ಸಾರಾಂಶ
ಬಂಧಿತರಿಂದ ದರೋಡೆಗೈದ 3.15 ಲಕ್ಷ ಮೌಲ್ಯದ 54 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷ ಮೌಲ್ಯದ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರು ಮಂದಿ ಘಟನೆಯಲ್ಲಿ ನೇರ ಭಾಗಿಯಾಗಿದ್ದರೆ, ಹನೀಫ್ ಆರೋಪಿಗಳಿಂದ ಚಿನ್ನವನ್ನು ಸ್ವೀಕರಿಸಿದ ಆರೋಪಿ ಎಂದು ಹೇಳಲಾಗಿದೆ.
ಬಂಟ್ವಾಳ: ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರು. ಮೌಲ್ಯದ ನಗನಗದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರ ವಿಶೇಷ ತಂಡ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದ ದರ್ಖಾಸು ಮಾಳ, ಮಲ್ಲಾರು ನಿವಾಸಿ ಗಣೇಶ್ ನಾಯ್ಕ್ (26), ಮಂಗಳೂರು ಐಕಳ ಗ್ರಾಮದ ಬಳ್ಳಂಜೆ ಮುಂಡಿಕಾಡು ನಿವಾಸಿ ರಾಕೇಶ್ ಎಲ್ ಪಿಂಟೋ (29), ದರ್ಖಾಸು ಮಾಳ, ಮಲ್ಲಾರು ನಿವಾಸಿ ದಿನೇಶ್ ನಾಯ್ಕ್ (22), ಕಾರ್ಕಳ ತಾಲೂಕಿನ ಮಾಳ ಗ್ರಾಮದ ಇಂದಿರಾನಗರ ನಿವಾಸಿ ಸಾಗರ್ ಶೆಟ್ಟಿ (21), ಕಡಬ ತಾಲೂಕಿನ ಕಾಯ್ಮುಣ ಗ್ರಾಮದ ಕೆಲೆಂಬೇರಿ ಬೆಳಂದೂರು ನಿವಾಸಿ ಎಂ.ಸೀತಾರಾಮ (36), ಕಡಬ ತಾಲೂಕಿನ ಕಾಯ್ಮಣ ಗ್ರಾಮದ ಕೆಲೆಂಬೇರಿ ಬೆಳಂದೂರು ನಿವಾಸಿ ಸುದೀರ್ (29) ಹಾಗೂ ಮೂಲತಃ ಬಂಟ್ವಾಳ ಇರಾ ಗ್ರಾಮ, ಪ್ರಸ್ತುತ ಚಿಕ್ಕಮಗಳೂರು ಗೌರಿ ಕಾಲುವೆ ನಿವಾಸಿ ಮಹಮ್ಮದ್ ಹನೀಫ್ ಬಂಧಿತ ಆರೋಪಿಗಳು.ಬಂಧಿತರಿಂದ ದರೋಡೆಗೈದ 3.15 ಲಕ್ಷ ಮೌಲ್ಯದ 54 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷ ಮೌಲ್ಯದ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರು ಮಂದಿ ಘಟನೆಯಲ್ಲಿ ನೇರ ಭಾಗಿಯಾಗಿದ್ದರೆ, ಹನೀಫ್ ಆರೋಪಿಗಳಿಂದ ಚಿನ್ನವನ್ನು ಸ್ವೀಕರಿಸಿದ ಆರೋಪಿ ಎಂದು ಹೇಳಲಾಗಿದೆ.ಸದ್ರಿ ಆರೋಪಿಗಳ ಪೈಕಿ ಗಣೇಶ ನಾಯ್ಕ ಎಂಬಾತನು 2023ನೇ ಸಾಲಿನಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮೂಲ್ಕಿಯಲ್ಲಿ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿದ ಮುಖ್ಯ ಆರೋಪಿಯಾಗಿದ್ದು, ಉಳಿದಂತೆ ಸೀತಾರಾಮ ಆಲಿಯಾಸ್ ಪ್ರವೀಣ್, ಸುಧೀರ್ ಹಾಗೂ ಮಹಮ್ಮದ್ ಹನೀಫ್ ಅವರ ವಿರುದ್ಧ ದ.ಕ. ಜಿಲ್ಲೆ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.ಕೆರೆಗೆ ಬಿದ್ದು ಬಾಲಕ ಸಾವುಉಪ್ಪಿನಂಗಡಿ: ಬಜತ್ತೂರು ಗ್ರಾಮದ ಪೊರೋಳಿ ಕೆರೆಗೆ ಬಿದ್ದು ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಸಂಭವಿಸಿದೆ. ದಿ.ನಾರಾಯಣ ಗೌಡ ಎಂಬವರ ಪುತ್ರ, ರಕ್ಷಿತ್ ಮೃತ. ಈತ ಉಪ್ಪಿನಂಗಡಿಯ ಖಾಸಗಿ ಶಾಲೆ 1ನೇ ತರಗತಿಯ ವಿದ್ಯಾರ್ಥಿ. ಭಾನುವಾರ ತಾಯಿಯೊಂದಿಗೆ ತೋಟಕ್ಕೆ ಹುಲ್ಲು ತೆಗೆಯಲೆಂದು ಹೋದಾತ ತೋರದಲ್ಲಿನ ಸ್ಪ್ರಿಂಕ್ಲರ್ ನೀರಿನಲ್ಲಿ ಸ್ನಾನ ಮಾಡುವ ಆಸೆ ವ್ಯಕ್ತಪಡಿಸಿದ್ದ. ಇದಕ್ಕೆ ನಿರಾಕರಣೆ ತೋರಿದ್ದ ತಾಯಿ ಆತನನ್ನು ಮನೆಗೆ ಕರೆದುಕೊಂಡು ಬಂದು ತಿಂಡಿ ನೀಡಿದ್ದರು. ತಿಂಡಿ ತಿನ್ನುತ್ತಲೇ ಈಗ ಬರುತ್ತೇನೆಂದು ತನ್ನ ಚಿಕ್ಕಮ್ಮನ ಬಳಿ ಹೇಳಿ ಹೋದ ಬಾಲಕ ಬಳಿಕ ನಾಪತ್ತೆಯಾಗಿದ್ದ. ಹುಡುಕಾಟ ನಡೆಸಿದಾಗ ಅವರ ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಬಾಲಕನ ತಂದೆ ಮೂರು ವರ್ಷದ ಹಿಂದೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.