ಶನಿವಾರ ರಾತ್ರಿ ಕೊಪ್ಪಳ ನಗರದ ಪ್ರಮುಖ ಹೋಟೆಲ್ ಮತ್ತು ಬಾರ್‌ಗಳಿಗೆ ಖುದ್ದು ಭೇಟಿ ನೀಡಿದ ಎಸ್ಪಿ ಸಾಹಿಲ್ ಬಾಗ್ಲಾ, ನಿಗದಿತ ಸಮಯ ಪಾಲನೆಯಾಗುತ್ತಿದೆಯೇ, ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆಯೇ, ಧೂಮಪಾನ ನಿಷೇಧಿತ ವಲಯದ ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು.
ಕೊಪ್ಪಳ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಕಾರ್ಯಾಚರಣೆ ನಡೆಸಿ, ಹಲವು ಕಡೆ ಪರಿಶೀಲಿಸಿ ಬಿಸಿ ಮುಟ್ಟಿಸಿದ್ದಾರೆ.
ಶನಿವಾರ ರಾತ್ರಿ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದಾರೆ. ಇತ್ತ ಜಿಲ್ಲೆಯಾದ್ಯಂತ ಪೊಲೀಸರು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ, ಇಸ್ಪೀಟ್ ಮತ್ತು ಮಟ್ಕಾ ಜೂಜಾಟದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಕಳೆದ ತಿಂಗಳು ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಾಹಿಲ್ ಬಾಗ್ಲಾ ಅವರಿಗೆ ಆರಂಭದ ದಿನಗಳಲ್ಲಿ ರಾಜ್ಯಮಟ್ಟದ ಬಿಜೆಪಿ ಪಾದಯಾತ್ರೆ, ಗಣೇಶ ಚತುರ್ಥಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಬಂದೋಬಸ್ತ್ ಜವಾಬ್ದಾರಿ ಇತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆ ಮೇಲೆ ನಿರಂತರ ನಿಗಾ ಇರಿಸುವುದು ಸವಾಲಾಗಿತ್ತು. ಈ ನಡುವೆ ಕೆಲವು ಕಡೆ ಅಕ್ರಮ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಇದೀಗ ಎಸ್ಪಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಹೋಟೆಲ್, ಬಾರ್‌ಗಳ ಮೇಲೆ ನಿಗಾ: ಶನಿವಾರ ರಾತ್ರಿ ಕೊಪ್ಪಳ ನಗರದ ಪ್ರಮುಖ ಹೋಟೆಲ್ ಮತ್ತು ಬಾರ್‌ಗಳಿಗೆ ಖುದ್ದು ಭೇಟಿ ನೀಡಿದ ಎಸ್ಪಿ ಸಾಹಿಲ್ ಬಾಗ್ಲಾ, ನಿಗದಿತ ಸಮಯ ಪಾಲನೆಯಾಗುತ್ತಿದೆಯೇ, ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆಯೇ, ಧೂಮಪಾನ ನಿಷೇಧಿತ ವಲಯದ ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು.ಇದೇ ವೇಳೆ ಜಿಲ್ಲೆಯ ಏಳು ತಾಲೂಕುಗಳ 18 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಒಟ್ಟು 77 ಕಡೆಗಳ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದ ಕಡೆಗಳಲ್ಲಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಕಾನೂನುಬದ್ಧ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು.
ಇಸ್ಪೀಟ್, ಮಟ್ಕಾ ವಿರುದ್ಧ ಕ್ರಮ: ಹೋಟೆಲ್ ಮತ್ತು ಬಾರ್‌ಗಳ ಪರಿಶೀಲನೆಯ ಜತೆಗೆ ಇಸ್ಪೀಟ್ ಹಾಗೂ ಮಟ್ಕಾ ಜೂಜಾಟದ ಅಡ್ಡೆಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಇಸ್ಪೀಟ್ ಜೂಜಾಟಕ್ಕೆ ಸಂಬಂಧಿಸಿದಂತೆ 19 ಪ್ರಕರಣಗಳು ಹಾಗೂ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ಎಂಟು ಪ್ರಕರಣಗಳು ದಾಖಲಾಗಿವೆ. ಒಟ್ಟು 27 ಪ್ರಕರಣಗಳನ್ನು ದಾಖಲಿಸುವ ಮೂಲಕ ಅಕ್ರಮ ಜೂಜಾಟದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಅಧಿಕಾರಿಗಳಿಗೆ ಖಡಕ್ ಸೂಚನೆ: ಜಿಲ್ಲೆಯಲ್ಲಿ ಎಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ ಎಂಬ ಮಾಹಿತಿ ತಮ್ಮ ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಸ್ಥಳಗಳಿಗೆ ಕೂಡಲೇ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಸಾಹಿಲ್ ಬಾಗ್ಲಾ ಅವರು ಭಾನುವಾರ ಬೆಳಗ್ಗೆ ಪೊಲೀಸ್ ಠಾಣೆಗಳ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯ ಬಳಿಕ ಪೊಲೀಸರು ಅಕ್ರಮ ಚಟುವಟಿಕೆ ಮೇಲೆ ನಿಗಾ ವಹಿಸಲು ಮುಂದಾದರು. ಮಧ್ಯಾಹ್ನದ ನಂತರವೂ ಕೆಲವು ಕಡೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಾಚರಣೆ ನಡೆಯದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಎಸ್ಪಿ ಮತ್ತೆ ಅಧಿಕಾರಿಗಳನ್ನು ಎಚ್ಚರಿಸಿ, ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸೂಚಿಸಿದರು. ಇದಾದ ಬಳಿಕ ಪೊಲೀಸರು ಅಕ್ರಮ ಚಟುವಟಿಕೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಳೆದ ಎರಡು ದಿನಗಳಿಂದ ಜಿಲ್ಲಾ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಅಕ್ರಮ ಚಟುವಟಿಕೆ ಮೇಲೆ ನಿಗಾ ಬಿಗಿಗೊಳಿಸಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆಯೇ ಎಂಬುದರ ಮೇಲೆ ಸಾರ್ವಜನಿಕರ ಗಮನ ನೆಟ್ಟಿದೆ.ಕಟ್ಟುನಿಟ್ಟಿನ ನಿಗಾ ವಹಿಸಿ: ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಣೆ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಎಸ್ಪಿ ಸಾಹಿಲ್ ಬಾಗ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾನೂನು ಪಾಲನೆ ಎಲ್ಲರ ಜವಾಬ್ದಾರಿಯಾಗಿದ್ದು, ಅಕ್ರಮ ಮರಳು ಸಾಗಣೆ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಅಕ್ರಮ ಚಟುವಟಿಕೆ ಕುರಿತು ಲಭ್ಯವಾಗುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳಕ್ಕೆ ಭೇಟಿ ನೀಡಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಿಯಮ ಉಲ್ಲಂಘನೆಯಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ತಪಾಸಣೆ ಮಾಡಿ, ಎಚ್ಚರಿಕೆ ನೀಡಲಾಗಿದೆ. ಕಾನೂನು ಪಾಲನೆಯಲ್ಲಿ ದೋಷ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಕೊಪ್ಪಳ ಎಸ್ಪಿ ಸಾಹಿಲ್ ಬಾಗ್ಲಾ ಹೇಳಿದರು.