2025-26 ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಸೋಯಾಬೀನ್ ಖರೀದಿ ಅವಧಿಯನ್ನು ಜನವರಿ 26ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

2025-26 ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಸೋಯಾಬೀನ್ ಖರೀದಿ ಅವಧಿಯನ್ನು ಜನವರಿ 26ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2025ರ ಸೆಪ್ಟೆಂಬರ್‌ 27ರಿಂದ 90 ದಿನಗಳವರೆಗೆ ಜಿಲ್ಲೆಯಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಕರೆಗೆ 3 ಕ್ವಿಟಲ್‌ನಂತೆ, ಒಬ್ಬ ರೈತನಿಗೆ ಗರಿಷ್ಠ 15 ಕ್ವಿಂಟಲ್‌ ಫಸಲನ್ನು ₹5300 ದರದಲ್ಲಿ ಖರೀದಿಗೆ ಅವಕಾಶ ನೀಡಲಾಗಿತ್ತು. ಡಿಸೆಂಬರ್‌ 17ಕ್ಕೆ ಬೆಂಬಲ ಬೆಲೆಯಡಿ ಖರೀದಿಯ ನೋಂದಣಿ ಅವಧಿ ಮುಕ್ತಾಯಗೊಂಡಿತ್ತು. ಆದರೆ ಅನೇಕ ರೈತರು, ಅತಿವೃಷ್ಟಿ ಮಳೆ ಹಾಗೂ ಹಿಂಗಾರು ಕೃಷಿ ಚಟುವಟಿಕೆಯ ಕಾರಣ ಡಿಸೆಂಬರ್‌ ತಿಂಗಳಲ್ಲಿ ಸೋಯಾಬೀನ್‌ ಒಕ್ಕಲು ಆರಂಭಿಸಿದ್ದರು. ಆದರೆ, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಅವಧಿ ಮುಕ್ತಾಯಗೊಂಡಿದ್ದರಿಂದ ಅನೇಕ ರೈತರು ಖರೀದಿ ಕೇಂದ್ರಗಳಿಗೆ ಧಾವಿಸಿದ್ದರು. ಈ ಕುರಿತು ಕನ್ನಡಪ್ರಭ ದಿನಪತ್ರಿಕೆ ಡಿಸೆಂಬರ್‌ 20ರಂದು ಬೆಂಬಲ ಬೆಲೆಗೆ ಸೋಯಾಬೀನ್‌ ಖರೀದಿ ನೋಂದಣಿ ಬಂದ್‌ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಖರೀದಿ ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಈಗ ಸಹಕಾರ ಇಲಾಖೆ ಸರ್ಕಾರದ ಆಧೀನ ಕಾರ್ಯದರ್ಶಿ ಸೋಯಾಬೀನ್ ಖರೀದಿ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.