ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನಲ್ಲಿರುವ ಗೌಡರು ತಲತಲಾಂತರಗಳಿಂದ ಇಲ್ಲೇ ಹುಟ್ಟಿ ಬೆಳೆದವರಾಗಿದ್ದು, ಎಲ್ಲ ಜಾತಿ ಜನಾಂಗಗಳೊಂದಿಗೆ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಸಂಘಟನೆಯೊಂದು ಕೊಡಗಿನ ಗೌಡರನ್ನು ಆಂಧ್ರದಿಂದ ಬಂದವರು ಎಂದು ನಿಂದನೆ ಮಾಡುವ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದೆ ಎಂದು ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಆರೋಪಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಕಾರ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೊಡಗು ಕೊಡಗಾಗಿ ಉಳಿಯುವುದಿಲ್ಲ. ತಲ ತಲಾಂತರಗಳಿಂದ ಕೊಡಗಿನಲ್ಲೇ ಹುಟ್ಟಿ ಬೆಳೆದ ಗೌಡರು ಎಲ್ಲರೊಂದಿಗೆ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಕೊಡವರು ಹಾಗೂ ಗೌಡರು ಒಗ್ಗಟ್ಟಿನಿಂದ ಇದ್ದಾರೆ, ಆದರೆ ಒಡಕು ಮೂಡಿಸುವ ಮೂಡಿಸುವ ಕಾರ್ಯವನ್ನು ಸಂಘನೆಯೊಂದು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಚೇರಂಬಾಣೆಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿ ಘೋಷಣೆ ಕೂಗಿದ್ದಾರೆ. ಇಡೀ ವಿಶ್ವವೇ ಹೆಮ್ಮೆ ಪಡುವ ಈ ಇಬ್ಬರು ಅಪ್ರತಿಮ ಸೇನಾಧಿಕಾರಿಗಳ ಬಗ್ಗೆ ಈ ಗೌಡರಿಗೂ ಅಪಾರ ಅಭಿಮಾನ ಮತ್ತು ಗೌರವವಿದೆ. ಇವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡುವುದು ಸರಿಯಲ್ಲವೆಂದರು.
ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕ ಕೊಡಗನ ತೀರ್ಥ ಪ್ರಸಾದ್ ಮಾತನಾಡಿ, ಸಂಘಟನೆಯ ಒತ್ತಡಕ್ಕೆ ಮಣಿದು ಪೊನ್ನಂಪೇಟೆ ಭಾಗದ ಕೆಲವರು ಅರೆಭಾಷೆ ಗೌಡರನ್ನು ನಿಂದಿಸಿರುವುದು ಖಂಡನೀಯ. ಒಕ್ಕಲಿಗ ಗೌಡ ಜನಾಂಗ ಮತ್ತು ಅರೆಭಾಷೆ ಜನಾಂಗದ ಮಂದಿ ಅತ್ಯಂತ ಅನ್ಯೋನ್ಯತೆಯಿಂದ ಇದ್ದಾರೆ. ಈ ಎರಡು ಜನಾಂಗಗಳ ನಡುವಿನ ಬಾಂಧವ್ಯದ ಮಹತ್ವವನ್ನು ಅರಿಯದವರು ವಿನಾಕಾರಣ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವವರ ಮಾತಿಗೆ ಮರುಳಾಗದೆ ಕೊಡಗಿನಲ್ಲಿರುವ ಎಲ್ಲಾ ಜನಾಂಗದವರು ಒಗ್ಗಟ್ಟಿನಿಂದ ಇರಬೇಕು ಎಂದು ಮನವಿ ಮಾಡಿದರು.ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಸ್ಥಾನದ ವಸ್ತ್ರ ಸಂಹಿತೆ ವಿಚಾರ ದೇವಸ್ಥಾನ ಮತ್ತು ಆ ಗ್ರಾಮಕ್ಕೆ ಮಾತ್ರ ಸೀಮಿತವಾಗಿದೆ. ಜಿಲ್ಲಾಧಿಕಾರಿ ಗೊಂದಲ ನಿವಾರಣೆಗೆ ದೇವಸ್ಥಾನ ಸಮಿತಿಗೆ ಫೆ.10ರವರೆಗೆ ಕಾಲಾವಕಾಶ ನೀಡಿದ್ದಾರೆ. ಆದರೆ ಇದರ ನಡುವೆಯೇ ಮತ್ತೆ ಮತ್ತೆ ಗೌಡ ಜನಾಂಗವನ್ನು ಮತ್ತು ಸಂಪ್ರದಾಯವನ್ನು ನಿಂದಿಸುತ್ತಿರುವುದು ಖಂಡನೀಯ ಎಂದರು. ಜಿಲ್ಲೆಯಲ್ಲಿರುವ ಎಲ್ಲಾ ಕೊಡವರು ಹಾಗೂ ಗೌಡರು ಒಗಟ್ಟಿನಿಂದ ಜೀವನ ಸಾಗಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಕಿಡಿಗೇಡಿಗಳು ಮಾತ್ರ
ಒಡಕು ಮೂಡಿಸುತ್ತಿದ್ದು, ಈ ಕಿಡಿಗೇಡಿಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಯಾವುದೇ ಜಾತಿ ಅಥವಾ ವ್ಯಕ್ತಿಯನ್ನು ಯಾರೇ ನಿಂದಿಸಿದರೂ ನೇರವಾಗಿ ಪೊಲೀಸ್ ಠಾಣೆಗಳಿಗೆ ಅಥವಾ ಆನ್ ಲೈನ್ ಮೂಲಕ ದೂರು ನೀಡುವಂತೆ ಮನವಿ ಮಾಡಿದರು.
ಗೌಡ ಮುಖಂಡ ಪಿ.ಎಲ್.ಸುರೇಶ್ ಮಾತನಾಡಿ, ಒಕ್ಕಲಿಗರು ಹಾಗೂ ಅರೆಭಾಷೆ ಗೌಡರ ಮಧ್ಯೆ ಒಡಕು ಮೂಡಿಸಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಫಲಿಸುವುದಿಲ್ಲ ಎಂದರು.ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕ ತಳೂರು ದಿನೇಶ್ ಕರುಂಬಯ್ಯ ಹಾಗೂ ಗಣೇಶ ಪರ್ಮಾಲೆ ಸುದ್ದಿಗೋಷ್ಠಿಯಲ್ಲಿದ್ದರು.