ಮಹಿಳಾ ಸಬಲೀಕರಣದಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ

| Published : Jul 06 2025, 11:48 PM IST

ಸಾರಾಂಶ

ಜಯಲಕ್ಷ್ಮಿಯವರ ಸೌಂದರ್ಯವನ್ನು ವಿರೂಪಗೊಳಿಸಲೆಂದೇ ಅವರ ಪತಿ ಆಸಿಡ್ ದಾಳಿ ನಡೆಸಿದರು

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳಾ ಸಬಲೀಕರಣದ ವಿಷಯದಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾಗಿದ್ದು, ಆಸಿಡ್ ನಿರಾಶ್ರಿತರ ವಿಷಯದಲ್ಲಿ ಮಾಧ್ಯಮಗಳು ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಿವೆ ಎಂದು ಲೇಖಕ ಡಾ. ಅಮ್ಮಸಂದ್ರ ಸುರೇಶ್ ಹೇಳಿದರು.

ನಗರದ ಸದರ್ನ್ ಸ್ಟಾರ್ ಹೊಟೇಲ್ ಸಭಾಂಗಣದಲ್ಲಿ ನಡೆದ 9ನೇ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಸದೃಢ ಸುಸ್ಥಿರ ಸಮಾಜದಲ್ಲಿ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಯಲಕ್ಷ್ಮಿಯವರ ಸೌಂದರ್ಯವನ್ನು ವಿರೂಪಗೊಳಿಸಲೆಂದೇ ಅವರ ಪತಿ ಆಸಿಡ್ ದಾಳಿ ನಡೆಸಿದರು. ಘಟನೆಗೆ ಸಂಬಂಧಿಸಿದ ಸುದ್ದಿ, ಲೇಖನಗಳನ್ನು ಪ್ರಕಟಿಸುವ ಮೂಲಕ ಪತ್ರಿಕೆಗಳು ಜವಾಬ್ದಾರಿಯುತ ಕೆಲಸವನ್ನು ಮಾಡಿದವು. ಹಲವು ಪತ್ರಿಕೆಗಳು ಈ ಘಟನೆಯ ಕುರಿತು ಸಂಪಾದಕೀಯಗಳನ್ನು ಬರೆಯುವ ಮೂಲಕ ಆಸಿಡ್ ನಿರಾಶ್ರಿತರಿಗೆ ಪ್ರತ್ಯೇಕವಾದ ಕಾನೂನು ರಚಿಸಬೇಕೆಂದು ಆಗ್ರಹಿಸಿದವು. ವಿದ್ಯುನ್ಮಾನ ಮಾಧ್ಯಮಗಳೂ ಹೆಚ್ಚು ಸಮಯವನ್ನು ಈ ಘಟನೆಗೆ ಮೀಸಲಿಟ್ಟವು ಎಂದು ತಿಳಿಸಿದರು.

ಮಾಧ್ಯಮಗಳು ಈ ರೀತಿಯ ಜವಾಬ್ದಾರಿಯನ್ನು ಪ್ರದರ್ಶಿಸಿದ್ದರಿಂದಾಗಿ ಸರ್ಕಾರಗಳು ಆಸಿಡ್ ನಿರಾಶ್ರಿತರಿಗೆ ಹಲವು ಸೌಕರ್ಯಗಳನ್ನು ಕಲ್ಪಿಸಿದವು ಎಂದು ಹೇಳಿದ ಅವರು, ಜಯಲಕ್ಷ್ಮಿಯವರ ಜೀವನ ಇತರ ಮಹಿಳೆಯರಿಗೆ ಮಾರ್ಗದರ್ಶಕವಾಗಲಿ ಎಂದೇ ಅಗ್ನಿಕುಂಡದಿಂದ ಬಂದ ಚೇತನ ಕಾದಂಬರಿಯನ್ನು ರಚಿಸಿದೆ ಎಂದರು.

ಸ್ವಂತ ಗಂಡನಿಂದಲೇ ಆಸಿಡ್ ದಾಳಿಗೆ ಒಳಾಗಾಗಿದ್ದನ್ನು ಸ್ಮರಿಸಿಕೊಂಡು ಭಾವುಕರಾದ ಜಯಲಕ್ಷ್ಮಿ, ಕರ್ನಾಟಕದಲ್ಲಿ ಆಸಿಡ್ ದಾಳಿಗೆ ಒಳಗಾದ 65 ಮಹಿಳಾ ನಿರಾಶ್ರಿತರಿದ್ದು ಅವರನ್ನೆಲ್ಲ ಒಟ್ಟುಗೂಡಿಸಿ ‘ಗೆಳತಿ’ ಸಂಘಟನೆಯನ್ನು ಕಟ್ಟಿಕೊಂಡು ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದರು.

ಆಸಿಡ್ ದಾಳಿಗೆ ಒಳಗಾಗುವುದಕ್ಕೂ ಮೊದಲು ಮನೆಯಿಂದ ಹೊರಬರದ ನಾನು ನಂತರ ನನ್ನಂತಹ ನೊಂದ ಮಹಿಳೆಯರ ಪರವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಸಂಘಟನೆ ಕಟ್ಟಿಕೊಂಡು ಹೋರಾಟ ಮಾಡುತ್ತಿದ್ದೇನೆ. ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದೇವೆ. ಸರ್ಕಾರ ಪೂರಕವಾಗಿ ನೆರವು ನೀಡುತ್ತದೆಂಬ ಆಶಾಭಾವನೆ ನಮ್ಮದು ಎಂದು ತಿಳಿಸಿದರು. ಡಾ. ಶೋಭಾರಾಣಿ ಗೋಷ್ಠಿಯನ್ನು ನಿರ್ವಹಿಸಿದರು.