ತುಂಗಭದ್ರಾ ನದಿ ನೆರೆ, ಜನತೆಗೆ ಎಸ್ಪಿ ಎಚ್ಚರಿಕೆ

| Published : Aug 02 2024, 12:49 AM IST

ಸಾರಾಂಶ

ನದಿ ಪಾತ್ರದಲ್ಲಿ ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಗೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಘಟ್ಟ ಪ್ರದೇಶ, ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತುಂಗಾ ಮತ್ತು ಭದ್ರಾ ಅಣೆಕಟ್ಟೆಗಳಿಂದಲೂ ತುಂಗಭದ್ರಾ ನದಿಗೆ ಎಲ್ಲಾ ಕ್ರೆಸ್ಟ್ ಗೇಟ್‌ ಮೂಲಕ ನೀರು ಬಿಡುತ್ತಿರುವ ಹಿನ್ನೆಲೆ ನದಿ ಪಾತ್ರ ಗ್ರಾಮಸ್ಥರು, ಸಂಪರ್ಕ ಕಡಿತಗೊಂಡ ಗ್ರಾಮಗಳ ಜನರು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮನವಿ ಮಾಡಿದ್ದಾರೆ.

ಜಿಲ್ಲೆಯ ಹೊನ್ನಾಳಿ, ಹರಿಹರ ತಾಲೂಕಿನಲ್ಲಿ ತುಂಗಾಭದ್ರಾ ನದಿ ಹಾದು ಹೋಗಿದ್ದು, ನದಿ ಪಾತ್ರದ ಗ್ರಾಮಸ್ಥರು, ನಗರ ವಾಸಿಗಳು ಜಾಗ್ರತೆ ವಹಿಸಬೇಕು. ಹೊನ್ನಾಳಿ ಬಾಲರಾಜ ಘಾಟ್‌, ಬಂಬೂ ಬಜಾರ್‌, ಸಾಸ್ವೇಹಳ್ಳಿ, ಐನೂರು ಹಳೆ ಬಡಾವಣೆ ಪ್ರದೇಶ, ಉಕ್ಕಡಗಾತ್ರಿ, ಹರಿಹರ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನ, ಗಂಗಾ ನಗರ, ನದಿಯ ಸೇತುವೆಗಳು, ಹಲಸಬಾಳು, ಬಿಳಸನೂರು, ರಾಜನಹಳ್ಳಿ, ತಿಮ್ಮಲಾಪುರ, ಹರಲಾಪುರ, ಗುತ್ತೂರು, ಪಾಮೇನಹಳ್ಳಿ, ದೀಟೂರು, ಸಾರಥಿ, ಚಿಕ್ಕಬಿದರಿ, ಗೋವಿನಾಳು, ನಂದಿಗಾವಿ, ಹಳೇ ಪಾಳ್ಯ, ಮಲ್ಲನಹಳ್ಳಿ, ಹುಲಗಿನ ಹೊಳೆ, ಇಂಗಳಗೊಂದಿ, ಧೂಳೆಹೊಳೆ ಗ್ರಾಮ ಸೇರಿದಂತೆ ಸೂಕ್ಷ್ಮ ಪ್ರದೇಶಗಳಾಗಿದ್ದು, ಸಾರ್ವಜನಿಕರು, ಸ್ಥಳೀಯ ನಿವಾಸಿಗಳು ಇತರರು ಸುರಕ್ಷಿತವಾಗಿರಬೇಕು. ಸುರಕ್ಷಿತ ಕ್ರಮ ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದ್ದಾರೆ.

ಈಗಾಗಲೇ ನದಿ ಪಾತ್ರದಲ್ಲಿ ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಗೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಸಾರ್ವಜನಿಕರಿಗೂ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ನದಿ ಪಾತ್ರದಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೆಲ ನಿಯಮ ಪಾಲಿಸಲು ಈ ಮೂಲಕ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಮಾರ್ಗ ಬದಲಾವಣೆ:

ಪ್ರವಾಹದಿಂದ ಕೆಲ ರಸ್ತೆ ಸಂಪರ್ಕ ಕಡಿತವಾಗಿದ್ದು, ನಿಷೇಧಿತ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಸೂಚಸಿದ್ದಾರೆ. ಹೊನ್ನಾಳಿ ತಾ.ವಿಜಯಪುರ-ಕೋಟೆಮಲ್ಲೂರು ರಸ್ತೆ ಬದಲಾಗಿ ಹಾರಕೆರೆ ರಸ್ತೆ, ಕಮ್ಮಾರಗಟ್ಟೆ-ಬೆನಕನಹಳ್ಳಿ ಬದಲಾಗಿ ಕೈಮರ ಕ್ಯಾಂಪ್ ರಸ್ತೆ, ಹರಿಹರ ತಾ; ನಂದಿಗುಡಿ-ಪತ್ಯಾಪುರ-ಉಕ್ಕಡಗಾತ್ರಿ ರಸ್ತೆ ಸೇತುವೆ ಮುಳುಗಡೆಯಾಗಿದ್ದು, ಇದರ ಬದಲಾಗಿ ನಂದಿಗುಡಿ-ತುಮ್ಮಿನಕಟ್ಟೆ ರಸ್ತೆ ಬಳಕೆಗೆ ಸೂಚಿಸಿರುತ್ತಾರೆ

ನದಿ ಪಾತ್ರದಲ್ಲಿ ಸಾರ್ವಜನಿಕರು ಏನು ಮಾಡಬೇಕು

1. ನದಿ ಪಾತ್ರದಲ್ಲಿ ಅಹಿತಕರ ಘಟನೆ ಕಂಡುಬಂದಲ್ಲಿ ಜನರು ಕೂಡಲೇ ತುರ್ತು ಸಹಾಯವಾಣಿ 112ಗೆ ಕರೆ ಹಾಗೂ ಪೊಲೀಸ್ ಗಮನಕ್ಕೆ ತರಬೇಕು.

2. ತುಂಗಾಭದ್ರಾ ಹರಿವು ಹೆಚ್ಚುತ್ತಿದ್ದು, ನದಿ ಪಾತ್ರ ವಾಸಿಗಳು ಮುಂಜಾಗೃತಾ ಕ್ರಮ ಪಾಲನೆ. ಸುರಕ್ಷಿತ ಸ್ಥಳಗಳಿಗೆ ತೆರಳುವುದು.

3. ಮೀನುಗಾರರು ಮೀನು ಹಿಡಿಯಲು ನದಿಗೆ ಇಳಿಯಬಾರದು, ಹೋಗಬಾರದು.

4. ಅವಘಡ ಸಂಭವಿಸದಂತೆ ಕಾಯ್ದುಕೊಳ್ಳಲು ಅಧಿಕಾರಿಗಳನ್ನು ನಿಯೋಜಿಸಿದ್ದು, ಜನರು ಸೌಜನ್ಯಯುತವಾಗಿ ಸಹಕರಿಸಬೇಕು.

5. ನದಿ ಪಾತ್ರದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ಸಂಚರಿಸದೇ/ನಿಲ್ಲಿಸದೇ ಪೊಲೀಸರು ಸೂಚಿಸುವ ಸ್ಥಳದಲ್ಲಿ ಸಂಚಾರ, ನಿಲುಗಡೆ ಮಾಡಬೇಕು.

6. ನದಿ ಪಾತ್ರದಲ್ಲಿ ಅನಾಹುತ ಉಂಟಾದಾಗ ಸ್ವಯಂ ಪ್ರೇರಿತವಾಗಿ ನೀರಿಗಿಳಿಯದೇ, ಕ್ರಮ ಕೈಗೊಳ್ಳದೇ ಅಧಿಕಾರಿಗಳಿಗೆ ಮಾಹಿತಿ ನೀಡಿ

ನದಿ ಪಾತ್ರದಲ್ಲಿ ಜನರು ಏನು ಮಾಡಬಾರದು?

1. ನದಿ ಅಪಾಯ ಮಟ್ಟ ತಲುಪಿರುವುದರಿಂದ ಈಜಾಡಲು ಹಾಗೂ ಯಾವುದೇ ಕಾರಣಕ್ಕೂ ಅನಾವಶ್ಯಕ ನದಿಗೆ ಇಳಿಯಬಾರದು.

2. ಜಾಲತಾಣಗಳಲ್ಲಿ ಪ್ರಚೋದನಾತ್ಮಕ, ನಿಂದನಾತ್ಮಕ ಪೋಸ್ಟ್ ಶೇರ್ ಮಾಡುವುದು ಕಾನೂನು ಬಾಹಿರ.

3. ಜಾನುವಾರು ನೀರು ಕುಡಿಸಲು, ಮೇಯಿಸಲೆಂದು ನದಿ ದಂಡೆ ಕರೆದೊಯ್ಯಬಾರದು.

4. ಸಂಪೂರ್ಣ ನಿಷೇಧಿಸಲಾದ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸಬಾರದು.

5. ಕಾರ್ಯ ನಿರತ ಅಧಿಕಾರಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿಯಬಾರದು.

8. ನದಿ ಪಾತ್ರದ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಪೋಟೊ/ವಿಡಿಯೋ, ರೀಲ್ಸ್ ನಂತಹ ದುಸ್ಸಾಹಾಸಕ್ಕೆ ಹೋಗಬಾರದು.