ಸಾರಾಂಶ
ಶಿಗ್ಗಾಂವಿ: ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ನೀಡಲಾಗಿದ್ದು, ರೈತರು ಅಗತ್ಯ ದಾಖಲೆ ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಸಿ, ಹದವರಿತು ಬಿತ್ತನೆಮಾಡಿ, ಉತ್ತಮ ಇಳುವರಿ ಪಡೆಯುವಂತೆ ಕೃಷಿ ಅಧಿಕಾರಿ ಶ್ರೀಧರ ದಾಸರ ಕರೆ ನೀಡಿದರು. ಬಂಕಾಪುರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಪ್ರತಿ ಬೆಳೆಗಳಲ್ಲಿ ಮಿಶ್ರ ಬೆಳೆ ಬೆಳೆದು ಹೆಚ್ಚಿನ ಆದಾಯ ಗಳಿಸಿ ಆರ್ಥಿಕವಾಗಿ ಅಭಿವೃದ್ಧಿಹೋಂದಬೇಕು. ಈಗಾಗಲೇ ನಮ್ಮ ಕೃಷಿ ಕೇಂದ್ರದಲ್ಲಿ ಸೋಯಾಬಿನ್ , ಶೇಂಗಾ, ಭತ್ತ, ಗೋವಿನಜೋಳ, ಹೆಸರು, ಅಲಸಂದಿ, ತೊಗರಿ ಬೀಜದ ದಾಸ್ತಾನು ಸಂಗ್ರಹಿಸಲಾಗಿದೆ. ರೈತರ ಬೇಡಿಕೆ ಅನುಗುಣವಾಗಿ ಬೀಜ ವಿತರಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ರಘುನಂದನಮೂರ್ತಿಯವರು ಜಿಲ್ಲೆಯಲ್ಲಿ ಬೀಜ, ರಸಗೋಬ್ಬರದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಬುಧವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶೆಂಗಾ ಬೀಜದ ಕೊರತೆ ಕಂಡು ಬಂದಿದ್ದು, ಶೇಂಗಾ ಬೀಜ ಖರೀದಿಸಲು ಬಂದ ರೈತರು, ಬೀಜ ಸಿಗದೇ ಗೋಣಗುತ್ತಾ ಮನೆ ಕಡೆ ತೆರಳುತ್ತಿರುವುದು ಕಂಡು ಬಂದಿತು.
ಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ರೈತರು ಸರತಿಸಾಲಿನಲ್ಲಿ ನಿಂತು ಬೀಜ ಖರೀದಿಸುತ್ತಿರುವುದು ಕಂಡು ಬಂದಿತು. ದಾಹ ತಣಿಸಿಕೊಳ್ಳಲು ನೀರು, ಮಜ್ಜಿಗೆ, ತಂಪು ಪಾನೀಯಗಳಿಗೆ ಮೋರೆ ಹೋದ ರೈತರು. ಪೆಂಡಾಲ ವ್ಯವಸ್ಥೆ ಕೈಗೊಳ್ಳದ ಅಧಿಕಾರಿಗಳನ್ನು ಶಪಿಸುತ್ತಿರುವುದು ಸಾಮಾನ್ಯವಾಗಿತ್ತು.ಸೋಯಾಬಿನ್ ಬೀಜವನ್ನು ಜರ್ಮಿನೇಶನ್ ಮಾಡದೇ ರೈತರಿಗೆ ವಿತರಣೆ ಮಾಡಲಾಗುತ್ತಿದ್ದು, ಮಿಶ್ರಬೀಜಗಳನ್ನು ಹೋಂದಿರುವುದಾಗಿ ರೈತ ಮುಖಂಡ ದೇವಣ್ಣ ಹಳವಳ್ಳಿ ಆರೋಪಿಸಿದರಲ್ಲದೇ ಶೇಂಗಾ ಬೀಜದ ಅಭಾವ ಸೃಷ್ಠಿಯಾಗಿದ್ದು, ಕೂಡಲೇ ಶೆಂಗಾ ಬೀಜವನ್ನು ತರಿಸಿ ರೈತರಿಗೆ ವಿತರಿಸುವಂತೆ ಒತ್ತಾಯಿಸಿದರು.ಕೃಷಿ ತಾಲೂಕಾ ತಾಂತ್ರಿಕ ವ್ಯವಸ್ಥಾಪಕ ವನರಾಜ ಬಣಕಾರ, ಮಂಗಳಾ ಪಾಟೀಲ, ಗಿರೀಶ ಮಿರ್ಜಿ, ಮಂಜು ಈರಪ್ಪನವರ, ಶಂಕ್ರಪ್ಪ ಹಿರೇಮನಿ, ಮಲ್ಲೇಶ ಮೆಳ್ಳಾಗಟ್ಟಿ ರೈತ ಮುಖಂಡರಾದ ಶಂಬಣ್ಣ ಕಡಕೋಳ, ಶಶಿಧರ ಹೊನ್ನಣ್ಣವರ, ಶಂಭು ಕುರಗೋಡಿ, ಬಸವರಾಜ ಮಲ್ಲೂರ, ಗಿರೀಶ ನಾಗರಳ್ಳಿ, ಕುಶಪ್ಪ ಹುಲಗೂರ, ಮಂಜುನಾಥ ಸವೂರ, ಮಾಲತೇಶ ಸಕ್ರಿ ಸೇರಿದಂತೆ ಹಲವರು ಇದ್ದರು.