ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಗಣೇಶೋತ್ಸವ ಆಡಂಬರದ ಆಚರಣೆಯಾಗುವುದಕ್ಕಿಂತ ಮುಂದಿನ ಪೀಳಿಗೆ ಮಾರ್ಗದರ್ಶನ ನೀಡುವ ಸಾಂಪ್ರದಾಯಕ ಆಚರಣೆ ಆಗಲಿ. ಗಣೇಶೋತ್ಸವ ಒಂದು ದೇವರ ಕಾರ್ಯಕ್ರಮವಾಗಿದ್ದು, ಉತ್ಸವ ಯಶಸ್ವಿಯಾಗಿ ನಡೆಯಲು ಉತ್ತಮವಾದ ಸಂಘಟನೆ ಅಗತ್ಯವಾಗಿದೆ. ಕಾನೂನಿನ ಚೌಕಟ್ಟನ್ನು ಮೀರದೆ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಒದಗಿಸಿ ಯಶಸ್ವಿಯಾಗಿ ಗಣೇಶೋತ್ಸವ ಆಚರಿಸಿ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹೇಳಿದರು.ವಿರಾಜಪೇಟೆ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಗಣೇಶೋತ್ಸವ ಸಂಘಟಕರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ಗೌರಿ ಗಣೇಶ ಉತ್ಸವ ಸಮಿತಿಯವರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಪರಿಸರ ಸಂರಕ್ಷಣೆ ಪೂರಕವಾಗುವ ನಿಟ್ಟಿನಲ್ಲಿ ಹಬ್ಬ ಆಚರಿಸಬೇಕು. ಸುಡುಮದ್ದು ಪ್ರದರ್ಶನ ಹಾಗೂ ಡಿ.ಜೆ.ಗೆ ಅವಕಾಶ ಕಲ್ಪಿಸಿ ಕೊಡಲಾಗಿದ್ದು ನಿರ್ದಿಷ್ಟ ಶಬ್ದದ ಮಿತಿಯನ್ನು ಮೀರದಂತೆ ಸಂಘಟಕರು ಎಚ್ಚರ ವಹಿಸಬೇಕು. ಪಿಒಪಿ ಮೂರ್ತಿಗಳನ್ನು ಬಳಸಲು ಅವಕಾಶವಿಲ್ಲ. ಇದರೊಂದಿಗೆ ಶೋಭಾಯಾತ್ರೆಯಂದು ಮದ್ಯಪಾನ ಮಾಡಿ ಗಲಭೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರ 15ರಿಂದ 20 ತಂಡಗಳನ್ನು ರಚಿಸಲಾಗುತ್ತದೆ ಎಂದರು.ಶೋಭಯಾತ್ರೆ ಸಂದರ್ಭ ಯಾವುದೇ ವ್ಯಕ್ತಿ ಅಥವಾ ಯಂತ್ರದ ಮೂಲಕ ಬೆಂಕಿ ಉಗುಳುವುದನ್ನು ನಿಷೇಧಿಸಲಾಗಿದೆ. ಈ ರೀತಿ ಅಪಾಯಕಾರಿ ಸಾಹಸ ಯಾರಾದರೂ ಮಾಡಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಶೋಭಾಯಾತ್ರೆಯ ಮಂಟಪವು ವಾಹನದ ಅಳತೆಗೆ ಸಮರ್ಪಕವಾಗಿರಲಿ. ಆಡಂಬರದ ಹಿನ್ನೆಲೆಯಲ್ಲಿ ದೊಡ್ಡ ಮಂಟಪಗಳನ್ನು ಮಾಡಿ ಆಯತಪ್ಪಿ ಬಿದ್ದು ಅಪಘಾತವಾಗದಂತೆ ಎಚ್ಚರ ವಹಿಸಬೇಕು. ವಿಸರ್ಜನೆ ಸ್ಥಳಗಳಲ್ಲಿ ವಿಶೇಷವಾದಂತಹ ಸುರಕ್ಷತಾ ಕ್ರಮಗಳನ್ನು ವಹಿಸುವಂತೆ ಕರೆ ನೀಡಿದ ಅವರು, ಯಾವುದೇ ರೀತಿಯಲ್ಲಿ ಸಮಸ್ಯೆಗಳು ಎದುರಾಗದಂತೆ ಕಾನೂನು ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ವಿರಾಜಪೇಟೆ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ಮಾತನಾಡಿ, ಸಿಂಗಲ್ ವಿಂಡೋ ಸಿಸ್ಟಮ್ ಆರಂಭಿಸಲಾಗಿದ್ದು, ಉತ್ಸವ ಸಮಿತಿಗಳು ಚೆಸ್ಕಾಂ, ಅಗ್ನಿಶಾಮಕ ದಳ, ಪೊಲೀಸ್ ಠಾಣೆ ,ಆರ್‌ಟಿಓ, ತಹಸೀಲ್ದಾರ್ ಕಚೇರಿ, ಅರಣ್ಯ ಇಲಾಖೆ ಮುಂತಾದ ಕಡೆಯಲ್ಲಿ ಸೂಕ್ತ ದಾಖಲೆಯನ್ನು ನೀಡಿ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದು ಉತ್ಸವ ನಡೆಸುವಂತೆ ಹೇಳಿದರು.ಆಟೋ ಚಾಲಕ ಸಂಘದ ಅಧ್ಯಕ್ಷ ಮಾತನಾಡಿ, ಶೋಭಾಯಾತ್ರೆ ದಿನ 7 ಗಂಟೆ ತನಕ ನಗರದ ಮುಖ್ಯ ರಸ್ತೆಗಳಲ್ಲಿ ಆಟೋ ಚಾಲನೆಗೆ ಅನುವು ಮಾಡಿಕೊಡುವಂತೆ ಮನವಿಯನ್ನು ಸಲ್ಲಿಸಿದರು.
ವಿರಾಜಪೇಟೆ ನಗರದ ಗಣೇಶೋತ್ಸವ ಸಮಿತಿಯವರು ಶೋಭಯಾತ್ರೆಗೂ ಮುನ್ನ ನಗರದ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರು.ವಿರಾಜಪೇಟೆ ತಹಸೀಲ್ದಾರ್ ಅನಂತಶಂಕರ್, ಪುರಸಭೆ ಅಧ್ಯಕ್ಷೆ ದೇಚಮ್ಮ, ಉಪಾಧ್ಯಕ್ಷೆ ಫಸಿಹಾ ತಬುಸುಮ್, ಡಿವೈಎಸ್‌ಪಿ ಬಿ.ಪಿ.ದಿನೇಶ್ ಕುಮಾರ್, ಮೇದಪ್ಪ ಉಪಸ್ಥಿತರಿದ್ದರು.ಸಭೆಯಲ್ಲಿ ಚೆಸ್ಕಾಂ, ಪಿಡಬ್ಲ್ಯೂಡಿ, ಆರ್‌ಟಿಓ, ಕೆಎಸ್ಆರ್ಟಿಸಿ, ಅರಣ್ಯ ಇಲಾಖೆ, ಪುರಸಭೆಯ ಸದಸ್ಯರು, ಅಧಿಕಾರಿಗಳೂ ಹಾಗೂ ವಿರಾಜಪೇಟೆ ತಾಲೂಕಿನ ವ್ಯಾಪ್ತಿಯ 40ಕ್ಕೂ ಅಧಿಕ ಉತ್ಸವ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಜರಿದ್ದರು.