ಮುಂಡಗೋಡದಲ್ಲಿ ಬಿತ್ತನೆ ಕಾರ್ಯ ಜೋರು

| Published : Jun 04 2024, 12:31 AM IST

ಸಾರಾಂಶ

ನಿರೀಕ್ಷೆಯಂತೆ ಮೇ ಅಂತ್ಯದವರೆಗೂ ಗುಡುಗು ಸಹಿತ ಅಡ್ಡ ಮಳೆಯು ಬಿತ್ತನೆಗೆ ಉತ್ತಮ ಹದ ನೀಡಿದೆ. ಸದ್ಯ ಮಳೆ ವಿರಾಮ ನೀಡಿರುವುದು ಬಿತ್ತನೆಗೆ ಪೂರಕ ವಾತಾವರಣ ಕೊಟ್ಟಂತಾಗಿದೆ.

ಸಂತೋಷ ದೈವಜ್ಞ

ಮುಂಡಗೋಡ: ತಾಲೂಕಿನಲ್ಲಿ ಕೃಷಿಗೆ ಪೂರಕವಾದ ಉತ್ತಮ ಮಳೆಯಾಗಿದ್ದು, ರೈತ ಸಮುದಾಯವೀಗ ಸಂಪೂರ್ಣವಾಗಿ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ರೈತರು ಬಿತ್ತನೆ ಬೀಜ ಖರೀದಿಸಿದ್ದು, ಅಡ್ಡ ಮಳೆಗೆ ಭೂಮಿಯನ್ನು ಹದಗೊಳಿಸಿಕೊಂಡು ಬಿತ್ತನೆ ಮಾಡುತ್ತಿದ್ದಾರೆ. ನಿರಂತರವಾಗಿ ಮಳೆ ಹಿಡಿದುಕೊಂಡರೆ ಬಿತ್ತನೆಗೆ ಹಿನ್ನಡೆಯಾಗುತ್ತದೆ ಎಂದು ರೈತರು ತರಾತುರಿಯಲ್ಲಿ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ನಿರೀಕ್ಷೆಯಂತೆ ಮೇ ಅಂತ್ಯದವರೆಗೂ ಗುಡುಗು ಸಹಿತ ಅಡ್ಡ ಮಳೆಯು ಬಿತ್ತನೆಗೆ ಉತ್ತಮ ಹದ ನೀಡಿದೆ. ಸದ್ಯ ಮಳೆ ವಿರಾಮ ನೀಡಿರುವುದು ಬಿತ್ತನೆಗೆ ಪೂರಕ ವಾತಾವರಣ ಕೊಟ್ಟಂತಾಗಿದೆ.

ಶೇ. ೭೦ರಷ್ಟು ಬಿತ್ತನೆ: ತಾಲೂಕಿನಲ್ಲಿ ಹಿಂದೆಲ್ಲ ಶೇ. ೮೦ರಷ್ಟು ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿತ್ತು, ಆದರೆ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಅನಾವೃಷ್ಟಿ ಎದುರಾಗಿದ್ದರಿಂದ ಗೋವಿನಜೋಳ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲ. ಹೀಗಾಗಿ ಬಹುತೇಕ ರೈತರು ಮಳೆಯಾಶ್ರಯಿಸಿಯೇ ವ್ಯವಸಾಯ ಮಾಡುತ್ತಾರೆ. ತಾಲೂಕಿನಲ್ಲಿ ಸುಮಾರು ೧೫೦೦೦ ಹೆಕ್ಟೇರ್‌ ಬಿತ್ತನೆ ಪ್ರದೇಶವಿದೆ.ಈವರೆಗೂ ಸುಮಾರು ೩ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ಗೋವಿನಜೋಳ ೩ ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ತೀವ್ರಗತಿಯಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ದಿನೇ ದಿನೇ ಬಿತ್ತನೆ ಪ್ರಮಾಣ ಹೆಚ್ಚುತ್ತಿದೆ. ಅಧಿಕೃತ ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಬಿತ್ತನೆ ಕಾರ್ಯ ಪೂರ್ಣಗೊಳಿಸಿಕೊಳ್ಳುವ ತವಕದಲ್ಲಿ ರೈತರಿದ್ದಾರೆ.

ಮಳೆಯ ಪ್ರಮಾಣ ಹೆಚ್ಚು: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಜನವರಿ ೧ರಿಂದ ಮೇ ೩೦ರ ವರೆಗೆ ೧೮೫ ಮಿಮೀ ಮಳೆಯಾಗಿದೆ. ವಾಡಿಕೆಯಂತೆ ೧೪೬ ಮಿಮೀ ಮಳೆಯಾಗಬೇಕಿತ್ತು. ಆದರೆ ವಾಡಿಕೆಗಿಂತ ಶೇ. ೨೭ರಷ್ಟು ಮಳೆ ಹೆಚ್ಚಾದಂತಾಗಿದೆ. ಉತ್ತಮ ಮಳೆಯ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷ ಈ ವೇಳೆಗೆ ಕೇವಲ ೪೬.೧ ಮಿಮೀ ಮಳೆಯಾಗಿತ್ತು. ಬಿತ್ತನೆ ಬೀಜ ದಾಸ್ತಾನು: ತಾಲೂಕಿನಲ್ಲಿ ಭತ್ತ ಹಾಗೂ ಗೋವಿನ ಜೋಳ ಬಿತ್ತನೆಗೆ ಪೂರಕ ವಾತಾವರಣವಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ ಶೇ. ೭೦ರಷ್ಟು ಬಿತ್ತನೆಯಾಗಿದೆ. ಬಹುತೇಕ ಬಿತ್ತನೆ ಬೀಜ ವಿತರಣೆಯಾಗಿದ್ದು, ಸಮರ್ಪಕವಾಗಿ ಬಿತ್ತನೆ ಬೀಜ ದಾಸ್ತಾನು ಇದ್ದು, ಯಾವುದೇ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌. ಕುಲಕರ್ಣಿ ತಿಳಿಸಿದರು.ಸಲಹೆ ನೀಡಲಿ: ಪ್ರಸಕ್ತ ಸಾಲಿನಲ್ಲಿ ಈವರೆಗೂ ಉತ್ತಮವಾದ ಮಳೆಯಾಗಿದ್ದು, ಈಗ ಮಳೆ ಕೊಂಚ ಬಿಡುವು ನೀಡಿರುವುದು ಭತ್ತ ಹಾಗೂ ಗೋವಿನಜೋಳ ಬಿತ್ತನೆಗೆ ಹದವಾದ ವಾತಾವರಣ ಸಿಕ್ಕಿದೆ. ಕಳೆದ ಸಾಲಿನಲ್ಲಿ ಮಳೆಯ ಕೊರತೆಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟ ಎದುರಿಸಿರುವ ರೈತರಿಗೆ ಕಾಲಕಾಲಕ್ಕೆ ಕೃಷಿ ಇಲಾಖೆಯಿಂದ ಔಷಧೋಪಚಾರ ಹಾಗೂ ಸಲಹೆ ನೀಡಬೇಕಿದೆ ಎಂದು ರೈತರಾದ ಮಲ್ಲಿಕಾರ್ಜುನ ಗೌಳಿ ತಿಳಿಸಿದರು.