ನೈಋತ್ಯ ಮಾನ್ಸೂನ್ ಹಿನ್ನೆಲೆ: ಮುನ್ನೆಚ್ಚರಿಕೆಗೆ ಡಿಸಿ ಸೂಚನೆ

| Published : Jun 02 2024, 01:45 AM IST

ಸಾರಾಂಶ

ಕೇರಳ ಕರಾವಳಿ ಮತ್ತು ಈಶಾನ್ಯ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಅಪ್ಪಳಿಸಲಿದ್ದು, ಕೆಲವೇ ಗಂಟೆಗಳಲ್ಲಿ ಮುಂಗಾರು ಆಗಮಿಸುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಅಗತ್ಯ ಮಳೆ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೇರಳದಲ್ಲಿ ಮಾನ್ಸೂನ್ ಆಗಮಿಸಿರುವುದರಿಂದ ಇದಕ್ಕೆ ಪೂರಕವಾಗಿ ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಚಾಮರಾಜನಗರ ಜಿಲ್ಲೆಯಲ್ಲಿಯೂ ಜೂ.7ರವರೆಗೆ ಜಿಲ್ಲೆಯಾದ್ಯಂತ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಗ್ರಾಮ ಪ್ರದೇಶಗಳನ್ನು ಗುರುತಿಸಿ ಮಳೆಯಿಂದ ನೀರು ತುಂಬಿಕೊಳ್ಳುವ ತಗ್ಗು ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್ 51 ರಿಂದ 60ರವರೆಗೆ ಅನ್ವಯವಾಗಬಹುದಾದ ಕಲಂರನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೂರ್ವ ಮುಂಗಾರು ಮಳೆ ಶುರು: ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದ್ದ ಬೆನ್ನಲ್ಲೇ ಕೇರಳ ಮೂಲಕ ಶುಕ್ರವಾರ ರಾತ್ರಿಯಿಂದ ಮುಂಗಾರು ಪ್ರವೇಶವಾಗಿದ್ದು, ಶನಿವಾರ ಮಧ್ಯಾಹ್ನದ ಬಳಿಕ ಜಿಲ್ಲೆಯ ಹಲವೆಡೆ ಮಳೆ ಪ್ರಾರಂಭವಾಗಿದೆ.

ಶನಿವಾರ ಮಧ್ಯಾಹ್ನದ ಬಳಿಕ ಬಿರುಗಾಳಿ, ಗುಡುಗಿನ ಆರ್ಭಟದೊಂದಿಗೆ ಮಳೆ ಆರಂಭವಾಗಿ ಎಡೆಬಿಡದೇ ಜೋರು ಮಳೆಯಾಯಿತು. ನಗರದ ಎಲ್ಲಾ ರಸ್ತೆಗಳಲ್ಲೂ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು. ಪೂರ್ವ ಮುಂಗಾರು ಒಂದೆರಡು ದಿನ ಬಿಡುವು ಕೊಟ್ಟಿದ್ದು, ಶುಕ್ರವಾರದಿಂದಲೇ ಜಿಲ್ಲೆಯಲ್ಲಿ ವಿಪರೀತ ಸೆಕೆ ಕಾಣಿಸಿಕೊಂಡು ಶನಿವಾರ ಮದ್ಯಾಹ್ನದ ಬಳಿಕ ಹಗಲಲ್ಲೇ ಇರುಳಿನ ವಾತವರಣ ನಿರ್ಮಾಣವಾಗಿ, ಮಳೆ ಸುರಿಯಲಾರಂಭಿಸಿತು. ಜಿಲ್ಲೆಯ ಜನತೆ ಮುಂಗಾರಿನ ಮಜಾ ಅನುಭವಿಸುತ್ತಿದ್ದು, ಮುಂಗಾರು ಮುಂದುವರಿದರೆ ಕೆರೆ ಕಟ್ಟೆಗಳು ಭರ್ತಿಯಾಗಲಿವೆ.