ಕಳ್ಳತನವಾಗಿದ್ದ ಸ್ಥಳಕ್ಕೆ ಎಸ್ಪಿ ಡಾ.ಬಿ.ಟಿ ಕವಿತಾ ಭೇಟಿ

| Published : Oct 26 2024, 12:54 AM IST

ಸಾರಾಂಶ

ಹನೂರು ಪಟ್ಟಣದ 13ನೇ ವಾರ್ಡಿನಲ್ಲಿ ಮುಸ್ಲಿಂ ಧರ್ಮ ಗುರುಗಳ ಮನೆಯಲ್ಲಿ ಕಳ್ಳತನವಾಗಿದ್ದ ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರುಪಟ್ಟಣದ 13ನೇ ವಾರ್ಡಿನ ನಿವಾಸಿ ಶಬ್ಬೀರ್ ಅಹ್ಮದ್ ಅವರ ಮನೆಯಲ್ಲಿ ಕಳ್ಳತನ ವಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿ ಡಾ.ಬಿ.ಟಿ ಕವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಚಾಮರಾಜನಗರ ಸೇರಿ ಜಿಲ್ಲೆಯ ನಾನಾ ಕಡೆ ನಡೆದಿದ್ದ ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಕೊಳ್ಳೇಗಾಲದ ಮಾಜಿ ಶಾಸಕ ಎನ್. ಮಹೇಶ್, ಅರೆಪಾಳ್ಯ ರಂಗಸ್ವಾಮಿ ಅವರ ಮನೆ ಕಳ್ಳತನ ಹಾಗೂ ತೇರಂಬಳ್ಳಿ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ‌ಎಂದರು. ಪುದುರಾಮಪುರದ ತೋಟದ ಮನೆಯ ವಯೋವೃದ್ಧನ ಕೈ ಕಾಲು ಕಟ್ಟಿ ಚಿನ್ನ ನಗದು ದೋಚಿದ್ದ ಹಾಗೂ ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಆರೋಪಿಗಳ ಪತ್ತೆ ಕಾರ್ಯ ಅಂತಿಮ ಹಂತದಲ್ಲಿದೆ. ಇನ್ನೂ ಹನೂರು ಪಟ್ಟಣದ ಚಿನ್ನದೊರೆ ಮನೆಯಲ್ಲಿ ನಗದು, ಚಿನ್ನ ಕಳ್ಳತನವಾಗಿರುವ ಬಗ್ಗೆ ಈಗಾಗಲೇ ತಂಡ ರಚನೆ ಮಾಡಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಸಭೀರ್ ಅವರ ಮನೆಯಲ್ಲಿ‌ ನೆಡೆದಿರುವ ಕಳ್ಳತನ ಪ್ರಕರಣದ ಆರೋಪಿಗಳನ್ನು ಅತಿ ಶೀಘ್ರದಲ್ಲಿಯೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಪಾಳಯದಲ್ಲಿ ಹೆಚ್ಚು ಗಸ್ತು ತಿರುಗಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಮದುವೆ ಹಾಗೂ ಇನ್ನಿತರ ಶುಭ ಕಾರ್ಯಕ್ರಮಗಳು ಸೇರಿದಂತೆ ಮೂರು ನಾಲ್ಕು ದಿನಗಳು ಬಾಗಿಲು ಹಾಕಿ ಹೋಗುವಂತಹ ನಿವಾಸಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಅರಿವು ಮೂಡಿಸಲು ಈಗಾಗಲೇ ಸಭೆ ಕರೆಯಲಾಗಿದ್ದು ನಂತರ ಸಾರ್ವಜನಿಕರಿಗೆ ಸೂಕ್ತ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಿವಾಸಿಗಳು ಹೆಚ್ಚು ದಿನ ಮನೆಯಿಂದ ಹೊರಗೆ ಹೋಗುವುದಾದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಅಂತಹ ಮನೆಗಳಿಗೆ ಗಸ್ತು ಹೆಚ್ಚಿಸಲಾಗುವುದು ಎಂದರು.

ಈ ವೇಳೆ ಡಿವೈಎಸ್ಪಿ ಲಕ್ಷ್ಮಯ್ಯ, ಇನ್ಸ್‌ಪೆಕ್ಟರ್ ಶಿವ ಮಾದಯ್ಯ, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಮಾದೇಶ್ವರ ಬೆಟ್ಟ ಇನ್ಸ್‌ಪೆಕ್ಟರ್‌ ಜಗದೀಶ್ ಸೇರಿದಂತೆ ಹಲವರು ಹಾಜರಿದ್ದರು.