪ್- ಗಣಿತ, ಸಿದ್ದೇಶ್ವರ ಪ್ರಸಾದ್ - ಇಂಗ್ಲಿಷ್, ಮಧುಸೂಧನ್ -ಕನ್ನಡ. ಭಾರ್ಗವಿ-ಹಿಂದಿ ವಿಷಯ ಸಂಪನ್ಮೂಲ ಶಿಕ್ಷಕರು ಭಾಗವಹಿಸಿದ್ದರು.
ಸಂಸ್ಥೆಯ ಮುಖ್ಯ ಶಿಕ್ಷಕ ರಾಮಪ್ರಸಾದ್, ನಾಗರಾಜ್ ಇದ್ದರು.ಒಟ್ಟಾರೆ ಮಾ. 25 ರಿಂದ ಪ್ರಾರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳು ಹೇಗೆ ಸಿದ್ದರಾಗಬೇಕು, ಪರೀಕ್ಷೆಯನ್ನು ಹೇಗೆ ಧರಿಸಬೇಕು, ಸಮಯವನ್ನು ಹೇಗೆ ಹೊಂದಾಣಿ ಮಾಡಬೇಕು ಹಾಗೂ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಸುದೀರ್ಘವಾಗಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ನೀಡಲಾಯಿತು.